ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಕಾಣಿಕೆ ಹುಂಡಿಯಲ್ಲಿ 18.41 ಲಕ್ಷ ಸಂಗ್ರಹ
ಕೊಟ್ಟೂರು: ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದ ಹಿರೇಮಠದಲ್ಲಿನ ಕಾಣಿಕೆ ಹುಂಡಿಯಲ್ಲಿ ರು. 18,41,158 ಲಕ್ಷ ಸಂಗ್ರಹಗೊಂಡಿದೆ. ದೇವಸ್ಥಾನದಲ್ಲಿನ ಮೂರು ಹುಂಡಿಗಳನ್ನು ಬುಧವಾರ ತೆರೆದಾಗ ಈ ಪ್ರಮಾಣದ ಹಣ ಸಂಗ್ರಹಗೊಂಡಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಮಹೇಶ್ ತಿಳಿಸಿದರು. ಶ್ರೀಸ್ವಾಮಿಯ ರಥೋತ್ಸವ ಜರುಗಿದ ಮಾರ್ಚ್‌ನಲ್ಲಿ ಹುಂಡಿಗಳನ್ನು ತೆರೆಯಲಾಗಿತ್ತು. ಆಗ ರು. 20 ಲಕ್ಷಕ್ಕೂ ಹೆಚ್ಚು ಸಂಗ್ರಹವಾಗಿತ್ತು. ಇದೀಗ 7 ತಿಂಗಳ ನಂತರ ಹುಂಡಿಯಲ್ಲಿ ರು. 18,41,158 ಲಕ್ಷ ಸಂಗ್ರಹವಾಗಿದೆ. ಈ ಪೈಕಿ 4.83 ಮಿ.ಗ್ರಾಂ. ಅಳತೆಯ ಬಂಗಾರದ ತುಣುಕು ಮತ್ತು ರು. 14,400 ಸಾವಿರ ಮೌಲ್ಯದ ಬೆಳ್ಳಿಯ ಸಣ್ಣ ಪ್ರಮಾಣದ ಆಭರಣಗಳನ್ನು ಸಹ ಭಕ್ತರು ಕಾಣಿಕೆ ಹುಂಡಿಯಲ್ಲಿ ಹಾಕಿರುವುದು ಗೊತ್ತಾಗಿದೆ. ಬುಧವಾರ ಬೆಳಗಿನಿಂದ ಪ್ರಾರಂಭಗೊಂಡ ಎಣಿಕೆ ಕಾರ್ಯದಲ್ಲಿ ಕಂದಾಯ ಮತ್ತು ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಸಿಬ್ಬಂದಿ ತೊಡಗಿಸಿಕೊಂಡು ಸಂಜೆ 7.30ರ ಸುಮಾರಿಗೆ ಮುಕ್ತಾಯಗೊಳಿಸಿದರು. ಕೂಡ್ಲಿಗಿ ತಹಸೀಲ್ದಾರ್ ಜವರೇಗೌಡ, ದೇವಸ್ಥಾನ ಕಾರ್ಯ ನಿರ್ವಾಹಣಾಧಿಕಾರಿ ಅರವಿಂದ ಸುತಗುಂಡಿ, ಉಪ ತಹಸೀಲ್ದಾರ್ ಮಂಜುನಾಥ, ಕಂದಾಯ ಅಧಿಕಾರಿ ಸೋಮನಗೌಡ, ಪ್ರಧಾನ ಧರ್ಮಕರ್ತ ಎ.ಎಂ.ಬಿ. ಕೊಟ್ರಯ್ಯ, ಪಟ್ಟಣದ ಆಯಗಾರ ಬಳಗದ ಸಕ್ರಿಗೌಡ, ಕೆಂಪಳ್ಳಿ ಗುರುಸಿದ್ದನಗೌಡ, ಪಪಂ ಸದಸ್ಯರಾದ ತೂಲಹಳ್ಳಿ ಮಂಜುನಾಥ, ಅನಿಲ್ ಹೊಸಮನಿ ಮತ್ತಿತರರು ಇದ್ದರು.
