ಬಳ್ಳಾರಿ

ಬೆಲೆ ಏರಿಕೆ ಮಧ್ಯೆಯೂ ಹಬ್ಬದಾಚರಣೆ

Published On :

ಹಗರಿಬೊಮ್ಮನಹಳ್ಳಿ: ಮಳೆ ಅಭಾವದ ಮಧ್ಯೆಯೂ ತಾಲೂಕಿನಾದ್ಯಂತ ಈ ಸಲದ ದೀಪಾವಳಿ ಹಬ್ಬವನ್ನು ಜನತೆ ಸಡಗರ, ಸಂಭ್ರಮದೊಂದಿಗೆ ಆಚರಿಸಿದರು.
ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿ, ಮಳಿಗೆಗಳಲ್ಲಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಿಸಿ ಪೂಜೆ ಮಾಡುವ ಮೂಲಕ ಹಬ್ಬವನ್ನು ಆಚರಿಸಿದರು. ಇತ್ತ ಮನೆಗಳಲ್ಲೂ ಲಕ್ಷ್ಮೀ ಪೂಜೆ ಮಾಡಲಾಯಿತು. ತಾಲೂಕಿನಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನಗಳ ಕಾಲ ದೀಪಾವಳಿ ಆಚರಿಸಲಾಯಿತು. ಪ್ರತಿ ದೀಪಾವಳಿ ಪಾಡ್ಯದ ದಿನದಂದು ಇಲ್ಲಿನ ವ್ಯಾಪಾರಸ್ಥರಿಗೆ ಶುಭ ದಿನವಾಗಿದೆ. ಹೀಗಾಗಿ ಈ ದಿನದಂದು ಎಲ್ಲ ವ್ಯಾಪಾರಸ್ಥರು ವಾರ್ಷಿಕ ಲೆಕ್ಕಾಚಾರಗಳನ್ನು ಚುಕ್ತಾ ಮಾಡಿಕೊಂಡು ಹೊಸ ಲೆಕ್ಕವನ್ನು ಆರಂಭಿಸುತ್ತಾರೆ. ಹಬ್ಬದಂಗವಾಗಿ ಪಟ್ಟಣದಲ್ಲಿ ಪಟಾಕಿಗಳ ಸದ್ದು ಕೇಳುತ್ತಲೇ ಇತ್ತು. ಮನೆಗಳ ಅಂಗಳದಲ್ಲಿ ರಂಗೋಲಿ, ದೀಪಾಲಂಕಾರ ಮಾಡಿದ್ದು ಕಂಡುಬಂದಿತು. ಮಕ್ಕಳು ಸಿಹಿ ತಿಂದು ಸಂಭ್ರಮದಿಂದಲೇ ಪಟಾಕಿ ಸುಡುವಲ್ಲಿ ತೊಡಗಿದ್ದರು.
ಹಬ್ಬದ ದಿನ ಬಂದರೆ ಸಾಕು ಇಲ್ಲಿನ ಮಾರುಕಟ್ಟೆಯಲ್ಲಿ ಹೂ, ಹಣ್ಣುಗಳ ಬೆಲೆ ಗಗನಕ್ಕೇರುತ್ತದೆ. ಆದರೆ ಈ ಸಲ ಬಾಳೆಕಂಬ, ಕುಂಬಳ ಕಾಯಿ ಹಾಗೂ ತೋರಣ ಸೇರಿದಂತೆ ಹಬ್ಬದ ಪೂಜೆಗೆ ಅಗತ್ಯ ಇರುವ ಸಾಮಗ್ರಿಗಳ ಬೆಲೆ ಗಗನಕ್ಕೇರಿತ್ತು. ಮುಖ್ಯವಾಗಿ ಪಟಾಕಿ ಹಚ್ಚುವ ಮುನ್ನವೇ ಅದರ ರೇಟು ಕೊಳ್ಳುವವರ ಕೈಯನ್ನು ಸಾಕಷ್ಟು ಸುಟ್ಟಿತು. ಬೆಲೆ ಏರಿಕೆ ಮಧ್ಯೆಯೇ ಜನತೆ ಪಟಾಕಿಯನ್ನು ಖರೀದಿಸಿದರು. ಆದರೆ ಈ ಸಲ ಪಟಾಕಿ ಹಚ್ಚುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು.
ಸಂತಸದ ದೀಪಾವಳಿ ಆಚರಣೆ
