ಬಸವ ವಸತಿ ಯೋಜನೆಯಡಿ ಅವ್ಯವಹಾರ: ತನಿಖೆ
ಹಗರಿಬೊಮ್ಮನಹಳ್ಳಿ: ಬಡವರ ಸೂರಿನ ಸಮಸ್ಯೆಯ ಶಾಶ್ವತ ನಿವಾರಣೆಗಾಗಿ ಬಸವ ವಸತಿ ಯೋಜನೆಯಡಿ ಬಿಜೆಪಿ ಆಡಳಿತದಲ್ಲಿ ಕ್ಷೇತ್ರಕ್ಕೆ ಮುಂಜೂರಾಗಿದ್ದ 6700 ಮನೆಗಳ ನಿರ್ಮಾಣ ಕಾರ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಅವ್ಯವಹಾರ ನಡೆದಿದ್ದು, ಇಡೀ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ನೂತನ ಶಾಸಕ ಎಸ್. ಭೀಮಾನಾಯ್ಕ ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ ಹಳೇಹಗರಿಬೊಮ್ಮನಹಳ್ಳಿ ಬಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2008ರಿಂದ ಇಲ್ಲಿಯವರೆಗೂ 5 ವರ್ಷಗಳಲ್ಲಿ ಕ್ಷೇತ್ರಕ್ಕೆ ಮುಂಜೂರಾಗಿರುವ ಬಸವ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಮತ್ತು ಮನೆಗಳ ನಿರ್ಮಾಣ ವಿಚಾರದಲ್ಲಿ ಸಾಕಷ್ಟು ಭ್ರಷ್ಟಾಚಾರ, ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ನಾನು ಹಲವು ಬಾರಿ ಪ್ರಶ್ನಿಸಿದ್ದೆ. ಈ ಸಂಬಂಧವಾಗಿ 5 ವರ್ಷಗಳಿಂದಲೂ ಪ್ರತಿಭಟನೆ, ಹೋರಾಟಮಾಡಿ ಅವ್ಯವಹಾರ ಬಯಲಿಗೆ ತರಲು ಪ್ರಯತ್ನಿಸಿದ್ದೆ. ಈಗ ನಾನು ಶಾಸಕನಾಗಿದ್ದು, ಇಡೀ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿ, ಇಲ್ಲಿಯವರೆಗೆ ಆಗಿರುವ ಎಲ್ಲ ಅವ್ಯವಹಾರಗಳಿಗೆ ಕೊನೆಹಾಡುವೆ ಎಂದರು.
ಮನೆ ನಿರ್ಮಿಸಲು ಅವಕಾಶ: 5 ವರ್ಷದ ಅವಧಿಯಲ್ಲಿ ಹಿಂದಿನ ಶಾಸಕರು ಬಸವ ವಸತಿ ಸೇರಿದಂತೆ ಎಲ್ಲ ವಸತಿ ಯೋಜನೆಗಳನ್ನು ತಮಗೆ ಅನುಕೂಲವಾಗುವಂತಹ ಏಜೆನ್ಸಿಗಳಿಗೆ ನೀಡಿದ್ದರು. ಆದರೆ ಇನ್ನೂ ಮುಂದೆ ಈ ಕ್ಷೇತ್ರದಲ್ಲಿ ಅಂಥ ಯಾವುದೇ ಏಜೆನ್ಸಿಗಳಿಗೆ ಅವಕಾಶವನ್ನು ನಾನು ಕೊಡಲಾರೆ, ಫಲಾನುಭವಿಗಳೇ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡುವೆ ಎಂದರು.
ಕ್ಷೇತ್ರದಲ್ಲಿರುವ ಕೆರೆ, ಕುಂಟೆಗಳ ಬಗ್ಗೆ ಸರಿಯಾದ ವಿವರಗಳನ್ನು ಅಧಿಕಾರಿಗಳಿಂದ ಪಡೆದುಕೊಂಡು, ತುಂಗಭದ್ರಾ ಹಾಗೂ ಭದ್ರಾ ಮೇಲ್ದಂಡೆಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತಂತೆ ಸಮಗ್ರವಾಗಿ ವರದಿ ಸಿದ್ಧಪಡಿಸಿ, ಆ ಮೂಲಕ ಕ್ಷೇತ್ರದಲ್ಲಿನ ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಯೋಜನೆಯನ್ನು ಜಾರಿಗೊಳಿಸಲು ಹೋರಾಟ ಮಾಡುವೆ. ಕ್ಷೇತ್ರದ ಜೀವನಾಡಿ ಮಾಲ್ವಿ ಡ್ಯಾಂಗೆ ನೀರೊದಗಿಸುವ ಯೋಜನೆಯ ಬಗ್ಗೆ ರಾಜ್ಯ ಸರ್ಕಾರದ ಗಮನವನ್ನು ಸೆಳೆಯುವ ಕೆಲಸ ಮಾಡಿ, ಈ ಐದು ವರ್ಷದಲ್ಲಿ ಮಾಲ್ವಿ ಜಲಾಶಯಕ್ಕೆ ನೀರೊದಗಿಸುವ ಯೋಜನೆಯನ್ನು ಜಾರಿಗೊಳಿಸಲು ಯತ್ನಿಸುವೆ ಎಂದರು.
ಮುಂಜಾಗ್ರತಾ ಕ್ರಮ: ಕ್ಷೇತ್ರದಲ್ಲಿನ ಕುಡಿವ ನೀರಿನ ಸಮಸ್ಯೆ ನಿವಾರಣೆ, ಮುಂಗಾರು ಹಂಗಾಮಿನಲ್ಲಿ ಬೀಜ, ಗೊಬ್ಬರದ ಕೊರತೆ ಆಗದಂತೆ ನಿಗಾ ವಹಿಸಲು ಶೀಘ್ರದಲ್ಲಿಯೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭೀಮಾನಾಯ್ಕ ಹೇಳಿದರು.
ಜೆಡಿಎಸ್ ಹಿರಿಯ ಮುಖಂಡರಾದ ಕುರಿಶಿವಮೂರ್ತಿ, ಹೂಗಾರಮಲ್ಲಣ್ಣ, ಬನ್ನಿಗೋಳ ವೆಂಕಣ್ಣ, ಎಚ್.ಎಂ. ಚೋಳರಾಜ, ಅಡಿಟರ್ ನಟರಾಜ, ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ, ರೈತ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಉಡೇದ್ ಗುರುಬಸವರಾಜ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಹಂಚಿನಮನಿ ಹನುಮಂತಪ್ಪ, ಕೊಲಿಮಿರಹಿಮಾನ್, ಸೋಗಿ ಕೊಟ್ರೇಶ್, ಬಂಗಾರಿ ಗಾಳಿರಾಜ, ಸದಸ್ಯರಾದ ತತ್ತಿಖಾಸೀಂ, ಸಂಪತ್ ಕುಮಾರ್, ತಾಪಂ ಮಾಜಿ ಸದಸ್ಯರಾದ ಚಿಂತ್ರಪಳ್ಳಿ ದೇವೇಂದ್ರ, ಆರ್. ವೆಂಕಟೇಶ್, ಗಂಡಿ ಬಸವರಾಜ, ವರದಾಪುರ ಕುಮಾರ, ಪ್ರಮೋದ್ ವಾಲ್ಮೀಕಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

