ನೀತಿ ಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಆದೇಶ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 27
ವಿಧಾನಸಭಾ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
ವೀಡಿಯೋ ವೀಕ್ಷಣೆ, ನಗದು ತಪಾಸಣೆ ಮತ್ತು ಜಪ್ತಿ, ವಾಹನ ತಪಾಸಣೆ ಮತ್ತು ಜಪ್ತಿ, ದಾಸ್ತಾನು ಸಾಗಾಣಿಕೆ ಪರಿಶೀಲನೆ, ವಿಶೇಷ ಸಂಚಾರಿ ತಪಾಸಣೆ ಮತ್ತು ವೀಡಿಯೋ ಕಣ್ಗಾವಲು, ಮಾಧ್ಯಮ ಸಮನ್ವಯತೆ ಸೇರಿದಂತೆ ವಿವಿಧ ತಪಾಸಣಾ ಕಾರ್ಯಗಳನ್ನು ಎಂಸಿಸಿ ತಂಡ ಕೈಗೊಳ್ಳಲಿದೆ. ಈ ಸಮಿತಿ ಅಧ್ಯಕ್ಷರಾಗಿ ಜಿಪಂ ಸಿಇಓ ಮಂಜುನಾಥ ನಾಯಕ್ ಅವರನ್ನು ನೇಮಿಸಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಅವರನ್ನು ತಂಡದ ಸದಸ್ಯರಾಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ವಟಗಲ್ ಹಾಗೂ ಭೂಮಾಪನ ಇಲಾಖೆ ಉಪನಿರ್ದೇಶಕ ಇ. ಗೋಪಾಲಯ್ಯ ಅವರನ್ನು ತಂಡದ ಸದಸ್ಯರು, ವೀಡಿಯೋ ವೀಕ್ಷಣಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದಿಂದ್ದಾರೆ.
ನಗದು ತಪಾಸಣೆ ಮತ್ತು ಜಪ್ತಿ ಕಾರ್ಯಾಚರಣೆಗಾಗಿ ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಗುರುಪ್ರಸಾದ, ವಾಹನ ತಪಾಸಣೆ ಮತ್ತು ಜಪ್ತಿಗಾಗಿ ಆರ್ಟಿಓ ನೂರ್ ಮೊಹಮ್ಮದ್ ಪಾಷಾ ಅವರನ್ನು, ದಾಸ್ತಾನು ಸಾಗಾಣಿಕೆ ಪರಿಶೀಲನೆಗಾಗಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ, ಅಬಕಾರಿ ಪರಿಶೀಲನೆಗಾಗಿ ಅಬಕಾರಿ ಇಲಾಖೆಯ ಉಪ ಆಯುಕ್ತ ಡಿ.ಎಂ. ಮೆಹಬೂಬ್ ಹಾಗೂ ಮಾಧ್ಯಮ ಸಮನ್ವಯತೆಗಾಗಿ ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸುಗಮ ಕಾರ್ಯಾಚರಣೆಗಾಗಿ ತಂಡದ ಮೇಲುಸ್ತುವಾರಿ ಅಧಿಕಾರಿ, ಸದಸ್ಯರು ಹಾಗೂ ಎಲ್ಲ ತಪಾಸಣಾ ಮತ್ತು ಪರಿಶೀಲನಾ ಅಧಿಕಾರಿಗಳಿಗೆ ಪೊಲೀಸ್ ನಿಸ್ತಂತು (ವೈರ್ಲೆಸ್), ಹೈಸ್ಪೀಡ್ ಇಂಟರ್ನೆಟ್, ಒಬ್ಬ ವೀಡಿಯೋಗ್ರಾಫರ್, ಇಬ್ಬರು ಡಾಟಾ ಎಂಟ್ರಿ ಆಪರೇಟರ್, 10 ಸಿಬ್ಬಂದಿ ಸಹಾಯಕರನ್ನಾಗಿ ಒದಗಿಸಲಾಗಿದ್ದು, 24 ಗಂಟೆಗಳ ಸಹಾಯವಾಣಿ ಸೌಲಭ್ಯ ನೀಡಲಾಗಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕ್ಷೇತ್ರ ಮಟ್ಟದ ಎಂಸಿಸಿ ತಂಡ ರಚಿಸಲಾಗಿದೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ ಪಾಲಿಕೆ ಮಟ್ಟದ ಸಂಚಾರಿ ತಪಾಸಣಾ ತಂಡ ಹಾಗೂ ಉಳಿದ ಎಲ್ಲ ಕ್ಷೇತ್ರಗಳಿಗೆ ಎಸಿ ಮಟ್ಟದ ಸಂಚಾರಿ ತಪಾಸಣಾ ತಂಡ, ಹೋಬಳಿ ಮಟ್ಟದ ಎಂಸಿಸಿ ತಂಡ ಹಾಗೂ ಗ್ರಾಮ ಪಂಚಾಯ್ತಿ ಮಟ್ಟದ ಎಂಸಿಸಿ ತಂಡ ರಚಿಸಲಾಗಿದೆ ಎಂದರು.
