ಜೋಳ, ಸೂರ್ಯಕಾಂತಿಯಿಂದ ರೈತ ವಿಮುಖ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 13
ಜಿಲ್ಲೆಯ ಪ್ರಮುಖ ಬೆಳೆಗಳಾದ ಜೋಳ ಮತ್ತು ಸೂರ್ಯಕಾಂತಿ ಬಗ್ಗೆ ಜಿಲ್ಲೆಯ ರೈತರಲ್ಲಿ ನಿರಾಸಕ್ತಿ ಮೂಡಿದೆಯೇ ಎಂಬ ಪ್ರಶ್ನೆ ಎದ್ದಿದೆ. ಜೋಳ, ಸೂರ್ಯಕಾಂತಿ ಬಿಟ್ಟು, ಹತ್ತಿ, ಕಡಲೆ ಹಾಗೂ ಮೆಕ್ಕೆಜೋಳದತ್ತ ಹೆಚ್ಚು ಆಸಕ್ತಿ ಬೆಳೆಸಿಕೊಂಡಿರುವುದೇ ಈ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಹೌದು, ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಕೃಷಿ ಇಲಾಖೆಯ ಬಿತ್ತನೆ ಗುರಿ ಹಾಗೂ ಬಿತ್ತನೆ ಪ್ರಮಾಣವನ್ನು ನೋಡಿದಾಗ ಇಂತಹ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಹೆಚ್ಚಿನ ಶ್ರಮ, ಕೂಲಿ ಕಾರ್ಮಿಕರ ಕೊರತೆ, ಇಳುವರಿಯಲ್ಲಿ ಕುಂಠಿತ, ಬೆಲೆ ಸಮಸ್ಯೆಯಿಂದ ಜೋಳ, ಸೂರ್ಯಕಾಂತಿಯಿಂದ ರೈತರು ದೂರವಾಗುತ್ತಿದ್ದಾರೆ.
ಈ ಹಿಂದೆ ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಸೂರ್ಯಕಾಂತಿ, ಜೋಳ ಇದ್ದವು. ಆದರೆ ಸೂರ್ಯಕಾಂತಿ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು, ಬೆಲೆ ವ್ಯತ್ಯಾಸದಿಂದಾಗಿ ರೈತರು ಸೂರ್ಯಕಾಂತಿಯಿಂದ ಹಿಂದೆ ಸರಿಯುತ್ತಿದ್ದಾರೆ. ಹೆಚ್ಚಿನ ಶ್ರಮ ಹಾಗೂ ಬೆಲೆಯಲ್ಲಿನ ಹೆಚ್ಚಳದ ಕೊರತೆಯ ಹಿನ್ನೆಲೆಯಲ್ಲಿ ಜೋಳ ಬೆಳೆಯುವಲ್ಲಿ ರೈತರು ಆಸಕ್ತಿ ಕಳೆದುಕೊಂಡಿದ್ದಾರೆ.
ಹತ್ತಿ, ಕಡಲೆ, ಮೆಕ್ಕೆಜೋಳದತ್ತ ಮುಖ: ಕಡಿಮೆ ಖರ್ಚು, ಹೆಚ್ಚು ಇಳುವರಿ, ಉತ್ತಮ ಬೆಲೆ ಸಿಗುವುದರಿಂದ ಹತ್ತಿ, ಕಡಲೆ ಹಾಗೂ ಮೆಕ್ಕೆಜೋಳದತ್ತ ರೈತರು ಮುಖ ಮಾಡಿದ್ದಾರೆ. ವರ್ಷದಿಂದ ವರ್ಷಕ್ಕೆ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಹೆಚ್ಚಿನ ಬೆಲೆ, ನಿರ್ವಹಣೆ ಸಮಸ್ಯೆ ಇಲ್ಲದಿದ್ದರಿಂದ ರೈತರು ಹತ್ತಿಗೆ ಮೊರೆ ಹೋಗಿದ್ದಾರೆ. ಬೆಲೆಯಲ್ಲಿ ಪ್ರತಿ ವರ್ಷ ಕ್ವಿಂಟಲ್ಗೆ ರು. 4500 ಹೆಚ್ಚಳವಾಗುತ್ತಿರುವುದರಿಂದ ಹತ್ತಿ ಬೆಳೆಯಲು ಆಸಕ್ತಿ ತೋರಿದಂತಾಗಿದೆ. ಇನ್ನು ಮೆಕ್ಕೆಜೋಳ ನಿರ್ವಹಣೆಯಲ್ಲಿ ಹೆಚ್ಚಿನ ಸಮಸ್ಯೆ ಇಲ್ಲದ್ದರಿಂದ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಅಲ್ಲದೆ ಕಡಲೆಗೆ ಉತ್ತಮ ಬೆಲೆ, ಉತ್ತಮ ಇಳುವರಿ ಬರುವುದರಿಂದ ಈ ಬೆಳೆಗಳ ಹಿಂದೆ ಬಿದ್ದಿದ್ದಾರೆ.
ಮರೆಯಾಗುವ ಭೀತಿ: ಈ ಮೊದಲು ಪ್ರತಿಯೊಬ್ಬರ ಹೊಲದಲ್ಲಿ ಜೋಳ, ಸೂರ್ಯಕಾಂತಿ ಬೆಳೆಯುವ ಪರಿಪಾಠವಿತ್ತು. ಜೋಳಕ್ಕೆ ಆದ್ಯತೆ ನೀಡುತ್ತಿದ್ದರು. ಇದೀಗ ಕೆಲವರು ತಮ್ಮ ಮನೆ ಪೂರ್ತಿಯಾಗಿ ಜೋಳ ಬೆಳೆಯುತ್ತಿದ್ದಾರೆ. ಬಹುತೇಕರು ಜೋಳ ಕೈಬಿಟ್ಟು, ಕೊಂಡು ತಿಂದರೂ ಪರವಾಗಿಲ್ಲ, ಬೆಳೆಯುವುದು ಬೇಡ ಎಂಬ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಸಕಾಲಕ್ಕೆ ಮಳೆ ಬಾರದಿರುವುದು ಜೋಳದ ಬೆಳೆಯ ಬಗ್ಗೆ ನಿರಾಸಕ್ತಿ ಹೊಂದಲು ಕಾರಣವಾಗುತ್ತಿದೆ. ಇನ್ನು ಸೂರ್ಯಕಾಂತಿ ವರ್ಷದಿಂದ ವರ್ಷಕ್ಕೆ ಇಳುವರಿ ಇಳಿಕೆಯಾಗಿದ್ದರಿಂದ ಸೂರ್ಯಕಾಂತಿ ಸಹವಾಸ ಬೇಡ ಎನ್ನುತ್ತಾರೆ ರೈತರು. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜೋಳ, ಸೂರ್ಯಕಾಂತಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದರೂ ಆಶ್ಚರ್ಯವಿಲ್ಲ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

