ಬಳ್ಳಾರಿ

ಸ್ವಾರ್ಥಿ ರಾಜಕಾರಣಿಗಳ ಬಗ್ಗೆ ಎಚ್ಚರವಿರಲಿ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮಾ. 16
ವಾಲ್ಮೀಕಿ ಸಮುದಾಯ ರಾಜ್ಯದಲ್ಲಿ ದೊಡ್ಡ ಸಮುದಾಯಗಳಲ್ಲಿ ಒಂದಾಗಿದ್ದು, ಕೆಲ ರಾಜಕಾರಣಿಗಳು ಸಮಾಜದ ನಾಯಕರೆಂದು ಅಧಿಕಾರ ಪಡೆದು ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಅಂಥವರ ಬಗ್ಗೆ ಸಮಾಜದವರು ಎಚ್ಚರವಿರಬೇಕಿದೆ ಎಂದು ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಟಿ. ಈಶ್ವರ್ ಪರೋಕ್ಷವಾಗಿ ಶ್ರೀರಾಮುಲು ವಿರುದ್ಧ ಮಾತಿನ ಚಾಟಿ ಬೀಸಿದರು.
ಪಟ್ಟಣದ ಗುಡೇಕೋಟೆ ರಸ್ತೆಯಲ್ಲಿನ ಸಮುದಾಯ ಭವನ ಆವರಣದಲ್ಲಿ ನಡೆದ ಪಕ್ಷದ ಸಂಘಟನೆ ಸಭೆಯಲ್ಲಿ ಮಾತನಾಡಿ, ಭ್ರಷ್ಟರ ಹಾವಳಿಯಿಂದ ಬಳ್ಳಾರಿ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ. ಅದಕ್ಕಾಗಿ ಜನತೆ ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆಶೀರ್ವದಿಸಿದ್ದಾರೆ ಎಂದು ಹೇಳಿದರು.
ಕ್ಷೇತ್ರಮಟ್ಟದ ಕಾರ್ಯಕರ್ತರ  ಅಭಿಪ್ರಾಯದಂತೆ ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು. ಇದು ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿಯವರ ಸಿದ್ಧಾಂತವಾಗಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್ ದಕ್ಕಿದರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದರು.
ಧೈರ್ಯಗುಂದಬೇಡಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಮಾತನಾಡಿ, ರಾಜ್ಯದೆಲ್ಲೆಡೆ ಕಾಂಗ್ರೆಸ್ ಜಯ ಸಾಧಿಸಿದೆ. ಆದರೆ, ಕೂಡ್ಲಿಗಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಪಕ್ಷದ ಮುಖಂಡರ ಒಳಜಗಳವೇ ಕಾರಣ. ಯಾವುದೇ ಕಾರಣಕ್ಕೂ ಧೈರ್ಯಗುಂದದೆ ಪಕ್ಷದ ಗೆಲವಿಗೆ ಕಾರ್ಯಕರ್ತರು ಶ್ರಮಿಸಬೇಕು. ಕಾಂಗ್ರೆಸ್‌ನಲ್ಲಿರುವ ಒಳಜಗಳ, ಗುಂಪುಗಾರಿಕೆ ಮನಗಂಡು ಹೋಗಲಾಡಿಸುವ ಪ್ರಯತ್ನ ಮತ್ತು ಪಕ್ಷ ಸಂಘಟನೆಗಾಗಿ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು.
ಎಸ್ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಟಿ.ಆರ್. ರಾಮಪ್ಪ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಜನ್ನು, ಎಂಎಲ್‌ಎ ಟಿಕೆಟ್ ಆಕಾಂಕ್ಷಿಗಳಾದ ಎನ್.ಟಿ. ಬೊಮ್ಮಣ್ಣ, ನರಸಿಂಹನಗಿರಿ ವೆಂಕಟೇಶ್, ಗುಜ್ಜಲ ರಘು, ಸೋಮಪ್ಪ ನಾಯಕ, ಜಿಪಂ ಸದಸ್ಯ ಕೆ.ಎಂ. ಶಶಿಧರ, ಜಯರಾಂ ನಾಯಕ, ಕೆ. ಶಿವಪ್ಪ ನಾಯಕ, ಗುಂಡುಮುಣುಗು ತಿಪ್ಪೇಸ್ವಾಮಿ, ವಂಡ್ರಿ, ಬಾನಪ್ಪ, ವೀರಭದ್ರಪ್ಪ, ಸದಾಶಿವಪ್ಪ, ಸಣ್ಣ ಕೊತ್ಲಪ್ಪ, ತಾಪಂ ಸದಸ್ಯ ಪೂಜಾರಹಳ್ಳಿ ಮಹೇಶ್, ಎಚ್.ಕೆ. ವೆಂಕಟೇಶ್ವರ ರಾವ್, ಶಿವಯೋಗಿ, ನಾಗೇಶ್, ಬಣವಿಕಲ್ಲು ಕೊಟ್ರಗೌಡ, ಕೆ.ಎಚ್.ಎಂ. ಶೈಲಜಾ, ಮಹಿಳಾ ಘಟಕದ ಲಕ್ಷ್ಮೀದೇವಿ, ಮಂಜುಳಾ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.