ಇಬ್ಬರ ಜಗಳದಲ್ಲಿ ರಸ್ತೆ ಬಡವಾಯ್ತು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ನ. 20
ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಅಭಿವೃದ್ಧಿ ಮತ್ತು ನಿರ್ವಹಣೆ ವಿಚಾರದಲ್ಲಿ ಲೋಕೋಪಯೋಗಿ, ಬಂದರು ಒಳನಾಡು ಜಲಸಾರಿಗೆ ಇಲಾಖೆಯು ಪುರಸಭೆಗೆ ಹಸ್ತಾಂತರ ಮಾಡಿರುವ ಹಿನ್ನೆಲೆಯಲ್ಲಿ ಕಿತ್ತಿರುವ ರಸ್ತೆ ರಿಪೇರಿ ಮಾಡುವವರ್ಯಾರು? ಈ ಇಬ್ಬರ ನಡುವೆ ಪಟ್ಟಣದ ರಸ್ತೆಗಳು ಬಡವಾಗಿ ನಿಂತಿವೆ.
ಹೌದು, ಲೋಕೋಪಯೋಗಿ ಇಲಾಖೆ ಎರಡು ವಾರಗಳ ಹಿಂದೆ ರಾಜ್ಯದಲ್ಲಿರುವ ಮಹಾನಗರ, ನಗರ, ಪಟ್ಟಣ ಪ್ರದೇಶಗಳಲ್ಲಿರುವ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಹೊಣೆಯನ್ನು ಆಯಾ ಸ್ಥಳೀಯ ಪ್ರಾಧಿಕಾರವೇ ನೋಡಿಕೊಳ್ಳಬೇಕೆಂಬ ಸುತ್ತೋಲೆಯಿಂದ ರಸ್ತೆಗಳನ್ನು ಹಸ್ತಾಂತರ ಮಾಡಲಾಗಿದೆ. ಆದರೆ, ಇಲ್ಲಿನ ಪುರಸಭೆ ತಿರಸ್ಕಾರ ಮಾಡಿದೆ.
ಕಾಯಿಲೆ ಭಯ: ಪಟ್ಟಣದಲ್ಲಿ ಹಾದು ಹೋಗಿರುವ ವಿವಿಧ ರಾಜ್ಯ ಹೆದ್ದಾರಿಗಳು ಕಿತ್ತು ಹೋಗಿವೆ. ಎಲ್ಲ ತಗ್ಗು ಗುಂಡಿಗಳಿಗೆ ಮಣ್ಣು ಹಾಕಿರುವುದರಿಂದ ಧೂಳುಮಯವಾಗಿ ಅಸ್ತಮಾದಂತಹ ಕಾಯಿಲೆಗಳಿಗೆ ಆಹ್ವಾನ ನೀಡುವಂತಿವೆ.
ನಿತ್ಯ ಸಾವಿರಾರು ವಾಹನಗಳು ಮೈಲಾರ-ತೋರಣಗಲ್ಲು, ಹಡಗಲಿ-ಮಂಡ್ಯ, ಅರಭಾವಿ- ಚಳ್ಳಕೇರಿ ಸೇರಿದಂತೆ ಇನ್ನಿತರ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿವೆ. ವಾಹನಗಳ ಓಡಾಟದಿಂದ ಪಕ್ಕದವರೇ ಕಾಣದಷ್ಟು ಧೂಳು ಹರಡುತ್ತಿದ್ದು, ಸಾರ್ವಜನಿಕರು, ಪ್ರಯಾಣಿಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ಸರ್ಕಾರದ ಸುತ್ತೋಲೆಯಲ್ಲಿ ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆಯನ್ನು ಯಾವುದೇ ಕಾರಣಕ್ಕೂ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಮೊದಲು ಮಣ್ಣು ಹಾಕಿದ್ದು, ಬಿಟ್ಟರೆ ಬೇರ್ಯಾವ ಕೆಲಸ ಮಾಡಿಲ್ಲ.
ಆದರೆ, ಪುರಸಭೆ ಮುಖ್ಯಾಧಿಕಾರಿ ಸರ್ಕಾರ ನೀಡಿರುವ ಸುತ್ತೋಲೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತಾವು ಯಾವುದೇ ಕಾರಣಕ್ಕೂ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಹೊಣೆಯನ್ನು ಹೊರುವುದಿಲ್ಲ. ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ತಮಗೆ ಯಾವುದೇ ಆದೇಶ ಬಂದಿಲ್ಲ. ಈ ವರೆಗೂ ತಮ್ಮ ಇಲಾಖೆ ಕಾರ್ಯದರ್ಶಿಗಳಿಂದ ಯಾವುದೇ ಆದೇಶ ಬಂದಿಲ್ಲ. ಬಂದರೆ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ.
ಹೀಗೆ ಎರಡು ಇಲಾಖೆಗಳ ನಡುವೆ ನಡೆಯುತ್ತಿರುವ ರಸ್ತೆ ಹಸ್ತಾಂತರ ವಿಚಾರ ಅವಾಂತರಗಳನ್ನು ಸೃಷ್ಟಿ ಮಾಡಿದೆ. ಎರಡು ಇಲಾಖೆಗಳ ಕಾರ್ಯದರ್ಶಿಗಳು ಪರಸ್ಪರ ಸಮಗ್ರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಬೇಕಾದ ಸರ್ಕಾರವೇ ಈ ರೀತಿ ಎರಡು ಇಲಾಖೆಗಳ ನಡುವೆ ಗೊಂದಲ ಸೃಷ್ಟಿ ಮಾಡಿ ಅಭಿವೃದ್ಧಿ ಮಾರಕವಾಗಿರುವುದು ಮಾತ್ರ ವಿಪರ್ಯಾಸ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

