ಕೂಡ್ಲಿಗಿ ತಾಪಂಗೆ ಬೇಕಿದೆ ಕಾಯಕಲ್ಪ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ನ. 15
ಈಗಲೋ ಆಗಲೋ ಬೀಳುತ್ತದೆ ಎನ್ನುವ ಕಟ್ಟಡ, ಆವರಣದ ಹಿಂದೆ ಕೊಳೆತು ನಾರುವ ಬಾವಿ, ಬಾವಿ ಸುತ್ತಮುತ್ತ ಕಾಣುತ್ತೆ ಕೊಳಚೆ ಪ್ರದೇಶ, ಆಡಳಿತ ಯಂತ್ರದ ಮಂದಗತಿ, ತಾಪಂ ಸದಸ್ಯರ ಹಾವು ಏಣಿ ಆಟ, ಸರ್ಕಾರದ ಯೋಜನೆಗಳ ಮಹತ್ವ ತಿಳಿಸುವ ಸಭೆಗಳೇ ಗುಪ್ತ್ ಗುಪ್ತ್...
ಇಂತಿಪ್ಪ ಸಮಸ್ಯೆಗಳ ಹೊದ್ದು ಮಲಗಿದ ಇಲ್ಲಿನ ತಾಲೂಕು ಪಂಚಾಯಿತಿ ಆಡಳಿತ ಕೇವಲ ಲೆಕ್ಕಪತ್ರಗಳಲ್ಲಿಯೇ ಅಭಿವೃದ್ಧಿ ಕಾಣುತ್ತಿದೆಯೆ ಹೊರತು ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸುವ ವಾತಾವರಣ ಮರೀಚಿಕೆಯಾಗಿದೆ.
ತಾಲೂಕು ಪಂಚಾಯಿತಿ ಅಧಿಕಾರದ 2ನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ನಾಟಕದಿಂದ ಸುಮಾರು ಏಳೆಂಟು ತಿಂಗಳ ಕಾಲ ಆಡಳಿತಯಂತ್ರ ಹೊದ್ದು ಮಲಗಿತ್ತು. ಆ ಸಂದರ್ಭದಲ್ಲಿ ಶಾಸಕ ಬಿ. ನಾಗೇಂದ್ರ ವಶದಲ್ಲಿದ್ದ ತಾಪಂ ಆಡಳಿತವನ್ನು ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಹಠದಿಂದ ವರ್ಷಗಟ್ಟಲೆ ತಾಪಂ ಸದಸ್ಯರಿಂದ ಹಾವು ಏಣಿ ಆಟ ನಡೆಸಿದರು. ಇದರಿಂದ ಆ ಸಮಯದಲ್ಲಿ ತಾಪಂ ಆಡಳಿತ ಕುಂಠಿತಗೊಂಡಿತ್ತು. ಆಗ ತಾಲೂಕಿನಾದ್ಯಂತ ಕಾಲರ, ಕುಡಿವ ನೀರಿನ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಸಮಸ್ಯೆಗೆ ಕಿವಿಗೊಡಲಿಲ್ಲ. ತಾಲೂಕು ಪಂಚಾಯಿತಿಗೆ ಅನೇಕ ಯೋಜನೆಗಳನ್ನು ಸಾರ್ಥಕಗೊಳಿಸುವ ಹೊಣೆಗಾರಿಕೆಯಿದೆ.
ಸರ್ಕಾರಿ ಯೋಜನೆಗಳು ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನಗೊಂಡರೂ ಮೇಲುಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ತಾಪಂಗೆ ಇದೆ. ಆದರೆ, ತಾಲೂಕಿನ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಬಸವ ವಸತಿ ಯೋಜನೆ ಮನೆಗಳೇ ಜನತೆಗೆ ದೊರೆತಿಲ್ಲ. ತಾಲೂಕಿನ ಆಡಳಿತದ ಕನ್ನಡಿಯಾಗಿರುವ ತಾಲೂಕು ಪಂಚಾಯಿತಿ ಕಟ್ಟಡವೇ ತುಕ್ಕುಹಿಡಿದಿದೆ. ಕೆಲವೇ ಹೊತ್ತಿಗೆ ಕಟ್ಟಡ ಬೀಳುತ್ತದೆ ಎನ್ನುವಂತಿದೆ. ಇಂತಹ ಕಚೇರಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಿದ್ದು, ಮಳೆ ಬಂದರೆ ಕಡತಗಳು, ಕಂಪ್ಯೂಟರ್ಗಳು ಹಾಳಾಗುತ್ತವೆ. ಇಡೀ ತಾಲೂಕಿಗೆ ಸೂರು ಒದಗಿಸುವ ತಾಪಂ ಕಚೇರಿಗೆ ಸರಿಯಾದ ಸೂರಿಲ್ಲ ಎಂದ ಮೇಲೆ ತಾಲೂಕು ಯಾವ ರೀತಿ ಅಭಿವೃದ್ಧಿಯಾಗಿರಬಹುದು ನೀವೇ ಊಹಿಸಿ.
