ಬಳ್ಳಾರಿ

ತುಂಗಭದ್ರೆ ತುಂಬೆಲ್ಲ ಮರಳು ಮಾಫಿಯಾ...

Published On :

ಚಂದ್ರು ಕೊಂಚಿಗೇರಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮಾ. 19

ಹೊಸ ಮರಳು ನೀತಿಯಿಂದ ದಂಧೆಕೋರರಿಗೆ ಮರಳು ಲೂಟಿ ಹೊಡೆಯಲು ಹೇಳಿ ಮಾಡಿಸಿದ ವಾತಾವರಣ ನಿರ್ಮಾಣವಾಗಿದೆ. ತುಂಗಭದ್ರಾ ನದಿಯಲ್ಲಿ ಬೊಗಸೆ ಮರಳು ಇಲ್ಲದಂತೆ ಲೂಟಿ ಮಾಡಿದ್ದಾರೆ. ತಾಲೂಕಿನ ಹರವಿ ಶಿದ್ದಾಪುರದಿಂದ ನವಲಿವರೆಗೂ ನಿತ್ಯ ಯಾಂತ್ರೀಕೃತ ದೋಣಿ, ಜೆಸಿಬಿ, ಲಾರಿಗಳ ಅಬ್ಬರಕ್ಕೆ ತುಂಗಭದ್ರೆ ನಲುಗಿ ಹೋಗಿದ್ದಾಳೆ.
ಹೊಸ ಮರಳು ನೀತಿಯನ್ವಯ ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂವಿಜ್ಞಾನ, ಅರಣ್ಯ, ಪರಿಸರ ನಿಯಂತ್ರಣಾ, ಪೊಲೀಸ್, ಆರ್‌ಟಿಓ ಇಲಾಖೆ ಸೇರಿದಂತೆ ಈ ಎಲ್ಲ ಇಲಾಖೆಗಳಿಗೂ ಮರಳು ಮಾಫಿಯಾ ತಡೆಗಟ್ಟುವ ಅಧಿಕಾರವಿದ್ದರೂ, ಅಲ್ಲೊಂದು ಇಲ್ಲೊಂದು ಲಾರಿ ಹಿಡಿದು ಜಪ್ತಿ ಮಾಡಿದ್ದು ಬಿಟ್ಟರೆ ಯಾರ ಮೇಲೆಯೂ ಈ ವರೆಗೂ ಕಠಿಣ ಕ್ರಮ ಕೈಗೊಂಡಿಲ್ಲ.
ನದಿಯಲ್ಲಿ ನೀರಿಲ್ಲದ ಕಾರಣ ಮರಳು ದಂಧೆಗೆ ಸುಲಭವಾಗಿದೆ. ತಾಲೂಕಿನ ಹರವಿ, ಮೈಲಾರ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳು, ಅಂಗೂರು, ಹೊನ್ನೂರು, ನವಲಿ, ಕೋಟ್ನಿಕಲ್ಲು, ಕೊಂಬಳಿ, ಮೊದಲಗಟ್ಟ ಸೇರಿದಂತೆ ಇನ್ನಿತರ ನದಿ ತೀರದ ಗ್ರಾಮಗಳಲ್ಲಿ ಅವ್ಯಾಹತವಾಗಿ ರಾತ್ರೋರಾತ್ರಿ ಮರಳು ದಂಧೆ ನಡೆಯುತ್ತಿದೆ. ನದಿಯಲ್ಲಿ ಮರಳು ಮಾಫಿಯಾಕೋರರ ರಾಜಾರೋಷವಾಗಿ ಮರಳು ಸಾಗಣೆ ಮಾಡುತ್ತಿರುವುದನ್ನು ಹೆಮ್ಮೆಯಿಂದ ಮಾಡುತ್ತಿರುವುದು ಸವಾಲು ಹಾಕುವಂತಿದೆ. ಜಿಲ್ಲೆಯಲ್ಲಿ ಹೊಸ ಮರಳು ನೀತಿಯಿಂದ ಈವರೆಗೂ ಸರ್ಕಾರಿ ಮರಳು ಸ್ಟಾಕ್‌ಯಾರ್ಡ್‌ನಲ್ಲಿ ಬೊಗಸೆ ಮರಳು ಸಂಗ್ರಹ ಮಾಡದೇ ವಿನಾ ಕಾರಣ ದಂಧೆಕೋರರಿಗೆ ಅಧಿಕಾರಿಗಳು ಅಪ್ರತ್ಯಕ್ಷವಾಗಿ ಸಹಕಾರಿಯಾಗಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಬಲದಂಡೆ ಮರಳು ಎಡದಂಡೆಗೆ ಎತ್ತಂಗಡಿ: ಬಲದಂಡೆ ಭಾಗದಲ್ಲಿ ಸಾಕಷ್ಟು ಸಂಗ್ರಹವಾಗಿದ್ದ ಮರಳನ್ನು ಹಾವೇರಿ, ಗದಗ ಜಿಲ್ಲೆ ಮರಳು ದಂಧೆಕೋರರು ಎಡದಂಡೆಗೆ ಎತ್ತಗಂಡಿ ಮಾಡಿಕೊಂಡರೂ ಇತ್ತ ಅಧಿಕಾರಿಗಳು ನಮ್ಮ ಭಾಗಕ್ಕೆ ಬರುವುದಿಲ್ಲವೆಂಬ ನೆಪ ಹೇಳಿ ಬರುತ್ತಿದ್ದಾರೆ. ಈವರೆಗೂ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಇದರಿಂದ ಬಳ್ಳಾರಿ ಜಿಲ್ಲೆಯ ಮರಳಿನ ಆದಾಯ ಗದಗ, ಹಾವೇರಿ ಜಿಲ್ಲೆಗಳ ಪಾಲಾಗುತ್ತಿದೆ. ತಾಲೂಕಿನ 43 ಬ್ಲಾಕ್‌ಗಳನ್ನು ಗುರುತಿಸಿ, ಹರವಿ, ಬನ್ನಿಮಟ್ಟಿ, ನವಲಿಯಲ್ಲಿ ಸರ್ಕಾರಿ ಮರಳು ಸ್ಟಾಕ್‌ಯಾರ್ಡ್ ನಿರ್ಮಾಣಕ್ಕೆ 6 ತಿಂಗಳು ಕಳೆದರೂ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ.
ವರ್ಷ ಕಳೆದರೂ ಮುಗಿಯದ ಸರ್ವೇ: ಜಿಲ್ಲಾಧಿಕಾರಿ ಬಿಸ್ವಾಸ್ 2011ರಲ್ಲಿ ತುಂಗಭದ್ರಾ ನದಿ ಸರ್ವೇಗೆ ಸರ್ಕಾರಕ್ಕೆ ಪತ್ರ ಬರೆದು, ಸರ್ವೇ ಆಗದ ಹೊರತು ಯಾರು ಮರಳು ಎತ್ತುವಂತಿಲ್ಲ ಎಂಬ ಅವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈವರೆಗೂ ಸರ್ವೇ ಕಾರ್ಯ ಕೈಗೊಂಡಿಲ್ಲ. ಇದರಿಂದ ಜಿಲ್ಲೆ ಗಡಿ ಗುರುತಿಸದ ಕಾರಣ ಹಾವೇರಿ, ಗದಗ, ದಾವಣಗೆರೆ ಜಿಲ್ಲೆಯ ಮರಳು ದಂಧೆಕೋರರು ನದಿಯಲ್ಲಿನ ಮರಳನ್ನು ಸಂಪೂರ್ಣ ಲೂಟಿ ಹೊಡೆಯುತ್ತಿದ್ದಾರೆ. ಇತ್ತ ಅಧಿಕಾರಿಗಳು ನದಿ ತೀರಕ್ಕೆ ಭೇಟಿ ನೀಡಿ ಎಡದಂಡೆ ಭಾಗದ ಮರಳು ಎತ್ತುತ್ತಿದ್ದಾರೆಂದು, ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕೆಲವು ಪೋಟೋ ತೆಗೆದು ಕೈ ತೊಳೆದುಕೊಳ್ಳುತ್ತಿದ್ದಾರೆ. ಬಲದಂಡೆ ಭಾಗದ ಮರಳು ಸಾಗಾಣೆ ಮಾಡಿದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಮರಳಿನ ಸಂಪತ್ತು ಉಳ್ಳವರ ಪಾಲಾಗುತ್ತಿದೆ.
ಭಾರಿ ಪ್ರಮಾಮದ ಅಕ್ರಮ: ಈಗಾಗಲೇ ಗಣಿ ಮಾಫಿಯಾದಿಂದ ಬಳ್ಳಾರಿ ಕುಖ್ಯಾತಿ ಪಡೆದಿದೆ. ರಾಷ್ಟ್ರೀಯ ಸಂಪತ್ತು ಅದಿರನ್ನು ಲೂಟಿ ಮಾಡಿದಂತೆ ನದಿಯಲ್ಲಿನ ಮರಳು ಲೂಟಿ ಹೊಡೆದವರು ಕೋಟ್ಯಧಿಪತಿಗಳಾದರೆ, ಇತ್ತ ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಂತರ ರು ನಷ್ಟ ಉಂಟಾಗಿದೆ. ಗಣಿ ಮಾಫಿಯಾ ಮೀರಿ ನಿಂತಿರುವ ಮರಳು ಮಾಫಿಯಾ ದಂಧೆಯಿಂದ ಸ್ಥಳೀಯ ಪರಿಸರಕ್ಕೆ ಕುತ್ತು ಬಂದಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.