ಆಯಾ ವಿಧಾನಸಭಾ ಕ್ಷೇತ್ರದ ಎಂಸಿಸಿ ತಂಡದ ಮುಖ್ಯಸ್ಥರನ್ನಾಗಿ ಆಯಾ ತಾಲೂಕಿನ ತಹಸೀಲ್ದಾರ್ರನ್ನು ನೇಮಿಸಲಾಗಿದೆ. ಗ್ರಾಪಂ ಮಟ್ಟದ ತಂಡದಲ್ಲಿ ನೇಮಿಸಲಾದ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕ ಹಾಗೂ ಬಿಲ್ ಕಲೆಕ್ಟರ್, ಒಬ್ಬ ವೀಡಿಯೋಗ್ರಾಫರ್ನೊಂದಿಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 3 ಹಾಗೂ ಸಂಜೆ 4ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಪಾಳಿ ಪ್ರಕಾರ ಕಾರ್ಯನಿರ್ವಹಿಸಬೇಕು.
ಗ್ರಾಪಂ ಮಟ್ಟದ ಎಂಸಿಸಿ ತಂಡಗಳು ಗ್ರಾಪಂಗಳಿಗೆ ನೀಡಿರುವ ವೀಡಿಯೋ ಕ್ಯಾಮೆರಾಗಳನ್ನು ಬಳಕೆ ಮಾಡಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನ ಕುರಿತು ವೀಡಿಯೋ ಚಿತ್ರೀಕರಣ ನಡೆಸಬೇಕು. ರಾತ್ರಿ ವೇಳೆ ಘಟನೆಗಳನ್ನು ಚಿತ್ರೀಕರಿಸುವ ಸೌಲಭ್ಯವಿರುವ ಕ್ಯಾಮೆರಾಗಳನ್ನು ಬಳಸಬೇಕು ಎಂದಿದ್ದಾರೆ.
ಎಂಸಿಸಿ ತಂಡ ಕಂಟ್ರೋಲ್ ರೂಂ ಸ್ಥಾಪಿಸಿ ದಿನದ 24 ಗಂಟೆ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ಈ ಸಹಾಯವಾಣಿಗೆ ಮತದಾರರು, ಸಾರ್ವಜನಿಕರು, ಅಭ್ಯರ್ಥಿಗಳು, ಪಕ್ಷದ ಪದಾಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಕರೆ ಮಾಡಿ ಯಾವುದೇ ಮಾಹಿತಿ ನೀಡಿದರೂ ಸ್ವೀಕರಿಸಿ ಕಾರ್ಯೋನ್ಮುಖವಾಗುವಂತೆ ಕ್ರಮ ಕೈಗೊಳ್ಳಬೇಕು. ದೂರು ನೀಡಿದರೂ ದಾಖಲಿಸಿ ಕ್ರಮ ಜರುಗಿಸಬೇಕು. ಯಾವುದೇ ದೂರುಗಳು ಬಂದರೂ ಜಿಲ್ಲಾ ಚುನಾವಣಾಧಿಕಾರಿಗಳು, ಎಂಸಿಸಿ ತಂಡದ ಮುಖ್ಯಸ್ಥರು, ಚುನಾವಣಾಧಿಕಾರಿಗಳು, ಎಸಿ ಮಟ್ಟದ ತಂಡಕ್ಕೂ ಮಾಹಿತಿ ನೀಡಬೇಕು. ತುರ್ತು ಸಂದರ್ಭದಲ್ಲಿ ಎಸ್ಎಂಎಸ್ ಮೂಲಕ ಕಳುಹಿಸಬೇಕು. ಕನ್ನಡ ಮಾಧ್ಯಮದಲ್ಲಿರುವ ವರದಿಗಳನ್ನು ಅಗತ್ಯವಿದ್ದಾಗ ಇಂಗ್ಲಿಷಿಗೆ ತರ್ಜುಮೆ ಮಾಡಿ ವೀಕ್ಷಕರಿಗೆ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

