ಕಾಲುವೆ ತಡೆಗೋಡೆ ತೆರವಿಗೆ ದೂರು
ಬಳ್ಳಾರಿ: ನೀರಿಗಾಗಿ ಎಲ್ಎಲ್ಸಿಯಲ್ಲಿ ಕಾಲುವೆ ಮುಂಭಾಗದ ರೈತರು ಪುನಃ ನಿರ್ಮಿಸಿಕೊಂಡಿರುವ ತಡೆಗೋಡೆಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದರೂ ನಿರ್ಲಕ್ಷಿಸುತ್ತಿರುವ ಎಲ್ಎಲ್ ಕಾಲುವೆ ಅಧಿಕಾರಿಗಳ ವಿರುದ್ಧ ರೈತರೆಲ್ಲರೂ ಸೇರಿ ಭಾನುವಾರ ಮಧ್ಯಾಹ್ನ ಇಲ್ಲಿನ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತುಂಗಭದ್ರಾ ಎಡದಂಡೆ ಕೆಳಮಟ್ಟದ ಕಾಲುವೆಯ ಕೊನೆ ಭಾಗದ ರೈತರ ಹಲವು ಹೋರಾಟಗಳ ಫಲವಾಗಿ ಇಂದು ಕಾಲುವೆಯಲ್ಲಿ ಅಗತ್ಯದಷ್ಟು ನೀರು ಪೂರೈಕೆಯಾಗುತ್ತಿದೆ. ಆದರೂ, ಕಾಲುವೆಯ ಮುಂಭಾಗದಲ್ಲಿನ ಕೆಲವು ರೈತರು ನಿರ್ಮಿಸಿಕೊಂಡಿರುವ ತಡೆಗೋಡೆಯನ್ನು ತೆರವುಗೊಳಿಸಿ ನೀರು ಹರಿಸುವಂತೆ ಕಾಲುವೆ ಅಧಿಕಾರಿಗಳಾದ ಇಇ ನಾರಾಯಣ ನಾಯ್ಕ್, ಸಹಾಯಕ ಎಂಜಿನಿಯರ್ ಗುಪ್ತ, ಲಕ್ಷ್ಮಣ ನಾಯ್ಕ್, ಸೆಕ್ಷನ್ ಆಫೀಸರ್ ಲೋಕೇಶ್ ರೆಡ್ಡಿ ಮನವಿ ಮಾಡಿಕೊಳ್ಳಲಾಗಿದೆ. ಸೆಕ್ಷನ್ ಸೂಪರಿಟೆಂಡೆಂಟ್ ಶ್ರೀನಿವಾಸ ರೆಡ್ಡಿಯವರಿಗೂ ಮಾಹಿತಿ ನೀಡಲಾಗಿದೆ ಆದರೂ, ಈ ಕ್ಷಣದ ವರೆಗೂ ಯಾವೊಬ್ಬ ಅಧಿಕಾರಿಗಳೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ರೈತ ಮುಖಂಡ ಪುರುಷೋತ್ತಮಗೌಡ, ಜಿ. ಬಸವರಾಜಗೌಡ, ಶ್ರೀಧರಗೌಡ, ಸತ್ಯನಾರಾಯಣರೆಡ್ಡಿ ದೂರಿನಲ್ಲಿ ಆರೋಪಿಸಿದ್ದಾರೆ.
ಭಾನುವಾರ ಬೆಳಗ್ಗೆ ಎಲ್ಲ ಅಧಿಕಾರಿಗಳನ್ನು ಕಾಲುವೆ ಬಳಿ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅಲ್ಲಿಗೂ ಬಾರದೆ, ತಮ್ಮ ಕುಟುಂಬದ ಸದಸ್ಯರಿಂದ ತಾವು ಮನೆಯಲ್ಲಿ ಇಲ್ಲ ಎಂಬ ಉತ್ತರ ಹೊರಡಿಸಿದ್ದರು. ಮೊಬೈಲ್ ಸ್ವಿಚ್ಆಫ್ ಆಗಿವೆ. ಆದ್ದರಿಂದ ರೈತರಿಗೆ ತೊಂದರೆಯಾಗಿದ್ದು, ನಾಪತ್ತೆಯಾಗಿರುವ ಅಧಿಕಾರಿಗಳನ್ನು ಕರೆತಂದು ರೈತರ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕೆಂದು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

