ಬಳ್ಳಾರಿ

21ರಂದು ಬೆಂಗಳೂರು ಚಲೋ: ಆದಿಮೂರ್ತಿ

Published On :

ಬಳ್ಳಾರಿ: ಎಸ್ಮಾ ಕಾಯ್ದೆ ಜಾರಿಗೆ ತರಲು ಹುನ್ನಾರ ನಡೆಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದಿಂದ ನ. 21ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಎಚ್.ಎ. ಆದಿಮೂರ್ತಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಕಾರ್ಮಿಕರನ್ನು ಹತ್ತಿಕ್ಕಲು, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸದಂತೆ ತಡೆಯಲು ಎಸ್ಮಾ ಕಾಯಿದೆಯಂತಹ ಕಠಿಣ ಕಾನೂನು ಜಾರಿಗೆ ತರಲು ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂಘಟನೆ ಮತ್ತು ಹೋರಾಟದ ಹಕ್ಕುಗಳನ್ನು ಕೂಡ ನಾಶಪಡಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿರುವುದು ಶೋಚನೀಯ ಎಂದರು.
ಬೆಳಗಾವಿಯಲ್ಲಿ ಇದೇ ತಿಂಗಳ 25ರಿಂದ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಎಸ್ಮಾ ಜಾರಿಗೆ ತರಲು ಸರ್ಕಾರ ಮುಂದಾಗಿರುವುದು ಖಂಡನೀಯ. ಸಾರಿಗೆ ಸಂಸ್ಥೆ, ವಿದ್ಯುತ್ ಹಾಗೂ ಇನ್ನಿತರೆ ಅಗತ್ಯ ಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮುಷ್ಕರ ಮಾಡುವಂತಿಲ್ಲ. ಹಾಗೆ ಮುಷ್ಕರ ಮಾಡಿದ್ದಲ್ಲಿ ಕಾನೂನು ಬಾಹಿರವಾಗುತ್ತದೆ.
ಅಂತಹ ನೌಕರರನ್ನು ಒಂದು ವರ್ಷ ಜೈಲಿಗೆ ಕಳುಹಿಸುವ ಅವಕಾಶವಿರುತ್ತದೆ. ಜತೆಗೆ ಮುಷ್ಕರಕ್ಕೆ ಬೆಂಬಲ ಕೊಟ್ಟವರಿಗೂ ಇದೇ ಶಿಕ್ಷೆಯಾಗುತ್ತದೆ ಎಂದ ಅವರು, ರಾಜ್ಯ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಈ ತರಹದ ಕಾನೂನು ಜಾರಿಗೆ ತರಲು ಮುಂದಾಗುತ್ತಿದೆ. ಯಾವುದೇ ಕಾರಣಕ್ಕೂ ಎಸ್ಮಾ ಕಾಯಿದೆ ಜಾರಿಗೆ ತರಕೂಡದು ಎಂದು ಒತ್ತಾಯಿಸಿದರು.
ಸಂಘದ ಕಾರ್ಯಕಾರಿಣಿ ಸದಸ್ಯ ಕುನ್ನಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಯ್ಯ ಗುತ್ತರಗಿಮಠ, ನಾರಾಯಣ ರೆಡ್ಡಿ, ಚನ್ನಪ್ಪ, ಜಡೇಗೌಡ, ಶಿವಕುಮಾರ್ ಇದ್ದರು.
ತಾತ್ಕಾಲಿಕ ಪಟ್ಟಿ ಪ್ರಕಟ
ಬಳ್ಳಾರಿ: ಪೊಲೀಸ್ ಇಲಾಖೆಯ ಪ್ರಥಮ ದರ್ಜೆ ಸಹಾಯಕ ವೃಂದದ ಹುದ್ದೆಗಳ ಕ್ರೋಡೀಕೃತ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. ಪೊಲೀಸ್ ಪ್ರಧಾನ ಕಚೇರಿಯಿಂದ 2013ರ ಅಕ್ಟೋಬರ್ 21ರಂದು ಹೊರಡಿಸಿರುವ ಸುತ್ತೋಲೆಯನ್ವಯ ನ. 1, 1956ರಿಂದ ಜುಲೈ 25, 2001ರ ಅವಧಿಯ ಪ್ರಥಮ ದರ್ಜೆ ಸಹಾಯಕ ವೃಂದದ ಹುದ್ದೆಗಳ ಕ್ರೋಡೀಕೃತ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಇದಾಗಿದೆ. ಸಂಬಂಧಿಸಿದ ಸಿಬ್ಬಂದಿ ಪರಿಶೀಲನೆ ಮಾಡಿಕೊಳ್ಳಲು ಎಸ್ಪಿ ಕಚೇರಿ ಸಿಬ್ಬಂದಿ ಶಾಖೆಯನ್ನು ಸಂಪರ್ಕಿಸಬಹುದು. ಈ ಜೇಷ್ಠತಾ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ನೇರವಾಗಿ ಬೆಂಗಳೂರಿನ ಪ್ರಧಾನ ಕಚೇರಿ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಸಲ್ಲಿಸಬಹುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.