ಅಡಿಗಲ್ಲು ಬಿಟ್ಟು ಮೇಲೇಳದ ಕ್ರೀಡಾಂಗಣ
ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ತಾಲೂಕು ಕ್ರೀಡಾಂಗಣದ ನಿರ್ಮಾಣ ಕಾರ್ಯ ಸದ್ಯ ಅಡಿಗಲ್ಲಿಗಷ್ಟೆ ಸೀಮಿತವಾಗಿದೆ. ಅತ್ಯಂತ ಸುಸಜ್ಜಿತ ರೀತಿಯಲ್ಲಿ ನಿರ್ಮಾಣ ಮಾಡುವ ಸಾಕಷ್ಟು ಭರವಸೆಯ ಮೂಟೆಗಳೇ ಇದ್ದವು. ಆದರೆ ಇದುವರೆಗೂ ಕ್ರೀಡಾಂಗಣ ನಿರ್ಮಾಣ ಮಾತ್ರ ಆಗಿಲ್ಲ.
2012ರ ಫೆಬ್ರವರಿಯಲ್ಲಿ ಪಟ್ಟಣದ ರಾಮನಗರದ ಗಂಗಾವತಿ ಭೀಮಣ್ಣನವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ, ತಾಲೂಕು ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಅಂದಿನ ಶಾಸಕ ಕೆ. ನೇಮಿರಾಜ ನಾಯ್ಕ್ ಅಡಿಗಲ್ಲು ಹಾಕಿದ್ದು ನೋಡಿ, ನೆರೆದಿದ್ದ ಕ್ರೀಡಾಪ್ರೇಮಿಗಳ ಕಣ್ಣಲ್ಲಿ ದಶಕಗಳಷ್ಟು ಹಳೆಯದಾದ ಬೇಡಿಕೆಯೊಂದು ಕಾರ್ಯರೂಪಕ್ಕೆ ಬರುತ್ತದೆ ಎಂದು ಖುಷಿ ಪಟ್ಟಿದ್ದರು. ಆದರೆ ಕ್ರೀಡಾಂಗಣ ನಿರ್ಮಾಣದ ಕಾರ್ಯ ಕನಸಾಗಿಯೇ ಉಳಿದಿದೆ.
ಒಂದು ಕಾಲು ವರ್ಷ ಸವೆದರೂ ಕ್ರೀಡಾಂಗಣದ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಕ್ರೀಡಾಂಗಣ ಕಟ್ಟುವ ಕೆಲಸ ಅಡಿಗಲ್ಲಿಗೆ ಮಾತ್ರ ಸೀಮಿತವಾಗಿರುವುದು ತಾಲೂಕಿನ ಅಸಂಖ್ಯಾತ ಕ್ರೀಡಾಪಟುಗಳು ಮತ್ತು ಕ್ರೀಡಾಸಕ್ತರಲ್ಲಿ ಸಾಕಷ್ಟು ನಿರಾಸೆ ಮೂಡಿಸಿದೆ. ರಾಜ್ಯದಲ್ಲೇ ಮಾದರಿ ಕ್ರೀಡಾಂಗಣ ನಿರ್ಮಿಸುವ ಮೂಲಕ, ಬಿಸಿಲೂರಿನ ಕ್ರೀಡಾ ಕ್ಷೇತ್ರದ ಪ್ರಗತಿಗೆ ಮುನ್ನುಡಿ ಬರೆಯುವುದಾಗಿ ನೇಮಿರಾಜ ನಾಯ್ಕ್ ನೀಡಿದ್ದ ಭರವಸೆ ಠುಸ್ ಪಟಾಕಿಯಾಗಿದೆ.
