ಭಕ್ತರ ಸೆಳೆಯುತ್ತಿರುವ ಆನೆಕಲ್ಲು ಬಲವಂತಪ್ಪ
ಭೀಕರ ಬರ, ಬಿಸಿಲಿನಿಂದ ಕುಖ್ಯಾತವಾಗಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಆನೆಕಲ್ಲು ಗ್ರಾಮದ ಬಳಿ ವಿಶಾಲ ಪ್ರದೇಶದಲ್ಲಿ ಹರಡಿರುವ ಕುರುಚಲು ಅರಣ್ಯಕ್ಕೆ ಮಹಾಶಿವರಾತ್ರಿ ಸಮೀಪಿಸುತ್ತಿದ್ದಂತೆ ಎಲ್ಲಿಲ್ಲದ ಮಹತ್ವ ಬರುತ್ತದೆ. ಇದಕ್ಕೆ ಕಾರಣ, ಈ ಕುರುಚಲು ಅರಣ್ಯದ ಮಧ್ಯೆ ಮುಳ್ಳುಕಂಟಿ, ಪೊದೆಗಳ ನಡುವೆ ನೆಲೆಸಿರುವ ಲಿಂಗರೂಪಿ ಬಲವಂತಪ್ಪ.
ತನ್ನನ್ನು ಭಕ್ತಿಯಿಂದ ಪೂಜಿಸಿದ ಭಕ್ತರು ಬೇಡಿದ ವರವನ್ನು ಕರುಣಿಸುವ ಪರಮಾತ್ಮನೆಂದೇ ಈ ಬಲವಂತಪ್ಪ ಖ್ಯಾತನಾಗಿದ್ದಾನೆ. ಹೀಗಾಗಿ ಪ್ರತಿ ಮಹಾಶಿವರಾತ್ರಿ ಬಂತೆಂದರೆ ಸಾಕು, ನಾಡಿನ ವಿವಿಧ ಭಾಗಗಳಿಂದ ಅಸಂಖ್ಯಾತ ಶಿವಭಕ್ತರ ದಂಡು ಆನೆಕಲ್ಲಿನ ಕುರುಚಲು ಅರಣ್ಯದತ್ತ ಧಾವಿಸುತ್ತಾರೆ. ಮುಳ್ಳಿನ ಗಿಡ, ಪೊದೆಗಳ ನಡುವೆ ವರ್ಷಪೂರ್ತಿ ಅಜ್ಞಾತವಾಸದಲ್ಲಿರುವ ಬಲವಂತಪ್ಪನನ್ನು ಪೂಜಿಸಿ, ತಮ್ಮ ಇಷ್ಟಾರ್ಥಗಳನ್ನು ಆತನಲ್ಲಿ ನಿವೇದಿಸಿಕೊಳ್ಳುತ್ತಾರೆ.
ಹತ್ತಾರು ವರ್ಷಗಳಿಂದಲೂ ಪ್ರತಿ ಮಹಾಶಿವರಾತ್ರಿಯಂದು ನಾವು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತೇವೆ. ಇಲ್ಲಿನ ಲಿಂಗರೂಪಿ ಬಲವಂತಪ್ಪನನ್ನು ಯಾರು ತಂದು ಈ ಅಡವಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂದು ತಿಳಿದುಬರುವುದಿಲ್ಲ. ಈ ಕುರಿತು ಯಾವುದೇ ಇತಿಹಾಸ, ಪುರಾಣ ಲಭ್ಯವಾಗುವುದಿಲ್ಲ. ಆದರೆ ಅನೇಕ ವರ್ಷಗಳಿಂದ ಜನ ಪೂಜಿಸುತ್ತಾ ಬಂದಿದ್ದಾರೆ ಎನ್ನುತ್ತಾರೆ ಕಸಾಪ ಮಾಜಿ ಅಧ್ಯಕ್ಷ ಮಾತಾಗ್ಯಾಸ್ ಎರ್ರಿಸ್ವಾಮಿ.
ಬಲವಂತಪ್ಪನ ಸನ್ನಿಧಿಗೆ ಬರುವ ಭಕ್ತರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಪ್ರತಿ ಮಹಾಶಿವರಾತ್ರಿಯಂದು ಆನೆಕಲ್ಲು ಅಡವಿಯ ಬಲವಂತಪ್ಪನನ್ನು ಪೂಜಿಸಿ, ವರ ಕೇಳುವವರ ದೊಡ್ಡ ದಂಡೇ ಇಲ್ಲಿ ನೆರೆಯುತ್ತದೆ. ಹಲವು ವರ್ಷಗಳಿಂದ ನಾವೂ ಬಲವಂತಪ್ಪನ ಭಕ್ತರಾಗಿದ್ದೇವೆ, ನಮಗೆ ಒಳ್ಳೆಯದು ಆಗಿದೆ ಎನ್ನುತ್ತಾರೆ ರಾಮನಗರದ ಮುಖಂಡ ಜಿ. ಅಜ್ಜಯ್ಯ, ಡಿಶ್ ವೆಂಕಟೇಶ್.
