ವೈಯಕ್ತಿಕ ವರ್ಚಸ್ಸಿನದೇ ಮೇಲಾಟ
ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 28
ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಹಿಡಿತದಲ್ಲಿತ್ತು. ಎಂಪಿಪಿ ರಾಜಕೀಯಕ್ಕೆ ಪ್ರವೇಶಕೊಟ್ಟ ನಂತರದಲ್ಲಿ ಕಾಂಗ್ರೆಸ್ ತನ್ನ ಛಾಪನ್ನು ಕಳೆದುಕೊಂಡಿತು. ಇಷ್ಟಾದರೂ ಎಂಪಿಪಿ ಕೂಡ 3 ಬಾರಿ ಕಾಂಗ್ರೆಸ್ ವಿರುದ್ಧ ಸೋಲುಣ್ಣಬೇಕಾಯಿತು. ಈ ಕ್ಷೇತ್ರದಲ್ಲಿ ಎಂ.ಪಿ. ಪ್ರಕಾಶ್ 4 ಬಾರಿ ಗೆಲವು ಸಾಧಿಸಿ ಗ್ರಾಮೀಣಾಭಿವೃದ್ಧಿ, ಗೃಹಸಚಿವ, ಉಪಮುಖ್ಯಮಂತ್ರಿಯಾಗುವ ಮೂಲಕ ಬಳ್ಳಾರಿಯ ರಾಜಕೀಯದಲ್ಲಿ ಉತ್ತಮ ಹಿಡಿತ ಸಾಧಿಸಿದರು.
ಕಾಂಗ್ರೆಸ್ನಿಂದ ಹ್ಯಾಟ್ರಿಕ್ ಗೆಲುವು: 1957ರಿಂದ ಇಲ್ಲಿವರೆಗೆ ಕ್ಷೇತ್ರದಲ್ಲಿ 12 ಚುನಾವಣೆಗಳು ನಡೆದಿದ್ದು, ಅದರಲ್ಲಿ 6 ಬಾರಿ ಕಾಂಗ್ರೆಸ್ ಗೆಲವು ಸಾಧಿಸಿ ಪಾರುಪತ್ಯ ಮೆರೆದಿತ್ತು. 1957ರ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ನ ಎಂ.ಪಿ. ಮರಿಸ್ವಾಮಯ್ಯ ಗೆಲವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಅಂಕಿತ ಹಾಕಿದರು. ಪಿಎಸ್ಪಿ ಪಕ್ಷದ ಅಂಗಡಿ ಚೆನ್ನಬಸಪ್ಪ ಅವರು 1962ರ ಚುನಾವಣೆಯಲ್ಲಿ ಗೆಲವು ಸಾಧಿಸಿದರು. 1967ರಲ್ಲಿ ಕಾಂಗ್ರೆಸ್ನಿಂದ ಎನ್.ಎಂ. ಕೊಟ್ರಬಸಯ್ಯ ಸೋಗಿ, 1972ರಲ್ಲಿ ಸಿ. ಅಂದಾನಪ್ಪ, 1978ರಲ್ಲಿ ಕರಿಸಬವನಗೌಡ ಕೋಗಳಿ ಅವರು ಗೆಲವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿತು.
ಕಾಂಗ್ರೆಸನ್ನು ಸೋಲಿಸಿದ ಎಂಪಿಪಿ: 1978ರಲ್ಲಿ ಎಂ.ಪಿ. ಪ್ರಕಾಶ್ ಅವರು ವಿಧಾನಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಜೆಎನ್ಪಿ ಪಕ್ಷದಿಂದ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ನ ಕರಿಬಸವನಗೌಡ ವಿರುದ್ಧ ಸೋಲುಂಡರು. 1983ರ ಚುನಾವಣೆಯಲ್ಲಿ ಜೆಎನ್ಪಿ ಪಕ್ಷದಿಂದ ಸ್ಪರ್ಧಿಸಿದ ಎಂ.ಪಿ. ಪ್ರಕಾಶ್ ಕಾಂಗ್ರೆಸ್ನ ಬಿ. ಲಂಕೆಪ್ಪ ಅವರನ್ನು 15,021 ಮತಗಳ ಅಂತರದಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆಯ ಮೆಟ್ಟಿಲೇರಿದರು. ಆ ಮೂಲಕ ಕಾಂಗ್ರೆಸ್ಗೆ ಬ್ರೇಕ್ ಹಾಕಿದರು. 1985ರ ಚುನಾವಣೆಯಲ್ಲೂ ಹೂವಿನಹಡಗಲಿ ಮತದಾರ ಎಂಪಿಪಿ ಅವರನ್ನು ಕೈ ಬಿಡದೇ ಜೆಎನ್ಪಿ ಪಕ್ಷಕ್ಕೆ ಮತ ನೀಡಿ ಆರಿಸಿ ತಂದರು.
