ಬಳ್ಳಾರಿ

ಎಪಿಕ್ ಕಾರ್ಡ್ ಪಡೆದು ಮತದಾನ ಮಾಡಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 28
ವಿಧಾನಸಭಾ ಚುನಾವಣೆ ವೇಳೆ ಒಳಗೆ ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ನೋಂದಣಿ ಮಾಡಿಸಿ ಎಪಿಕ್ ಕಾರ್ಡ್ (ಭಾವಚಿತ್ರವಿರುವ ಮತದಾನದ ಗುರುತಿನ ಚೀಟಿ) ಪಡೆದು ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕೆಂದು ಜಿಪಂ ಸಿಇಓ ಹಾಗೂ ಜಾಗೃತ ಸಮಿತಿ ಅಧ್ಯಕ್ಷ ಮಂಜುನಾಥ್ ನಾಯಕ್ ಸೂಚಿಸಿದ್ದಾರೆ.
18 ವರ್ಷ ಪೂರ್ಣಗೊಂಡ ಎಲ್ಲ ಭಾರತೀಯ ಪ್ರಜೆಗಳು ನೋಂದಣಿ ಮಾಡಿಸಬೇಕು. ಸಮಿತಿಯ ಸದಸ್ಯರು ಹಾಗೂ ವಿಶೇಷ ಆಹ್ವಾನಿತರು ಇದರ ಬಗ್ಗೆ ಜಾಗೃತಿ ಮೂಡಿಸಿ, ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಮತದಾರರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರಬಾರದು. ಮೊದಲು ಎಲ್ಲ ಮತದಾರರು ನೋಂದಣಿ ಮಾಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ನೋಂದಣಿಯಾದ ಮತದಾರ ಮತದಾನ ಮಾಡುವಂತೆ ಜಾಗೃತಿ ವಹಿಸಬೇಕು ಎಂದು ತಿಳಿಸಿದ್ದಾರೆ.
ಜಾಗೃತಿ ಮೂಡಿಸಿ: ನೋಂದಣಿಯಾಗದ ಮತದಾರರ, ಪ್ರದೇಶ, ಲಿಂಗ, ಸಮುದಾಯ ಸೇರಿದಂತೆ ಅಗತ್ಯ ವಿವರ ಸಂಗ್ರಹಿಸಬೇಕು. ನೋಂದಣಿಯಾಗದಿರುವುದಕ್ಕೆ ಸಕಾರಣ ತಿಳಿದುಕೊಂಡು ಸುಲಲಿತವಾಗಿ ಇತ್ಯರ್ಥ ಪಡಿಸಬೇಕು. ಜಿಲ್ಲೆಯ ಪ್ರತಿ ಆಸ್ಪತ್ರೆಗಳಲ್ಲಿ ಟಿವಿಗಳಿದ್ದು, ಮತದಾನ ಜಾಗೃತಿ ಕುರಿತು ಚುನಾವಣಾ ಆಯೋಗ ನೀಡುವ ಸಿಡಿ ಮೂಲಕ ಆಸ್ಪತ್ರೆಗೆ ಆಗಮಿಸುವ ಪೋಷಕರಲ್ಲಿ (ರೋಗಿಗಳು) ಜಾಗೃತಿ ಮೂಡಿಸಬೇಕು. ಹಿರಿಯ ಸಹಾಯಕರು, ಆಶಾ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮತದಾನದ ಕುರಿತು ತಿಳಿಸಬೇಕು. ಎಲ್ಲ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ತಕ್ಷಣದಿಂದ ಸುತ್ತೋಲೆ ಹೊರಡಿಸಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದ್ದಾರೆ.
ಪ್ರಭಾತ ಪೇರಿ ನಡೆಸಿ: ಏ. 1ರಂದು ಪ್ರತಿ ಶಾಲೆಗಳಲ್ಲಿ ಪ್ರಭಾತಪೇರಿ ನಡೆಸಿ ಜಾಗೃತಿ ಮೂಡಿಸಬೇಕು. ಎಲ್ಲ ಚಲನಚಿತ್ರ ಮಂದಿರಗಳಲ್ಲಿ ವಿಶ್ರಾಂತಿ ಸಂದರ್ಭದಲ್ಲಿ ಸ್ಲೈಡ್ಸ್ಗಳನ್ನು ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಡಿಡಿಪಿಐಗೆ ಸೂಚಿಸಿದರು. ಕೃಷಿಕ ಸಮಾಜದ ಸಭೆ ಕರೆದು ಜಾಗೃತಿ ಮೂಡಿಸಬೇಕು ಎಂದು ಕೃಷಿ ಇಲಾಖೆಯವರಿಗೆ ಸೂಚಿಸಿದರು. ಪ.ಜಾತಿ, ಪ. ಪಂಗಡ ಹಾಗೂ ಹಿಂದುಳಿದ ವರ್ಗಗಳವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಹೆಸರನ್ನು ನೋಂದಾಯಿಸಿ, ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು. 18 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು. ಕಾರ್ಯಾಗಾರಗಳನ್ನು ಏರ್ಪಡಿಸಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಬಿಸಿಎಂ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕೈಗಾರಿಕಾ ಕಾರ್ಮಿಕರು, ನೌಕರರು ಕೈಗಾರಿಕಾ ಪ್ರದೇಶದ ಮಂಡಳಿ, ನಿಗಮಗಳ ವತಿಯಿಂದ ಮತದಾನ ಕುರಿತು ಜಾಗೃತಿ ಮೂಡಿಸಬೇಕು. ಫಲಕಗಳನ್ನು (ಬ್ಯಾನರ್) ಅಳವಡಿಸಬೇಕು. ಜಾಗೃತಿ ಸಿಡಿಗಳನ್ನು ಕೈಗಾರಿಕೆಗಳಲ್ಲಿ ಬಿತ್ತರಿಸಿ ವ್ಯಾಪಕ ಪ್ರಚಾರ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ತಿಳಿಸಿದ್ದಾರೆ. ಜಿಲ್ಲಾ ವಾರ್ತಾಧಿಕಾರಿಗಳು ತಂಡದ ಸಮನ್ವಯಾಧಿಕಾರಿಯಾಗಿದ್ದು, ಈ ಎಲ್ಲ ಅನುಷ್ಠಾನದ ಕುರಿತು ಕಾಲ ಕಾಲಕ್ಕೆ ಮಾಹಿತಿ ಸಂಗ್ರಹಿಸಿ ಸಮಿತಿಯ ಅಧ್ಯಕ್ಷರಿಗೆ ವರದಿ ನೀಡಬೇಕು.
ಅರ್ಹ ಮತದಾರರ ನೊಂದಣಿಗೆ ಯಾವುದೇ ವಿಳಂಬ ಮಾಡದೆ ಸಹಕರಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಸದರಿ ವಿಷಯದಲ್ಲಿ ಉದಾಸೀನತೆ ತೋರಿದಲ್ಲಿ ಶಿಸ್ತು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.