ನಾಲ್ಕು ಗ್ರಾಮಗಳಿಗೆ ಮಳೆ ಎಂದರೆ ಭಯ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮೇ 4
ಮಳೆಗಾಲವೆಂದರೆ ರೈತರಿಗೆ ಎಲ್ಲಿಲ್ಲದ ಖುಷಿ, ಸಂತಸ ಆದರೆ ಕೂಡ್ಲಿಗಿ ತಾಲೂಕಿನ ನಾಲ್ಕಾರು ಹಳ್ಳಿಗಳ ಜನತೆಗ ಮಾತ್ರ ಹತ್ತಾರು ವರ್ಷಗಳಿಂದ ಮಳೆಗಾಲ ಎಂದರೆ ಭಯ. ಮಳೆಯ ಜತೆಗೆ ಬರುವ ಸಿಡಿಲು ಇಲ್ಲಿನ ಜನರ ಹಾಗೂ ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ತರುತ್ತಿದೆ. ಹೀಗಾಗಿ ಇಲ್ಲಿನವರಿಗೆ ಮಳೆ ಎಂದರೆ ಭಯ.
ಗುರುವಾರ ಸಿಡಿಲು ಬಡಿದು ನಾಗರಹುಣಿಸೆ ಗ್ರಾಮದ 102 ಕುರಿಗಳು ಸಾವನ್ನಪ್ಪಿದ್ದು, ಈ ಭಾಗದ ಬಡ ರೈತರು, ಕುರಿಗಾಹಿಗಳು ಆತಂಕದಲ್ಲಿದ್ದಾರೆ. ಈಗ್ಗೆ ಹತ್ತಾರು ವರ್ಷಗಳಿಂದ ಪ್ರತಿ ಬಾರಿ ಮಳೆಗಾಲಕ್ಕೂ ಮುನ್ನ ಒಂದಿಲ್ಲೊಂದು ಜೀವಹಾನಿ ಸಿಡಿಲಿನಿಂದ ಆಗುತ್ತದೆ. ಈ ಭಾಗದಲ್ಲೇ ಯಾಕೆ ಸಿಡಿಲಿನ ಅಬ್ಬರ ಜೋರಾಗಿರುತ್ತದೆ ಎಂಬುದು ಇಲ್ಲಿನ ಜನತೆಯ ಯಕ್ಷ ಪ್ರಶ್ನೆಯಾಗಿದೆ.
ಹಲವು ಸಾವು-ನೋವು: ಕೂಡ್ಲಿಗಿ ತಾಲೂಕು ಗುಡೇಕೋಟೆ ಹೋಬಳಿಯ ರಾಮದುರ್ಗ, ಕುದುರೆಡವು, ಕುದುರೆಡವು ಗೊಲ್ಲರಹಟ್ಟಿ, ನಾಗರಹುಣಿಸೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರತಿ ಮಳೆಗಾಲದಲ್ಲಿ ಸಿಡಿಲು ಅಪ್ಪಳಿಸಿ ಜನರ, ಕುರಿ, ದನ ಸೇರಿದಂತೆ ಜೀವಹಾನಿಯಾಗುತ್ತದೆ.
ಕಳೆದ ವರ್ಷ ಕುದುರೆಡವು ಗೊಲ್ಲರಹಟ್ಟಿಯ 19 ವರ್ಷದ ಬಾಲಕಿ ಚಿತ್ತಮ್ಮ ಸಿಡಿಲಿಗೆ ಬಲಿಯಗಿದ್ದಳು. ಅಲ್ಲದೇ ರಾಮದುರ್ಗ, ಕುದುರೆಡವು ಗೊಲ್ಲರಹಟ್ಟಿ ರೈತರ 80ಕ್ಕೂ ಹೆಚ್ಚು ಕುರಿಗಳಿಗೂ ಸಿಡಿಲು ಬಡಿದು ಸಾವನ್ನಪ್ಪಿದ್ದವು. ಹಿಂಗಾರು ಮಳೆಯಲ್ಲಿ ಕುದುರೆಡವು ಗ್ರಾಮದ ರೈತನೊಬ್ಬ ಬಿತ್ತನೆ ಮಾಡುವಾಗ ಮಳೆ ಬಂದಿದ್ದರಿಂದ ಎತ್ತುಗಳನ್ನು ಮರದ ಕೆಳಗೆ ನಿಲ್ಲಿಸಿದಾಗ ಎತ್ತೊಂದಕ್ಕೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ರಾಮದುರ್ಗ ಕ್ರಾಸ್ ವ್ಯಾಪ್ತಿಯಲ್ಲಿ ಸಿಡಿಲು ಬಡಿದ 3 ದಾರುಣ ಘಟನೆಗಳು ನಡೆದಿವೆ. ಈ ವರ್ಷದ ಮಳೆಗಾಲದ ಆರಂಭದಲ್ಲೇ ಮೇ 2ರಂದು ಸಿಡಿಲಿಗೆ 102 ಕುರಿಗಳು ಬಲಿಯಾಗಿವೆ.
