ಕರಪತ್ರ ಅಂಟಿಸಿದ ಹುಡುಗನೀಗ ಸಚಿವ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 18
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಜಾರಿ ಮಾಡಲಾಗಿದ್ದ ಸಾಕ್ಷರತಾ ವಿಜಯ ಕಾರ್ಯಕ್ರಮದಡಿಯ ಸಾಕ್ಷರತಾ ಸಂಯೋಜಕ ಕೆಲಸ ಮಾಡಿ, ಹತ್ತಾರು ಜನರಿಗೆ ಅಕ್ಷರದ ಅರಿವು ಮೂಡಿಸಿ, ಕರಪತ್ರ ಅಂಟಿಸಿದ್ದ ಹುಡುಗನೀಗ ಸಚಿವರಾಗುವ ಮಟ್ಟಕ್ಕೆ ಬೆಳೆದಿದ್ದಾನೆ.
ಹೌದು... ಇದು ಆಶ್ಚರ್ಯವಾದರೂ ಸತ್ಯ, ಆರಂಭದಲ್ಲಿ ಆಗಿನ ಬಳ್ಳಾರಿ ಜಿಲ್ಲೆಯಲ್ಲಿ 1992-93ರಲ್ಲಿ ಜಾರಿ ಮಾಡಲಾಗಿದ್ದ ಸಾಕ್ಷರತಾ ವಿಜಯ ಕಾರ್ಯಕ್ರಮದಡಿಯಲ್ಲಿ ಈಗಿನ ದಾವಣರೆಗೆ ಜಿಲ್ಲಾ ಹರಪ್ಪನಹಳ್ಳಿ ತಾಲೂಕು ಲಕ್ಷ್ಮಿಪುರ ತಾಂಡದ ಜನರಿಗೆ ಅಕ್ಷರ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿದ್ದ ಯುವಕ ಪಿ.ಟಿ.ಪರಮೇಶ್ವರ ನಾಯ್ಕ್ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದಾರೆ.
ಗೋಡೆ ಬರಹ ಬರೆದಿದ್ದರು: ಯಾವುದೇ ರಾಜಕೀಯ ಮೂಲ, ಹಿನ್ನೆಲೆ ಇಲ್ಲದ ಪಿ.ಟಿ. ಪರಮೇಶ್ವರ ನಾಯ್ಕ್ ಮನೆತನ ಮೂಲತಃ ರೈತ ಕುಟುಂಬವಾಗಿದೆ. ಆದರೆ ಇವರು ಮಾತ್ರ ಚಿಕ್ಕಂದಿನಿಂದಲೇ ರಾಜಕೀಯ ಗೀಳು ಬೆಳೆಸಿಕೊಂಡಿದ್ದರು. ಜನತಾದಳ ಪಕ್ಷದಿಂದ ಹರಪ್ಪನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಅಂದಿನ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಡಿ. ಸಿಂಗ್ಯಾನಾಯ್ಕ ಅವರ ಹಿಂಬಾಲಕರಾಗಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರ ಗೋಡೆ ಬರಹ, ಕರಪತ್ರ ವಿತರಣೆ ಮಾಡುವುದು, ಗೋಡೆಗಳಿಗೆ ಬ್ಯಾನರ್, ಪೋಸ್ಟರ್ಗಳನ್ನು ಅಂಟಿಸುವ ಕೆಲಸ ಮಾಡುತ್ತಾ ರಾಜಕೀಯ ಹುಚ್ಚು ಬೆಳೆಸಿಕೊಂಡಿದ್ದರು ಎಂದು ಅವರ ಆಪ್ತ ವಲಯದಿಂದ ಕೇಳಿ ಬರುವ ಮಾತು.
ಲಕ್ಷ್ಮಿಪುರ ತಾಂಡದಲ್ಲಿ ವಾಸಿಸುವಾಗ ತಮ್ಮ ವಿದ್ಯಾರ್ಥಿ ಜೀವನದಲ್ಲಿ ವಯೋವೃದ್ಧರ ಪಿಂಚಣಿ ಅರ್ಜಿ, ವಿಧವಾ ವೇತನ ಅರ್ಜಿ, ವಿದ್ಯಾರ್ಥಿಗಳ ಶಿಷ್ಯವೇತನದ ಅರ್ಜಿಗಳು ಸೇರಿದಂತೆ ನಾನಾ ರೀತಿಯ ಸಮಾಜ ಸೇವೆ ಕೆಲಸಗಳನ್ನು ಮಾಡುತ್ತಾ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಿದ್ದು, ಇಂದು ಸಚಿವರಾಗುವ ಯೋಗ ತಂದಿದೆ.
3ನೇ ಬಾರಿ ಶಾಸಕ: ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ರ ತಂದೆ-ತಾಯಿ ಹೇಳಿಕೊಳ್ಳುವ ಮಟ್ಟಕ್ಕೆ ವಿದ್ಯಾಭ್ಯಾಸ ಮಾಡಿಲ್ಲ. ಆದರೆ ರೈತಾಪಿ ವರ್ಗದಿಂದ ಜೀವನ ಮಾಡುತ್ತಾ ಬಂದಿರುವ ಇವರಿಗೆ ರಾಜಕೀಯ ನೆಲೆ ಸಿಕ್ಕಿದ್ದು ಹರಪ್ಪನಹಳ್ಳಿಯಲ್ಲಿ 2 ಬಾರಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಕೆಲಸ ಮಾಡಿದ್ದಾರೆ. ಆದರೆ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಹೂವಿನಹಡಗಲಿಯಲ್ಲಿ ಕಳೆದ ಬಾರಿ ಸೋಲುಂಡು, ಈ ಬಾರಿ ಭಾರಿ ಮತಗಳ ಅಂತರದಿಂದ ಗೆಲವು ಸಾಧಿಸುವ ಮೂಲಕ ಸಚಿವ ಸ್ಥಾನಕ್ಕೇರಿದ್ದಾರೆ. ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿದ್ದು ಮಾತ್ರ ಹೂವಿನಹಡಗಲಿ ಕ್ಷೇತ್ರ.
ಪರಮೇಶ್ವರ ನಾಯ್ಕ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಮತ್ತೆ ಮಲ್ಲಿಗೆ ನಾಡಿಗೆ ಮಂತ್ರಿಗಿರಿ ಸಿಕ್ಕಿದ್ದು, ಕ್ಷೇತ್ರದ ಅಭಿವೃದ್ಧಿಗೆ ನಾಂದಿಯಾಗಲಿದೆ ಎಂದು ಮತದಾರರು ಮಾತನಾಡಿಕೊಳ್ಳುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