ಭರವಸೆಯಾಗಿ ಉಳಿಯಿತು: ಪಟ್ಟಣದಲ್ಲಿ ಸುಸಜ್ಜಿತವಾದ ತಾಲೂಕು ಕ್ರೀಡಾಂಗಣ ನಿರ್ಮಾಣದ ಬೇಡಿಕೆ ಹಲವು ದಶಕಗಳಿಂದಲೂ ಇದೆ. ಸರ್ಕಾರ, ಶಾಸಕರು ಬದಲಾವಣೆಯಾದಾಗಲೆಲ್ಲ ಕ್ರೀಡಾಂಗಣ ನಿರ್ಮಾಣದ ಬೇಡಿಕೆಯ ಭಿನ್ನವತ್ತಳೆಯನ್ನು ಇಲ್ಲಿನ ಕ್ರೀಡಾಪ್ರೇಮಿಗಳು ಸಲ್ಲಿಸುತ್ತಲೇ ಬರುವುದು ಒಂದು ವಾಡಿಕೆಯಂತಾಗಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅನುದಾನದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ ಮಾಡುವುದಾಗಿ ಅಂದಿನ ಶಾಸಕ ಕೆ. ನೇಮಿರಾಜನಾಯ್ಕ್ ಭರವಸೆ ನೀಡಿದ್ದರಲ್ಲದೆ, ಕಾಮಗಾರಿ ಕಾರ್ಯಕ್ಕೆ ಅಡಿಗಲ್ಲು ಹಾಕಿ, ಹೊಸವರ್ಷಕ್ಕೆಲ್ಲ ತಾಲೂಕು ಕ್ರೀಡಾಂಗಣ ನಿರ್ಮಿಸಿಕೊಡುವ ಮಾತುಗಳನ್ನಾಡಿದ್ದರು. ಅವರ ಭರವಸೆಯ ಮಾತುಗಳನ್ನು ಕೇಳಿ ಕ್ರೀಡಾಪ್ರೇಮಿಗಳು ಫುಲ್ ಖುಷ್ ಆಗಿದ್ದರು.
ಆದರೆ ಇವತ್ತಿನವರೆಗೂ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗದಿರುವುದು ಇಲ್ಲಿನ ಸಾವಿರಾರು ಕ್ರೀಡಾಸಕ್ತರಲ್ಲಿ ನಿರಾಸೆ ಮೂಡಿಸಿದೆ. ತಾಲೂಕಿನಲ್ಲಿ ನೂರಾರು ಕ್ರೀಡಾಳುಗಳಿದ್ದು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಆದರೆ ಈವರೆಗೂ ಕ್ರೀಡಾ ಸಾಧನೆಗಾಗಿ, ವಿವಿಧ ಕ್ರೀಡೆಗಳ ತರಬೇತಿ, ಅಭ್ಯಾಸಕ್ಕಾಗಿ ಸುಸಜ್ಜಿತ ಕ್ರೀಡಾಂಗಣ ಇಲ್ಲದಿರುವುದು ಜಿಲ್ಲಾಡಳಿತ, ಸರ್ಕಾರ, ಸ್ಥಳೀಯ ಶಾಸಕರ ಮತ್ತು ತಾಲೂಕಾಡಳಿತದ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ.
ಸದ್ಯ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿರುವ ಸ್ಥಳ ಪಟ್ಟಣದ ಹೃದಯ ಭಾಗದಲ್ಲಿದ್ದು, ಇಲ್ಲಿ ಸ್ಟೇಡಿಯಂ ನಿರ್ಮಾಣಗೊಂಡರೆ ಎಲ್ಲರಿಗೂ ಅನುಕೂಲವಾಗುತ್ತದೆ. ಅಡಿಗಲ್ಲಿಗೆ ಸೀಮಿತವಾಗಿರುವ ತಾಲೂಕು ಕ್ರೀಡಾಂಗಣದ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸುವ ಮೂಲಕ ನೂತನ ಶಾಸಕ ಭೀಮಾನಾಯ್ಕ್ ಅವರು, ತಾಲೂಕಿಗೊಂದು ಉತ್ತಮ ಕ್ರೀಡಾಂಗಣ ನಿರ್ಮಿಸಿಕೊಡುವ ಮೂಲಕ ತಾಲೂಕಿನ ಕ್ರೀಡಾ ಚಟುವಟಿಕೆಗಳು ಮತ್ತೆ ಗರಿಗೆದರಲು ಅವಕಾಶ ಕಲ್ಪಿಸಿಕೊಡಬೇಕೆಂಬ ಹಂಬಲ ತಾಲೂಕಿನ ಕ್ರೀಡಾಸಕ್ತರದ್ದಾಗಿದೆ. ಇದಕ್ಕೆ ನೂತನ ಶಾಸಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
- ಹುಳ್ಳಿ ಪ್ರಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