ಕಾಂಗ್ರೆಸ್ ವಿರುದ್ಧ ಸೋಲುಂಡ ಎಂಪಿಪಿ: 1989ರಲ್ಲಿ ಎಂ.ಪಿ. ಪ್ರಕಾಶ್ ಅವರು ಹ್ಯಾಟ್ರಿಕ್ ಸಾಧನೆ ಮಾಡಲು ಜನತಾದಳ ಪಕ್ಷದಿಂದ ಆದೃಷ್ಟ ಪರೀಕ್ಷೆಗಿಳಿದರು. ಕಾಂಗ್ರೆಸ್ನ ಈ.ಟಿ. ಶಂಬುನಾಥ್ ಅವರು ಎಂಪಿಪಿ ಅವರನ್ನು 2,529 ಮತಗಳಿಂದ ಸೋಲಿಸಿದರು. ಈ ಮೂಲಕ 6 ವರ್ಷ ಪ್ರಾಬಲ್ಯ ಕಳೆದುಕೊಂಡ ಕಾಂಗ್ರೆಸ್ ಕ್ಷೇತ್ರದಲ್ಲಿ ತನ್ನ ಬಾವುಟ ಆರಿಸಿತು. ಆದರೆ 1994ರಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಸ್ಥಾಪಿಸಿಕೊಳ್ಳಲು ಮತ್ತೊಮ್ಮೆ ವಿಫಲವಾಯಿತು. ಜನತಾದಳದಿಂದ ಸ್ಪರ್ಧಿಸಿದ್ದ ಪ್ರಕಾಶ್ 26,711 ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ 3ನೇ ಬಾರಿ ಜಯದ ನಗೆ ಬೀರಿದರು. 1999ರ ಚುನಾವಣೆಯಲ್ಲಿ ಕಾಂಗ್ರೆಸ್ನ ವಿ.ಬಿ. ಹಾಲಪ್ಪ 3,090 ಮತಗಳ ಅಂತರದಿಂದ ಎಂಪಿಪಿ ಅವರನ್ನು ಸೋಲಿಸುವ ಮೂಲಕ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.
ಪ್ರಥಮ ಬಾರಿಗೆ ಅರಳಿದ ಕಮಲ: ಹೀಗೆ ಎಂ.ಪಿ. ಪ್ರಕಾಶ್ ಹಾಗೂ ಕಾಂಗ್ರೆಸ್ ಮಧ್ಯೆ ಕ್ಷೇತ್ರದಲ್ಲಿ ಪೈಪೋಟಿ ನಡೆಯುತ್ತಾ ಸಾಗಿತ್ತು. ಪಕ್ಷಕ್ಕಿಂತಲೂ ಎಂಪಿಪಿ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸು ಮೂಡಿಸಿದ್ದರು. 2004ರ ಚುನಾವಣೆಯಲ್ಲಿ ಎಂಪಿಪಿ ಅವರು ಜೆಡಿಎಸ್ನಿಂದ ಸ್ಪರ್ಧಿಸಿ, ಕಾಂಗ್ರೆಸ್ನ ವಿ.ಬಿ. ಹಾಲಪ್ಪ ಅವರನ್ನು 33,786 ಮತಗಳ ಭಾರಿ ಅಂತದಿಂದ ಸೋಲಿಸಿದರು. ನಂತರ ಅವರೇ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡರು. ಬದಲಾದ ಸನ್ನಿವೇಶದಲ್ಲಿ 2008ರಲ್ಲಿ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಯಿತು. ಈ ಹಿನ್ನೆಲೆಯಲ್ಲಿ ಎಂ.ಪಿ. ಪ್ರಕಾಶ ಅವರು ಅನಿವಾರ್ಯವಾಗಿ ಪಕ್ಕದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಸ್ಪರ್ಧಿಸಿ ಸೋಲುಂಡರು. ಇನ್ನು ಹೂವಿನಹಡಗಲಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಅವರ ಪ್ರಾಬಲ್ಯದಿಂದ ಬಿಜೆಪಿಯ ಬಿ. ಚಂದ್ರನಾಯ್ಕ್ ಗೆಲುವಿನ ನಗೆ ಬೀರಿದರು. ಆ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿತು.
ಈ ಬಾರಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮರಿಸ್ಥಾಪಿಸುತ್ತಾ ಅಥವಾ ಬಿಜೆಪಿ ಎರಡನೇ ಬಾರಿಯು ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ? ಬಿಎಸ್ಸಾರ್, ಜೆಡಿಎಸ್, ಕೆಜೆಪಿ ಪಕ್ಷಗಳ ಪ್ರಭಾವವು ಫಲಿತಾಂಶ ವ್ಯತ್ಯಾಸದಲ್ಲಿ ಪರಿಣಾಮ ಬೀರುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