ಅನೇಕ ವರ್ಷಗಳಿಂದ ನಮ್ಮಳ್ಳಿಗಳಲ್ಲಿ ಸಿಡಿಲಿನ ಅರ್ಭಟ ಜೋರಾಗಿದೆ. ಈ ಹಿಂದೆ ಪಕ್ಕದ ಕುದುರೆಡವು ಗ್ರಾಮದ ಭೀಮಪ್ಪ ಎನ್ನುವ ರೈತ ಸಿಡಿಲಿನಿಂದ ಸತ್ತಿದ್ದಾನೆ. ಪ್ರತಿವರ್ಷ ಜನತೆ ಸಾಯ್ತಾರೆ, ಇಲ್ಲಾಂದ್ರೆ ದನಕರು, ಕುರಿಗಳು ಬಲಿಯಾಗುತ್ತವೆ. ನಮ್ಮೂರ ಸುತ್ತಮುತ್ತನೇ ಯಾಕೆ ಸಿಡಿಲು ಹಾನಿ ಮಾಡುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಸಿಡಿಲು ನಿರೋಧಕವನ್ನು ಈ ಭಾಗದಲ್ಲಿ ಅಳವಡಿಸಿದರೆ ಸಿಡಿಲಿನ ಹಾನಿ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಸರ್ಕಾರ ಅದನ್ನು ಮಾಡಿದರೆ ಒಳ್ಳೆಯದು ಎನ್ನುತ್ತಾರೆ ರಾಮದುರ್ಗದ ಚನ್ನಪ್ಪ.
ನೂರು ಕುರಿ ಸತ್ತರೂ ಒಂದೇ ಕುರಿಗೆ ಪರಿಹಾರ: ಸಿಡಿಲು ಬಡಿದು ಒಬ್ಬ ರೈತನ ನೂರು ಕುರಿ ಸತ್ತರೂ ಸರ್ಕಾರದಿಂದ ಪರಿಹಾರ ಸಿಗುವುದು ಒಂದೇ ಕುರಿಗೆ. 2005ಕ್ಕು ಮುನ್ನ ಒಬ್ಬ ರೈತನ 10 ಕುರಿ ಸತ್ತರೂ ಹತ್ತು ಕುರಿಗೂ ಸರ್ಕಾರ ಪರಿಹಾರ ನೀಡುತ್ತಿತ್ತು. ಆದರೆ ಈಗ ಒಂದೇ ಜಾನುವಾರಿಗೆ ಮಾತ್ರ ಪರಿಹಾರ ದೊರೆಯುತ್ತಿದೆ. ಎರಡು ಎತ್ತುಗಳು ಸತ್ತರೆ ಒಂದೇ ಎತ್ತಿಗೆ ಪರಿಹಾರ ನೀಡುತ್ತಾರೆ. ಹೀಗಾಗಿ ಕುರಿಗಾಹಿಗಳು, ರೈತರು ಲಕ್ಷಾಂತರ ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿಯೇ ಮಳೆಗಾಲದ ಆರಂಭದಲ್ಲಿ ಒಂದು ಕಡೆ ಸಂತೋಷ ಮತ್ತೊಂದು ಕಡೆ ದುಃಖ ಈ ಭಾಗದ ರೈತರಿಗಿದೆ.
ಕಡಿಮೆ ಪರಿಹಾರ ನೀಡುತ್ತಿರುವ ಬಗ್ಗೆ ತಾಲೂಕು ಆಡಳಿತವನ್ನು ಕೇಳಿದರೆ ಸರ್ಕಾರದ ನಿಯಮವೇ ಹೀಗಿದೆ. ನಾವೇನು ಮಾಡೋದು ಎನ್ನುತ್ತಾರೆ ಪ್ರಕೃತಿ ವಿಕೋಪ ವಿಭಾಗದ ಅಧಿಕಾರಿಗಳು. ಇದಲ್ಲದೇ ಪೊಲೀಸ್ ವರದಿ, ಅಗ್ನಿಶಾಮಕ ವರದಿ, ವೈದ್ಯರ ವರದಿಗಾಗಿ ರೈತರು ಹಲವು ಕಡೆಗೆ ಅಲೆದಾಡಬೇಕಾಗುತ್ತದೆ. ಮನುಷ್ಯನಿಗೆ ಸಿಡಿಲಿ ಬಡಿದು ಸತ್ತರೆ ಮಾತ್ರ ಈಗ ರು. 1.50 ಲಕ್ಷ ಪರಿಹಾರ ನೀಡುತ್ತಿದೆ. ಜಾನುವಾರುಗಳ ಜೀವಕ್ಕೆ ಬೆಲೆ ಇಲ್ಲವಾದರೂ ಮನುಷ್ಯನಿಗೆ ಮಾತ್ರ ಸರ್ಕಾರ ಬೆಲೆ ನೀಡುತ್ತಿದೆ. ಸರ್ಕಾರ ಪರಿಸರ ವಿಜ್ಞಾನಿಗಳಿಂದ ಈ ಭಾಗದಲ್ಲಿ ಸಮೀಕ್ಷೆ ನಡೆಸಿ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕಿದೆ.
-ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