ಹಳ್ಳಿಗಳಲ್ಲಿ ಮನೆ ಮನೆಗೂ ಶೌಚಾಲಯ ಕಟ್ಟಿಸಿಕೊಳ್ಳಿ, ಸರ್ಕಾರದಿಂದ ಸಹಾಯಧನ ನೀಡುತ್ತೇವೆ ಎಂದು ಹೇಳುವ ತಾಲೂಕು ಪಂಚಾಯಿತಿ, ತನ್ನ ಕಚೇರಿಯಲ್ಲೇ ಸಾರ್ವಜನಿಕರಿಗೆ ಸೂಕ್ತ ಶೌಚಾಲಯ ಇಲ್ಲವೆಂದರೆ ನಂಬುತ್ತೀರಾ? ಕಚೇರಿ ಆವರಣದಲ್ಲಿಯೇ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಇದೆ. ಈ ಕಚೇರಿಗೆ ಜಿಲ್ಲಾ ಮಟ್ಟದ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಬಂದು ಸಭೆ ನಡೆಸಿ ಹೋಗಿದ್ದಾರೆ. ಅಭಿವೃದ್ಧಿ ಬಗ್ಗೆ ಭಾಷಣ, ಚರ್ಚೆ, ಸಭೆ ನಡೆಸುತ್ತಾರೆ. ಆದರೆ ದೀಪದ ಬುಡದಲ್ಲಿ ಕತ್ತಲು ಎಂಬಂತೆ ಇಲ್ಲಿಯ ತಾಪಂ ಮಾತ್ರ ದುರ್ನಾತ ಬೀರುವ ಅವ್ಯವಸ್ಥೆಯ ಆಗರವಾಗಿದೆ.
ಈಗಾಗಲೆ ಕೂಡ್ಲಿಗಿ ತಾಪಂ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆಯೇ ಮುಂದಾಗಿದ್ದರೂ ಕಾಮಗಾರಿಗಳನ್ನು ನಡೆಸಲು ತಾಪಂನ ಎಲ್ಲ ಸದಸ್ಯರ ಅನುಮತಿ ಬೇಕಾಗುತ್ತದೆ. ಹೀಗಾಗಿ ಅನಿವಾರ್ಯ ಕಾರಣಗಳಿಂದ ಈ ಕಾಮಗಾರಿ ಪ್ರಾರಂಭಕ್ಕೆ ವಿಳಂಬವಾಗಿದೆ. ಬರುವ ನ. 28ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಿದ್ದು, ತಾಪಂ ಸದಸ್ಯರ ಅಭಿಪ್ರಾಯದಂತೆ ಕಾಮಗಾರಿ ಪ್ರಾರಂಭಿಸಲಾಗುವುದು. ಅಲ್ಲದೆ ತಾಪಂನಲ್ಲಿ ಶೌಚಾಲಯ ಇಲ್ಲದಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ವ್ಯವಸ್ಥಿತ ಶೌಚಾಲಯ ನಿರ್ಮಾಣಕ್ಕೆ ಮುಂದಾಗುವುದಾಗಿ ತಾಪಂನ ನೂತನ ಇಒ ಡಿ.ಆರ್. ಶಿವಪ್ಪ ತಿಳಿಸಿದ್ದಾರೆ.
ಕಟ್ಟಡ ದುಸ್ಥಿತಿಯಲ್ಲಿದ್ದರೂ ಅದನ್ನು ಕೆಡವಲು ಅಧಿಕಾರಿಗಳು ಅನುಮತಿ ಕೊಡುತ್ತಿಲ್ಲ. ನಿಧಿ- 3 ಹಾಗೂ ಇತರೆ ತಾಪಂ ಅನುದಾನದಲ್ಲಿ ಈಗಾಗಲೇ ರು. 60 ಲಕ್ಷಕ್ಕೂ ಹೆಚ್ಚು ಹಣವಿದ್ದು, ಅದನ್ನು ಕಟ್ಟಡಕ್ಕೆ ಬಳಸಿಕೊಳ್ಳಲು ಆಗುತ್ತಿಲ್ಲ. ಅಧಿಕಾರಿಗಳು ಇಲ್ಲಸಲ್ಲದ ತಾಂತ್ರಿಕ ಕಾರಣ ನೀಡಿ ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ತಾಪಂ ಆಡಳಿತ ಕುಸಿದಿದೆ. ಜನಸಾಮಾನ್ಯರಿಗೆ ನ್ಯಾಯ ದೊರಕುತ್ತಿಲ್ಲ. ತಾಪಂ ಕಚೇರಿ ವಿಷಯಕ್ಕೆ ಬಂದರೆ ಯಾವ ಸಮಯದಲ್ಲಿ ಬೇಕಾದರೂ ಕಟ್ಟಡ ಕುಸಿಯುವ ಅಪಾಯವಿದ್ದರೂ ಇಂತಹ ದುಸ್ಥಿತಿಯಲ್ಲಿ ದಿನನಿತ್ಯದ ಕಾರ್ಯ ಕಲಾಪಗಳು ನಡೆಯುತ್ತಿವೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಶೀಲಿಸಿ, ಆದಷ್ಟು ಬೇಗ ಕಟ್ಟಡ ಹಾಗೂ ಶೌಚಾಲಯ ನಿರ್ಮಿಸಿ ಇಲ್ಲಿಯ ಆಡಳಿತ ಯಂತ್ರ ಚುರುಕುಗೊಳಿಸಬೇಕಿದೆ ಎನ್ನುತ್ತಾರೆ ಕೆ. ಅಯ್ಯನಹಳ್ಳಿ ತಾಪಂ ಸದಸ್ಯ ಗುರುಪ್ರಸಾದ್.
-ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