ಬಳ್ಳಾರಿ: ಜಿಲ್ಲಾದ್ಯಂತ ಸಂಭ್ರಮ, ಸಡಗರದಿಂದ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಜನತೆ ಆಚರಿಸಿದರು. ಭಾನುವಾರ ಸಂಜೆ ಅಂಗಡಿಗಳಲ್ಲಿ ವಿಶೇಷ ಅಲಂಕಾರ ಮಾಡಿ, ಲಕ್ಷ್ಮೀ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಎಲ್ಲ ಅಂಗಡಿಗಳನ್ನು ವಿಶೇಷವಾಗಿ ಅಲಂಕರಿಸಿ, ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಬೆಳಕಿನ ದೀಪಾವಳಿಯಂದು ಎಲ್ಲೆಡೆ ಪಟಾಕಿ ಸದ್ದು ಕೇಳಿಸುತ್ತಿತ್ತು. ಇನ್ನು ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಅಂಗಡಿಗಳು ಗಿಜುಗುಡುತ್ತಿದ್ದವು. ನಗರದ ದೇವಸ್ಥಾನಗಳಿಗೆ ಭಕ್ತರು ಹೋಗಿ ಪೂಜೆ ಸಲ್ಲಿಸಿದರು. ಮನೆಯ ಮುಂದೆ ದೀಪಾಲಂಕಾರ, ರಂಗೋಲಿ ಹಾಕಿ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದರು.
ಸಂಭ್ರಮದ ದೀಪಾವಳಿ
ಕೊಟ್ಟೂರು: ದೀಪಗಳ ಹಬ್ಬ ದೀಪಾವಳಿಯನ್ನು ಪಟ್ಟಣದ ಜನತೆ ಸಡಗರ ಸಂಭ್ರಮಗಳೊಂದಿಗೆ ಭಾನುವಾರ ರಾತ್ರಿ ಆಚರಿಸಿ ಸಂಭ್ರಮಿಸಿದರು.
ಸಂಪತ್ತು ಕರುಣಿಸುವ ಸಂಕೇತ ಲಕ್ಷ್ಮೀ ದೇವಿಯನ್ನು ಅಂಗಡಿ ಮತ್ತು ಮತ್ತಿತರ ವಾಣಿಜ್ಯ ಚಟುವಟಿಕೆಯನ್ನು ನಡೆಸುವವರು ವೈಭವವಾಗಿ ಅಲಂಕರಿಸಿ ರಾತ್ರಿಯಿಡೀ ಪೂಜಿಸಿ ಪಟಾಕಿಗಳನ್ನು ಸಿಡಿಸಿದರು.
ಎಲ್ಲೆಂದರಲ್ಲಿ ಹಬ್ಬದ ಸಡಗರ ಮನೆ ಮಾಡಿತ್ತು. ಕೆಲವರು ರಾತ್ರಿ ಹತ್ತರ ಒಳಗೆ ಪೂಜೆ ಕೈಂಕರ್ಯ ನೆರವೇರಿಸಿದರೆ, ಮಾರವಾಡಿ ಜನಾಂಗದವರು ರಾತ್ರಿ 12.30ರ ಸಿಂಹ ಲಗ್ನದಲ್ಲಿ ಲಕ್ಷ್ಮಿದೇವಿಯನ್ನು ಪೂಜಿಸಿ ಸಂಭ್ರಮಿಸಿದರು.
ದೀಪಾವಳಿ ಹಬ್ಬ ವ್ಯಾಪಾರಸ್ಥರ ಪಾಲಿಗೆ ವಹಿವಾಟಿನ ನೂತನ ವರ್ಷವಾಗಿದ್ದು, ಇದಕ್ಕೆಂದೇ ಹೊಸ ಪುಸ್ತಕಗಳನ್ನು ಪೂಜಿಸಿ ವಹಿವಾಟನ್ನು ನಮೂದಿಸಿದರು. ಪಟ್ಟಣದಲ್ಲಿನ ಅಂಗಡಿಗಳಲ್ಲಿ ನಡೆದ ಪೂಜಾ ಅಲಂಕಾರ ಒಬ್ಬರಿಗಿಂತ ಒಬ್ಬರನ್ನು ಮೀರಿಸುವಂತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.