ಸಂಡೂರೊಂದೇ ಕಾಂಗ್ರೆಸ್ನ ಭದ್ರಕೋಟೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 27
ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಅಸ್ತಿತ್ವವೇ ಇಲ್ಲ ಎಂಬ ಸಂದರ್ಭದಲ್ಲಿ 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಜಿಲ್ಲೆಯಲ್ಲಿ ಇದೆ ಎಂಬುದನ್ನು ಸಾಧಿಸಿ ತೋರಿಸಿದ ಕ್ಷೇತ್ರ ಸಂಡೂರು ವಿಧಾನಸಭಾ ಕ್ಷೇತ್ರ. ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ ಗೆಲವು ಸಾಧಿಸಿತ್ತು. ಆದರೆ ಸಂಡೂರಿನಲ್ಲಿ ಮಾತ್ರ ಕಾಂಗ್ರೆಸ್ ಗೆಲವು ಸಾಧಿಸುವ ಮೂಲಕ ರಾಷ್ಟ್ರೀಯ ಪಕ್ಷಕ್ಕೆ ಅಸ್ತಿತ್ವ ಉಳಿಸಿದ ಕೀರ್ತಿ ಸಂಡೂರಿಗೆ ಸಲ್ಲುತ್ತದೆ. ಕ್ಷೇತ್ರದಲ್ಲಿ ಇದುವರೆಗೆ ನಡೆದ 13 ವಿಧಾನಸಭಾ ಚುನಾವಣೆ ಪೈಕಿ 11ರಲ್ಲಿ ಗೆಲವು ಸಾಧಿಸುವ ಮೂಲಕ ಸಂಡೂರು ಕ್ಷೇತ್ರ ಕಾಂಗ್ರೆಸ್ನ ಸುಭದ್ರಕೋಟೆ ಎಂಬುದನ್ನು ಸಾರಿ ಹೇಳಿದೆ. ಇಂತಹ ಕೋಟೆಗೆ ಬಿಎಸ್ಸಾರ್ ಲಗ್ಗೆ ಇಡಲು ಈಗ ಹೊರಟಿದೆ.
ರಾಜ್ಯದಲ್ಲಿ ಕಮ್ಯುನಿಸ್ಟ್ ಪಕ್ಷ ಅಸ್ತಿತ್ವದಲ್ಲೇ ಇಲ್ಲ ಮಾತಿದೆ. ಆದರೆ ಕಾಂಗ್ರೆಸ್ ಭದ್ರಕೋಟೆಯಾದ ಸಂಡೂರಿನಲ್ಲಿಯೂ 1985ರ ಚುನಾವಣೆಯಲ್ಲಿ ಸಿಪಿಐ ಪಕ್ಷದ ಯು. ಭೂಪತಿ ಕಾಂಗ್ರೆಸನ್ನು ಸೋಲಿಸಿ, ವಿಧಾನಸಭೆಗೆ ಆಯ್ಕೆಯಾಗಿದ್ದು ಇತಿಹಾಸವೇ ಸರಿ. ಈ ಭಾಗದ ಜನರಿಗೆ ಸಿಪಿಐ ಎಂದರೆ ಹೋರಾಟದ ಸಂಘಟನೆ ಎಂಬ ಕಲ್ಪನೆಯೇ ಹೊರತು ಅದೊಂದು ರಾಜಕೀಯ ಪಕ್ಷವೆಂದು ಮತದಾರ ಪರಿಗಣಿಸಿಲ್ಲ ಎಂಬುದಕ್ಕೆ ಯಾವೊಂದು ಚುನಾವಣೆಯಲ್ಲಿ ಅವರನ್ನು ಗೆಲ್ಲಿಸದಿರುವುದು ಸಾಕ್ಷಿ. ಆದರೆ 1985ರಲ್ಲಿ ಸಿಪಿಐ ಬೆಂಬಲಿಸುವ ಮೂಲಕ ಸಂಡೂರು ಮತದಾರ ಎಲ್ಲರ ಗಮನ ಸೆಳೆದಿದ್ದ. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ವೀರಭದ್ರಪ್ಪ ಅವರನ್ನು 10,120 ಮತಗಳ ಅಂತರದಲ್ಲಿ ಸಿಪಿಐ ಅಭ್ಯರ್ಥಿ ಭೂಪತಿ ಸೋಲಿಸಿದ್ದು ಇತಿಹಾಸ.
6 ಬಾರಿ ಗೆದ್ದ ಎಂ.ವೈ. ಘೋರ್ಪಡೆ: 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್. ರಾಯನಗೌಡ ಅವರು ಗೆಲವು ಸಾಧಿಸಿದರು. 1959ರಲ್ಲಿ ಅವರು ನಿಧನರಾಗಿದ್ದರಿಂದ ಮಾ. 3, 1959ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಂ.ವೈ. ಘೋರ್ಪಡೆ ಕಾಂಗ್ರೆಸ್ನಿಂದ ಜಯ ಸಾಧಿಸಿದರು. 1962ರಲ್ಲೂ ಇವರೇ ಗೆಲವು ಸಾಧಿಸಿದರು. ಇನ್ನು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 1967ರಲ್ಲಿ ಎಂ.ವೈ. ಘೋರ್ಪಡೆ ಅವರು ವಿಧಾನಸಭೆಗೆ ಇದೇ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದರು. ಇನ್ನು 1972, 1989, 1994 ಮತ್ತು 1999ರಲ್ಲಿ ಗೆಲುವು ಸಾಧಿಸುವ ಮೂಲಕ ಒಂದೇ ಕ್ಷೇತ್ರದಲ್ಲಿ 6 ಬಾರಿ ಗೆಲವು ಸಾಧಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿವಿಧ ಖಾತೆಗಳ ಸಚಿವ ಸ್ಥಾನವನ್ನು ಅಲಂಕರಿಸಿದ್ದರು.