ಮಾರ್ಗ: ಹೊಸಪೇಟೆ ಹಾಗೂ ಹರಿಹರದ ಕಡೆಯಿಂದ ಆಗಮಿಸುವವರು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಇಳಿಯಬೇಕು. ಅಲ್ಲಿಂದ ಆನೆಕಲ್ಲು ಗ್ರಾಮ ಹತ್ತು ಕಿಮೀ ದೂರವಿದೆ. ಹಗರಿಬೊಮ್ಮನಹಳ್ಳಿ- ಕೂಡ್ಲಿಗಿ ನಡುವಿನ ತೋರಣಗಲ್ಲು-ಮೈಲಾರ ರಾಜ್ಯ ಹೆದ್ದಾರಿಯಲ್ಲಿ ಆನೆಕಲ್ಲು ಗ್ರಾಮವಿದ್ದು, ಗ್ರಾಮದ ಪೂರ್ವಕ್ಕೆ ಐದಾರು ಕಿ.ಮೀ. ದೂರ ಕಾಲುದಾರಿಯಲ್ಲಿ ಸಾಗಿದರೆ ಬಲವಂತಪ್ಪನ ದರ್ಶನವಾಗುತ್ತದೆ. ಕುರುಚಲು ಅಡವಿಯಾಗಿರುವುದರಿಂದ ಪರಿಚಯಸ್ಥರು ಜತೆಯಲ್ಲಿರುವುದು ಅಗತ್ಯ. ಸೈಕಲ್, ಬೈಕ್, ಆಟೋ, ಎತ್ತಿನಬಂಡಿ ಸಾಗಲು ರಸ್ತೆ ಇದೆ. ಕೂಡ್ಲಿಗಿ ಕಡೆಯಿಂದ ಬರುವವವರು ತಾಲೂಕಿನ ದಶಮಾಪುರದ ಮೂಲಕ ಬಲವಂತಪ್ಪನ ಬಳಿಗೆ ಬರಬಹುದು. ಬರುವಾಗ ಕುಡಿಯಲು ಸಾಕಷ್ಟು ನೀರು, ಉಪಾಹಾರ ಜತೆಯಲ್ಲಿ ತರಲು ಮರೆಯಬಾರದು. ಯಾಕೆಂದರೆ ಅಲ್ಲಿ ತಿಂಡಿ, ಹನಿ ನೀರಾಗಲಿ ಸಿಗದು.
ಬಲವಂತಪ್ಪನಿರುವ ಸ್ಥಳದಲ್ಲಿ ಮೂರು, ಐದು, ಏಳು, ಒಂಬತ್ತು ಹಾಗೂ ಹನ್ನೊಂದು ದಳದ ಬಿಲ್ವಪತ್ರೆ ಸಿಗುತ್ತದೆ. ಹುಡುಕಾಡಿದರೆ ಅಗತ್ಯವಿರುವ ಗಿಡಮೂಲಿಕೆಗಳು ನಿಮ್ಮ ಕಣ್ಣಿಗೆ ಬೀಳಬಹುದು. ಈ ಸಲದ ಮಹಾಶಿವರಾತ್ರಿಯನ್ನು ಆನೆಕಲ್ಲು ಬಲವಂತಪ್ಪನ ಬಳಿ ಆಚರಿಸಬಹುದು. ಮಾಹಿತಿಗಾಗಿ ಮಾತಾಗ್ಯಾಸ್ ಎರ್ರಿಸ್ವಾಮಿ (ಮೊ. 94483-58426) ಸಂಪರ್ಕಿಸಬಹುದು.
ಆಕಸ್ಮಿಕ ಬೆಂಕಿ: ಶಾಲಾ ದಾಖಲೆ ನಾಶ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿಯ ಗಣೇಶ್ ಮಲ್ ಜೈನ್ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಕೋಣೆಗೆ ಆಕಸ್ಮಿಕ ಬೆಂಕಿ ತಗುಲಿದ ಹಿನ್ನಲೆಯಲ್ಲಿ ಶಾಲೆಯಲ್ಲಿದ್ದ ಶಾಲೆಯ ದಾಖಲೆಗಳು ಹಾಗೂ ಪ್ರಯೋಗಾಲಯದ ಉಪಕರಣಗಳು ಸುಟ್ಟಿರುವ ಘಟನೆ ಗುರುವಾರ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ. ಗ್ರಾಮ ದೇವತೆ ದುರ್ಗಾದೇವಿ ಜಾತ್ರೆಯ ಪ್ರಯುಕ್ತ ಶಾಲೆಗೆ ಸ್ಥಳೀಯ ರಜೆ ನೀಡಿದ್ದರಿಂದ ಶಾಲೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆಕಸ್ಮಿಕವಾಗಿ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಶಾಲೆಯ ಕಪಾಟುಗಳಲ್ಲಿ ಹಾಗೂ ಪಟ್ಟಿಗೆಗಳಲ್ಲಿ ಇಟ್ಟಿದ್ದ ಶಾಲಾ ದಾಖಲೆಗಳು ಮತ್ತು ವಿಜ್ಞಾನ ಪ್ರಯೋಗ ವಸ್ತುಗಳು, ಗಣಿತದ ಪಾಠೋಪಕರಣಗಳು ಮತ್ತು ಶಾಲೆಯಲ್ಲಿದ್ದ ರೇಡಿಯೊ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಸುಮಾರು ರು. 60 ಸಾವಿರಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಹೊಸಪೇಟೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬಿಎಂಎಂ ಇಸ್ಪಾತ್ ಲಿ. ಸಿಬ್ಬಂದಿಗಳು ಆಗ್ನಿಶಾಮಕ ವಾಹನದೊಂದಿಗೆ ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಸುನಂದಮ್ಮ ಹಾಗೂ ಸಿ.ಆರ್.ಸಿ ಮೇಘನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

