ಹೆದ್ದಾರಿ ಹೊಣೆಗಾರಿಕೆ ಹೊರಲ್ಲ
ಹೂವಿನಹಡಗಲಿ: ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳನ್ನು ಆಯಾ ಸ್ಥಳೀಯ ಪ್ರಾಧಿಕಾರಗಳಿಗೆ ಹಸ್ತಾಂತರ ಮಾಡಿರುವ ಬೆನ್ನಲ್ಲೆ ಸುತ್ತೋಲೆಯನ್ನು ಇಲ್ಲಿನ ಪುರಸಭೆ ಸಾರಸಗಟಾಗಿ ತಿರಸ್ಕಾರ ಮಾಡಿದೆ.
ಈ ಕುರಿತು 'ಕನ್ನಡಪ್ರಭ' ಬುಧವಾರ ವಿಶೇಷ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ, ವರದಿ ಆಧರಿಸಿ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್, ಜಿಲ್ಲಾಧಿಕಾರಿ, ಹೊಸಪೇಟೆ ಸಹಾಯಕ ಆಯುಕ್ತರಿಗೆ ಪತ್ರ ಬರೆದು, ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಯೊಂದಿಗೆ ಈ ವಿಷಯದ ಸಾಧಕ ಬಾಧಕಗಳನ್ನು ಚರ್ಚೆ ಮಾಡದೆ, ಏಕಾಏಕಿ ರಸ್ತೆಗಳನ್ನು ಹಸ್ತಾಂತರ ಮಾಡಿದರೆ ತಾವು ಯಾವ ಅನುದಾನದಲ್ಲಿ ಅಭಿವೃದ್ಧಿ ಪಡಿಸಬೇಕೆಂಬ ಇತ್ಯಾದಿ ವಿಷಯ ಕುರಿತು ಪತ್ರದಲ್ಲಿ ತಿಳಿಸಿದ್ದಾರೆ.
ಅ. 30ರಂದು ಹಸ್ತಾಂತರ: ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿಗಳು ತಮ್ಮ ಇಲಾಖೆ ವೃತ್ತ ಮತ್ತು ವಿಭಾಗ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಆ ಪ್ರಕಾರ ರಾಜ್ಯದ ಮಹಾನಗರ ಪಾಲಿಕೆ, ನಗರ ಸಭೆ ಮತ್ತು ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿಗಳಿಗೆ ಅ. 3, 2013ರಂದು ರಸ್ತೆ ಹಸ್ತಾಂತರ ಮಾಡಿರುವ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಅದೇ ರೀತಿ ಪುರಸಭೆಗೆ ಅ. 30ರಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ಸರ್ಕಾರಿ ಸುತ್ತೋಲೆಯ ದ್ವಿಪತ್ರಗಳನ್ನು ನೀಡಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆಗಳನ್ನು ಹಸ್ತಾಂತರ ಮಾಡಿದೆ.
ರಸ್ತೆಗಳೆಲ್ಲಾ ಹಾಳಾಗಿವೆ: ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳನ್ನು ಮಳೆ ಮುನ್ನ ಹಾಗೂ ಮಳೆಗಾಲದ ನಂತರ ಎರಡು ಬಾರಿ ನಿರ್ವಹಣೆ, ದುರಸ್ತಿ ಮಾಡಬೇಕು. ಆದರೆ ಈ ರಸ್ತೆಗಳೆಲ್ಲಾ ಹಾಳಾಗಿ ಹೋಗಿವೆ. ವಾಲ್ಮೀಕಿ ಜಯಂತಿ ಅಂಗವಾಗಿ ಸಾರ್ವಜನಿಕರಿಗೆ ಧೂಳಾಗದಂತೆ ರಸ್ತೆಯಲ್ಲಿನ ಮಣ್ಣು ತೆಗೆದು ಹಾಕಿ ಸ್ವಚ್ಛ ಮಾಡಲಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆಯವರು ರಸ್ತೆಯಲ್ಲಿನ ತಗ್ಗು ಗುಂಡಿಗಳಿಗೆ ಮಣ್ಣು ಹಾಕಿ ಪಟ್ಟಣದ ತುಂಬೆಲ್ಲ ಧೂಳು ಮಾಡಿ ಇಟ್ಟಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ ಎಂದು ಪ್ರಶ್ನಿಸುತ್ತಾರೆ ಮುಖ್ಯಾಧಿಕಾರಿ ನೂರುಲ್ಲಾಖಾನ್.
ಕೇವಲ ರಸ್ತೆಗಳನ್ನು ಹಸ್ತಾಂತರ ಮಾಡಿದ ಕೂಡಲೆ ಸಮಸ್ಯೆ ಬಗೆಹರಿಯುವುದಿಲ್ಲ, ಅದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿದೆ. ಈಗ ಕಿತ್ತು ಹೋಗಿರುವ ರಸ್ತೆ ದುರಸ್ತಿ ಮಾಡಲು ಅನುದಾನ ಎಲ್ಲಿಂದ ತರಬೇಕು? ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಾಕಷ್ಟು ಅಡ್ಡಿಯಾಗುತ್ತಿದೆ ಎನ್ನುತ್ತಾರೆ.
ಲೋಕೋಪಯೋಗಿ ಇಲಾಖೆಯವರು ರಸ್ತೆಯಲ್ಲಿನ ತಗ್ಗು ಗುಂಡಿಗಳಿಗೆ ಮಣ್ಣು ಹಾಕಿ ಪಟ್ಟಣದ ತುಂಬೆಲ್ಲ ಧೂಳು ಮಾಡಿ ಇಟ್ಟಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ?
- ನೂರುಲ್ಲಾಖಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