ಘೋರ್ಪಡೆ, ಲಾಡ್ ಕುಟುಂಬಗಳ ಕಾರುಬಾರು: ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಘೋರ್ಪಡೆ ಕುಟುಂಬ, ಮತ್ತೊಂದು ಲಾಡ್ ಕುಟುಂಬ ಗೆಲ್ಲುತ್ತದೆ ಅಥವಾ ಅವರು ಬೆಂಬಲಿತ ವ್ಯಕ್ತಿಗಳು ಗೆಲ್ಲುತ್ತಾರೆ ಎಂಬುದು ಸ್ಪಷ್ಟ. 1957ರಿಂದಲೂ ಇದೇ ಪದ್ಧತಿಯಲ್ಲಿ ನಡೆದುಕೊಂಡು ಬಂದಿದೆ. ಸುಮಾರು 13 ಬಾರಿ ಚುನಾವಣೆ ನಡೆದರೆ 6 ಬಾರಿ ಘೋರ್ಪಡೆ ಆರಿಸಿ ಬಂದಿದ್ದಾರೆ. 1978ರಲ್ಲಿ ಸಿ. ರುದ್ರಪ್ಪ ಕಾಂಗ್ರೆಸ್ನಿಂದ ಗೆಲವು ಸಾಧಿಸಿದರು. 1983ರಲ್ಲಿ ಕಾಂಗ್ರೆಸ್ನಿಂದ ಲಾಡ್ ಕುಟುಂಬದ ಹಿರೋಜಿ ಲಾಡ್ ಗೆಲವು ಸಾಧಿಸಿದ್ದರು. 1985ರಲ್ಲಿ ಕಾಂಗ್ರೆಸ್ನಿಂದ ಕೆ.ಎಸ್. ವೀರಭದ್ರಪ್ಪ ಸ್ಪರ್ಧಿಸಿದ ಸಂದರ್ಭದಲ್ಲಿ ಸಿಪಿಐನ ಯು. ಭೂಪತಿ ಸ್ಪರ್ಧಿಸಿದ್ದು, ಭೂಪತಿಗೆ ಘೋರ್ಪಡೆ ಅವರು ಆಂತರಿಕವಾಗಿ ಬೆಂಬಲ ನೀಡಿದ ಫಲವಾಗಿ ಗೆಲವು ಸಾಧಿಸಿದರು.
ಸಂಡೂರು ಕಾಂಗ್ರೆಸ್ನ ಭದ್ರಕೋಟೆ: 2004ರಲ್ಲಿ ಸಂತೋಷ್ ಲಾಡ್ ಅವರು ಜೆಡಿಎಸ್ನಿಂದ ಸ್ಪರ್ಧಿಸಿ 35,544 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಇನ್ನು 2008ರಲ್ಲಿ ನಡೆದ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾದ ಹಿನ್ನೆಲೆಯಲ್ಲಿ ಘೋರ್ಪಡೆ ಹಾಗೂ ಲಾಡ್ ಕುಟುಂಬದವರು ನಿಲ್ಲಲಾಗದ ಪರಿಸ್ಥಿತಿ ಉದ್ಭವವಾಯಿತು. ಆಗ ಸಂತೋಷ್ ಲಾಡ್ ಅವರು ಈ. ತುಕಾರಂ ಅವರನ್ನು ನಿಲ್ಲಿಸುವ ಮೂಲಕ ಅವರು ಗೆಲವು ಸಾಧಿಸುವಂತೆ ಮಾಡಿ ಕಾಂಗ್ರೆಸ್ ಗೆಲವಿಗೆ ನಾಂದಿ ಹಾಡಿದ್ದರು. ಈ ಮೂಲಕ ಸಂಡೂರು ಕಾಂಗ್ರೆಸ್ ಭದ್ರಕೋಟೆಯೆಂದು ತೋರಿಸಿಕೊಟ್ಟಿತು. ಈ ಬಾರಿ ಕಾಂಗ್ರೆಸ್ನಿಂದ ತುಕಾರಾಂ ಅವರ ಹೆಸರು ಕೇಳಿಬರುತ್ತಿದೆ. ಈ ಬಾರಿಯ ಸಂಡೂರು ಕಾಂಗ್ರೆಸ್ ಪಕ್ಷದ ಭದ್ರಕೋಟೆಯೆಂದು ತೋರಿಸಿಕೊಡುತ್ತದೆಯೋ ಅಥವಾ ಬಿಎಸ್ಸಾರ್ಗೆ ಮಣಿಯುತ್ತದೆಯೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

