ತಾಪಂ ಸದಸ್ಯರಿಂದ ಅಧಿಕಾರಿಗಳ ತರಾಟೆ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮಾ. 14
ಕುಡಿವ ನೀರು, ವಿದ್ಯುತ್, ವಸತಿ, ಗಂಗಾಕಲ್ಯಾಣ, ಶಾಲೆ, ಅಂಗನವಾಡಿ ಕಟ್ಟಡ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ತಾಪಂ ಸದಸ್ಯರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ, ಕೆಲ ಕಾಲ ತಾಪಂ ಸಿಬ್ಬಂದಿಯ ಕಾರ್ಯವೈಖರಿ ಖಂಡಿಸಿ ಸದಸ್ಯರು ಸಿಟ್ಟಿಗೆದ್ದ ಪ್ರಸಂಗ ನಡೆಯಿತು.
ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀರಿಗಾಗಿ ತತ್ವಾರ, ವಿದ್ಯುತ್ ಸಮಸ್ಯೆ ತಾಂಡವವಾಡುತ್ತಿದೆ. ಹಣ ಬಿಡುಗಡೆಯಾಗಿ ವರ್ಷ ಕಳೆದರೂ ನಿಂಗಾನಹಳ್ಳಿ ತಾಂಡಾ ಮತ್ತು ಕಸಾಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಮುಂದಾಗಿಲ್ಲ. ಸಾರಿಗೆ ಅಧಿಕಾರಿಗಳು ಸಭೆಗೇ ಬರುತ್ತಿಲ್ಲ. ಅನೇಕ ಮಾರ್ಗಗಳಿಗೆ ಸರಿಯಾದ ಬಸ್ ವ್ಯವಸ್ಥೆಯಿಲ್ಲ. ಸಭೆಗೆ ಬಾರದಿದ್ದರೆ ಯಾರ ಬಳಿ ತೊಂದರೆ ಹೇಳುವುದು ಎಂದು ಸದಸ್ಯೆ ವಿಶಾಲಾಕ್ಷಿ ರಾಜಣ್ಣ ಪ್ರಶ್ನಿಸಿದರು.
ಬಿಇಓ ಗುಣಮಟ್ಟ ಪರೀಕ್ಷಿಸದೆ ಡೆಸ್ಕ್ ಖರೀದಿ ಮಾಡಿದ್ದಾರೆ. ಎಸ್ಡಿಎಂಸಿ ಗಮನಕ್ಕೆ ತಂದಿಲ್ಲ ಎಂದು ಸದಸ್ಯ ಅಯ್ಯನಹಳ್ಳಿ ಗುರುಪ್ರಸಾದ್ ಆರೋಪಿಸಿದಾಗ, ತಕ್ಷಣವೇ ನೂತನ ಬಿಇಓ ಎಂ.ಆರ್. ಮಂಜುನಾಥ ಮಾತನಾಡಿ, ಉಪನಿರ್ದೇಕಶರು ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ. ತಾವು ನಾಲ್ಕು ಶಾಲೆಗಳನ್ನು ಪರಿಶೀಲಿಸಿದ್ದೇನೆ. ಎಸ್ಡಿಎಂಸಿ ಗಮನಕ್ಕೆ ತಂದು ಡೆಸ್ಕ್ ಖರೀದಿ ಮಾಡಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ನಿಮಗೆ ಕನ್ನಡ ಬರುತ್ತಾ?: ತಾಪಂ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಸಂಬಂಧಿಸಿದಂತೆ ತಾಪಂ ಸದಸ್ಯೆ ಲಕ್ಷ್ಮಿಬಾಯಿ ಕಾಂತರಾಜ್ ಸಭೆಯ ಮಧ್ಯೆ ವಿಷಯ ಪ್ರಸ್ತಾಪಿಸಿದಾಗ ಇಓ ಅನಿರುದ್ಧ ಶ್ರವಣ್, ಸಭೆಯಲ್ಲಿ ಚರ್ಚಿಸಬೇಕಾದ ವಿಷಯ ಮಾತ್ರ ಚರ್ಚೆ ಮಾಡಿ, ನಿಮ್ಮ ವಿಷಯ ಬಂದಾಗ ನೀವು ಚರ್ಚೆ ಮಾಡಿ ಎಂದರು. ಆದರೆ ಸಮಾಧಾನಗೊಳ್ಳದ ಲಕ್ಷ್ಮೀಬಾಯಿ, ನಿಮಗೆ ಕನ್ನಡ ಓದಲು ಬರುತ್ತದೆಯೇ? ಸರಿಯಾಗಿ ಆದೇಶ ನೋಡಿ ಹಳೆಯ ಕಟ್ಟಡ ಕೆಡವಲು ಸರ್ಕಾರ ಆದೇಶಿಸಿದೆ ಎಂದು ಇಓಗೆ ಮಾತಿನ ಚಾಟಿ ಬೀಸಿದರು. ಇದರಿಂದ ವಿಚಲಿತರಾದ ಅನಿರುದ್ಧ್, ತಮಗೆ ಕನ್ನಡ ಬರುತ್ತದೆ, ನಾನು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತೇನೆ, ಬರೆಯುತ್ತೇನೆ ಎಂದು ನಯವಾಗಿಯೇ ತಿರುಗೇಟು ನೀಡಿದರು.
ತಾಪಂ ಹಳೆಯ ಕಟ್ಟಡ ಕೆಡವಲು ಸರ್ಕಾರದಿಂದ ಆದೇಶ ತಂದಿದ್ದೇವೆ ತೆಗೆದುಕೊಳ್ಳಿ ಎಂದಾಗ ನೀವು ಕಾನೂನಿನ ಚೌಕಟ್ಟಿನೊಳಗೆ ನಡೆದುಕೊಳ್ಳಿ ಎಂದು ಅನಿರುದ್ಧ ಶ್ರವಣ್ ಲಕ್ಷ್ಮಿಬಾಯಿಗೆ ತಿಳಿಸಿದಾಗ, ನನಗೆ ಕಾನೂನುಗಳು ಗೊತ್ತಿವೆ, ನಿಮ್ಮಿಂದ ಕಲಿಯಬೇಕಾಗಿಲ್ಲ. ಈಗಾಗಲೇ ತಾಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇನೆ ನನಗೆ ತಿಳಿವಳಿಕೆ ಹೇಳಲು ಬರಬೇಡಿ ಎಂದು ಕ್ಷಣ ಕಾಲ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆಯಿತು.
ತಾಪಂ ಅಧ್ಯಕ್ಷೆ ಪ್ರಮೀಳಾ ಚಿದಾನಂದಗೌಡ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ಎನ್.ಪಿ. ಮಂಜುನಾಥ, ಇಒ ಅನಿರುದ್ಧ ಶ್ರವಣ್, ತಹಸೀಲ್ದಾರ್ ಜವರೇಗೌಡ, ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

