ಸ್ವಾತಂತ್ರ್ಯ ಹೋರಾಟದಲ್ಲಿ ಮಠಗಳ ಪಾತ್ರ
ಹಗರಿಬೊಮ್ಮನಹಳ್ಳಿ: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರಾಷ್ಟ್ರದ ಜನತೆಯಲ್ಲಿ ದೇಶಭಕ್ತಿ ಬೆಳೆಸಿ, ಅವರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳುವಂತೆ ಪ್ರೇರೆಪಿಸುವಲ್ಲಿ ಮಠ, ಮಾನ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು ಎಂದು ಚಾನುಕೋಟಿ ಮಠದ ಪೀಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಸೋಮವಾರ ಮಧ್ಯಾಹ್ನ ಹಳೇಹಗರಿಬೊಮ್ಮನಹಳ್ಳಿಯಲ್ಲಿ ಕುರುಹಿನಶೆಟ್ಟಿ ಸಮಾಜದವರು ನಿರ್ಮಿಸಿರುವ ನೂತನ ನೀಲಕಂಠೇಶ್ವರ ದೇವಸ್ಥಾನ ಉದ್ಘಾಟನೆ, ಮೂರ್ತಿಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರೇರಣೆಯಾದಂತೆ ಇತ್ತ ಸಮಾಜದ ಉನ್ನತಿಯಲ್ಲಿ ಮತ್ತು ಸಮಾಜ ಸರಿ ದಾರಿಯಲ್ಲಿ ಸಾಗಲು ಮಠ, ಮಾನ್ಯಗಳು ಇಂದಿಗೂ ಶ್ರಮೀಸುತ್ತಿವೆ. ಮಠಗಳು ಕೇವಲ ಧರ್ಮ, ಭಕ್ತಿ ಸಂಕೇತವಾಗಿರದೆ, ನಾಡನ್ನು ಕಟ್ಟುವ ಮತ್ತು ಅಭಿವೃದ್ಧಿ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡು ದುಡಿಯುತ್ತಿವೆ ಎಂದರು.
ಜಾತ್ಯತೀತತೆ ಬೇಕು: ಧರ್ಮ, ಜಾತಿ ಭೇದ ಭಾವ ಅಳಿಸಿ ಹಾಕುವುದು ಸದ್ಯ ನಮ್ಮ ಮುಂದಿರುವ ಬಹುದೊಡ್ಡ ಕರ್ತವ್ಯ. ಪ್ರಪಂಚದಲ್ಲಿ ಮಾನವ ಧರ್ಮವೇ ಶ್ರೇಷ್ಠ. ಎಲ್ಲರೂ ಜಾತ್ಯತೀತ ಪರಿಕಲ್ಪನೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಮಾನವ ಧರ್ಮವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಿದೆ. ಪ್ರಸಕ್ತ ದಿನಗಳಲ್ಲಿ ಸಮಾಜದಲ್ಲಿ ಬದುಕುತ್ತಿರುವ ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂಬ ಭಾವನೆ ನಮ್ಮಲ್ಲಿ ಮೂಡಿಸುವ ಕೆಲಸವನ್ನು ಮಾಡುವುದು ಪ್ರತಿಯೊಬ್ಬ ನಾಗರೀಕರ ಮೇಲಿರುವ ಜವಾಬ್ದಾರಿ. ಇದು ನಿಮ್ಮ ಹೊಣೆಗಾರಿಕೆಯೂ ಹೌದು ಎಂದರು.
ಬೆಳಗ್ಗೆ 5.45ಕ್ಕೆ ನೂತನ ದೇವಸ್ಥಾನದಲ್ಲಿ ಶ್ರೀ ನೀಲಕಂಠೇಶ್ವರ ಮೂರ್ತಿ ಸಹಿತ, ಆತ್ಮಲಿಂಗ, ನಂದೀಶ, ಗಣೇಶ ಹಾಗೂ ಷಣ್ಮುಖ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲ್ಲೆಯಲ್ಲಿ ಹೋಮ ಹವನ ನಡೆಸಿ, ವಿಶೇಷ ಪೂಜಾ ಕಾರ್ಯಗಳು ಜರುಗಿದವು.
ಕುರುಹಿನ ಶೆಟ್ಟಿ ಸಮಾಜದ ಮೂಲ ಪೀಠಾಧೀಶ ಶ್ರೀ ನೀಲಕಂಠ ಪಟ್ಟದಾರ್ಯಶ್ರೀಗಳ ಸಾನ್ನಿಧ್ಯ ವಹಿಸಿದ್ದರು. ನಂದಿಪುರದ ಮಹೇಶ್ವರಶ್ರೀ, ಹಾಲಸ್ವಾಮಿ ಮಠದ ಹಾಲಶಂಕರಶ್ರೀ, ಉಘಮ ಮಠದ ನವಲಿ ಹಿರೆಮಠಸಿದ್ದಲಿಂಗಶ್ರೀ, ಗೋರ ಶ್ರೀ, ಚಲನಚಿತ್ರನಟ ನೆನಪಿರಲಿ ಪ್ರೇಮ್, ಮಾಜಿ ಶಾಸಕ ನೇಮಿರಾಜ ನಾಯ್ಕ್, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಸುಧಾಕರ ದೇಸಾಯಿ, ಹಗರಿಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಎಂ. ಶಿವಕುಮಾರ, ತಾಲೂಕು ಕುರುಹಿನಶೆಟ್ಟಿ ಸಮಾಜ ಅಧ್ಯಕ್ಷ ಜೋಗೂರು ಮಲ್ಲಣ್ಣ, ದೇವಸ್ಥಾನ ಸಮಿತಿ ಟ್ರಸ್ಟ್ ಅಧ್ಯಕ್ಷ ಸೋಡಾ ನಿಂಬಣ್ಣ, ಹಿರಾಳ ಶರಣಪ್ಪ, ಕಾವೇರಿ ವಿನೋದ, ಮಂಜುನಾಥ, ಭುವನೇಶ್ವರಿ ಮಲ್ಲಣ್ಣ, ಸೋಡಾ ನಾಗಪ್ಪ, ಬ್ಯಾಲಾಳು ಕರಿಬಸವನಗೌಡ, ಎಸ್. ಪುಷ್ಪಾವತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