ಕಲಾಶ್ರೀ ಪ್ರಶಸ್ತಿ: ಶಿಬಿರ
ಹೂವಿನಹಡಗಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಮತ್ತು ಕಾರ್ಮೆಲ್ ಜ್ಯೋತಿ ಎನ್‌ಜಿಒ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 2013-14ನೇ ಸಾಲಿನ ಮಕ್ಕಳ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಸೃಜನಾತ್ಮಕ ಕಲೆ ಪ್ರದರ್ಶನದ ನೃತ್ಯ ಕಲೆಯಲ್ಲಿ ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿ ಐ. ಸಹನ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಶಿಬಿರವನ್ನು 2013ನೇ ಸಾಲಿನ ಮಕ್ಕಳ ದಿನಾಚರಣೆ ಹಾಗೂ ತಾಲೂಕು ಮಟ್ಟದ ಮಕ್ಕಳ ಕಲಾ ಉತ್ಸವದ ಪ್ರಯುಕ್ತ ಕಾರ್ಮೆಲ್ ಸೇವಾ ಸದನದಲ್ಲಿ ಆಯೋಜಿಸಲಾಗಿತ್ತು. ಅದೇ ರೀತಿ ಸೃಜನಾತ್ಮಕ ಕಲೆಯಲ್ಲಿ ಕೆ. ಅಲ್ಲಮಪ್ರಭು (ಮೌಂಟ್ ಕಾರ್ಮೆಲ್ ವಿದ್ಯಾರ್ಥಿ) ಪ್ರಥಮ ಸ್ಥಾನ ಪಡೆದರೆ ದ್ವಿತೀಯ ಸ್ಥಾನವನ್ನು ದಾವಣಗೆರೆ ಕಾನ್ವೆಂಟ್‌ನ ಎಸ್.ಪಿ. ನಿಹಾಲ್ ಪಡೆದಿದ್ದಾರೆ. ಶಾಸ್ತ್ರೀಯ ನೃತ್ಯದಲ್ಲಿ ಜೆಎಸ್‌ಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ದಿವ್ಯಭಾರತಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಷಯದ ನೂತನ ಆವಿಷ್ಕಾರದಲ್ಲಿ ದಾವಣಗೆರೆ ಕಾನ್ವೆಂಟ್‌ನ ಕೆ. ಸಿಮ್ರಾನ್ ಪ್ರಥಮ, ಬಿ. ಸಿಮ್ರಾನ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ರಾಜೇಶ್ ಡಿಸೋಜ ಉದ್ಘಾಟಿಸಿದರು. ಇಟಿಗಿ ನಾಗರತ್ನಾ, ಎಚ್.ಎಂ. ಸಾವಿತ್ರಮ್ಮ, ಶೋಭಾ, ಡಿ. ಹನುಮಕ್ಕ ಕಾರ್ಯಕ್ರಮ ನಿರೂಪಿಸಿದರು. ತೀರ್ಪುಗಾರರಾಗಿ ದ್ವಾರಕೀಶ ರೆಡ್ಡಿ ಕಾರ್ಯನಿರ್ವಹಿಸಿದರು. ಮಕ್ಕಳ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರದಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ಪ್ರತಿಭೆಯನ್ನು ಪ್ರದರ್ಶಿಸಿದರು.
153 ಜನರಿಗೆ ಕಣ್ಣಿನ ತಪಾಸಣೆ
ಬಳ್ಳಾರಿ: ಕೊರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 153 ಜನರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು. ಇವರಲ್ಲಿ 47 ಜನರನ್ನು ಮಸೂರ ಅಳವಡಿಕೆ ಶಸ್ತ್ರಚಿಕಿತ್ಸೆಗಾಗಿ ನ. 5ರಂದು ವಿಮ್ಸ್‌ಗೆ ದಾಖಲಿಸಲಾಗುವುದು. ಕೊರ್ಲಗುಂದಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗಮ್ಮ ಶಿಬಿರವನ್ನು ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮುದಾಯದ ಸಹಭಾಗಿತ್ವದಿಂದ ಇಲಾಖೆಯ ವಿವಿಧ ಕಾರ್ಯಕ್ರಮಗಳು ಯಶಸ್ಸು ಕಾಣುತ್ತಿವೆ ಎಂದರು. ವಿಮ್ಸ್ ಆಸ್ಪತ್ರೆ ಸಂಚಾರಿ ನೇತ್ರ ಘಟಕದ ಡಾ. ಆಂಜನೇಯ,   ಡಾ. ಸಂತೋಷ್, ಮಂಜುನಾಥ, ಸುರೇಶ್, ದತ್ತಾತ್ರೇಯ, ಗ್ರಾಮ ಪಂಚಾಯಿತಿ  ಮಾಜಿ ಅಧ್ಯಕ್ಷ ಬೊಂಬಾಯಿ ಮಾರೆಪ್ಪ, ತಾಪಂ ಸದಸ್ಯ ಕೆ. ತಿಮ್ಮಪ್ಪ, ಗ್ರಾಪಂ ಸದಸ್ಯ ತಳವಾರ ಬಸವರಾಜ, ಸಹಕಾರಿ ಸೇವಾ ಬ್ಯಾಂಕ್‌ನ ಲಿಂಗರಾಜು ಇದ್ದರು. ಶೋಭಾರಾಣಿ ಪ್ರಾರ್ಥಿಸಿದರು. ಯು. ಮಲ್ಲಿಕಾರ್ಜುನ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.