ಪಕ್ಷಕ್ಕೆ ನೇಮಕ
ಬಳ್ಳಾರಿ: ರಾಷ್ಟ್ರೀಯ ಜನತಾದಳದ ಕರ್ನಾಟಕ ಪಕ್ಷದ ಉತ್ತರ ಕರ್ನಾಟಕ ಉಸ್ತುವಾರಿಗಳನ್ನಾಗಿ ಪಿ. ಬಂಡೇಗೌಡ ಮತ್ತು ಕಪ್ಪಗಲ್ ರಸೂಲ್‌ಸಾಬ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಆದೇಶ ಹೊರಡಿರುವ ರಾಜ್ಯಾಧ್ಯಕ್ಷ ಜಿ. ಯಾಕೂಬ್, ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಸಲಹೆ ನೀಡಿದ್ದಾರೆ.
ಕಲಾಶ್ರೀ ವಿಜೇತರು
ಬಳ್ಳಾರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿರುವ ಜಿಲ್ಲಾ ಬಾಲಭವನ ನಡೆಸಿದ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಲಾಗಿದೆ. ಚಿತ್ರಕಲೆಯಲ್ಲಿ ಸುಮಂತ್ ಕೊಲಾಚಲಂ ಪ್ರಥಮ, ಕೆ. ಸುಧೀಂದ್ರ ಆಚಾರ್ಯ ದ್ವಿತೀಯ ಹಾಗೂ ಕೊಟ್ರೇಶ್ ಹಿರೇಮಠ ತೃತೀಯ. ಬರವಣಿಗೆ ಸ್ಪರ್ಧೆಯಲ್ಲಿ ಅನುಷಾ ವಿ. ಪ್ರಥಮ, ಶ್ವೇತಾ ಎಸ್. ದ್ವಿತೀಯ ಹಾಗೂ ಮೌನೇಶ್ ಕೆ. ತೃತೀಯ. ನೃತ್ಯದಲ್ಲಿ ಆರ್. ಸೌಮ್ಯಶ್ರೀ ಹಿರೇಮಠ ಪ್ರಥಮ ಹಾಗೂ ಜಿ.ಆರ್. ಸಹನಾ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಶಾಸ್ತ್ರೀಯ ಸಂಗೀತದಲ್ಲಿ ವಿ.ಎಸ್. ಸ್ವಾತಿ ತೃತೀಯ ಹಾಗೂ ವಿಜ್ಞಾನ ಪ್ರದರ್ಶನದಲ್ಲಿ ಎಸ್. ಕೌಸ್ತುಬ್ ಭರದ್ವಾಜ್ ಪ್ರಥಮ, ನಯನಾ ದ್ವಿತೀಯ ಮತ್ತು ಮನೋಜ್‌ಕುಮಾರ್ ತೃತೀಯ ಸ್ಥಾನ ಪಡೆದಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ಅವರು ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿಪತ್ರ ವಿತರಿಸಿದರು. ಕೆ.ಎನ್. ಚಂದ್ರಾನಾಯಕ್, ಜಿ.ಕೆ. ಕೃಷ್ಣಮ್ಮ, ಕೆ. ಕೊಟ್ರಪ್ಪ ಇದ್ದರು.
ಕಾಲುಬಾಯಿಗೆ ಲಸಿಕೆ
ಬಳ್ಳಾರಿ: ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 4,60,608 ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕಲಾಗಿದ್ದು, ಕಣ್ಗಾವಲು ಕಾರ್ಯಕ್ರಮ ಜಾರಿಯಲ್ಲಿರುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಜೆ. ಪಂಪಾಪತಿ ತಿಳಿಸಿದ್ದಾರೆ. ಕೂಡ್ಲಿಗಿ ತಾಲೂಕಿನ ಜಂಗಮ ಸೋವೇನಹಳ್ಳಿ ಗ್ರಾಮದಲ್ಲಿ ಕಾಲುಬಾಯಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿರುವುದು ನಿಜವಾಗಿದ್ದರೂ ಈ ರೋಗದಿಂದ ಯಾವುದೇ ಜಾನುವಾರುಗಳು ಮರಣ ಹೊಂದಿಲ್ಲ. ಇಲಾಖೆಯ ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಟಿ ಪರಿಶೀಲಿಸಿದಾಗ 3 ಎಳೆಯ ಕರುಗಳು ಅಪೌಷ್ಟಿಕತೆ, ಜಂತು ಹುಳುಗಳ ಬಾಧೆ, ಸಮರ್ಪಕ ನಿರ್ವಹಣಾ ಕೊರತೆ ಇತ್ಯಾದಿ ಕಾರಣಗಳಿಂದ ಮರಣ ಹೊಂದಿದೆ ಎಂದು ತಿಳಿದು ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಈ ಗ್ರಾಮದ ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕಲಾಗಿದ್ದು, ರೋಗ ನಿಯಂತ್ರಣದಲ್ಲಿದೆ. ಈ ರೋಗದ ಸೋಂಕು ತಗುಲಿದ 10 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಜಾನುವಾರುಗಳು ಚೇತರಿಸಿಕೊಂಡಿವೆ. ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಕ್ಷಣಗಳು ಕಂಡುಬಂದಲ್ಲಿ ರೈತರು ಹತ್ತಿರದ ಪಶು ವೈದ್ಯರನ್ನು ಸಂಪರ್ಕಿಸಿ, ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಆರೋಗ್ಯ, ಸ್ವಚ್ಛತೆ ಕಾಪಾಡಿಕೊಳ್ಳಿ: ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ಮಕ್ಕಳಿಗೆ ಮೊಬೈಲ್ ಕೊಡಿಸುವ ಹಣದಲ್ಲಿ ಶೌಚಾಲಯ ಕಟ್ಟಿಸಿಕೊಂಡು ಆರೋಗ್ಯದ ರಕ್ಷಣೆ ಜತೆಗೆ ಸ್ವಚ್ಛತೆ ಕಾಪಾಡಿಕೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಎಸ್. ಭೀಮಾನಾಯ್ಕ ಹೇಳಿದರು.
ಪಟ್ಟಣದ ಸಮುದಾಯ ಭವನದಲ್ಲಿ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ತಾಪಂ ಆಯೋಜಿಸಿದ್ದ ಸ್ವಚ್ಛತಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ದನ ಕಾಯುವ ಹುಡುಗರ ಕೈಯಲ್ಲಿ ಐದಾರು ಸಾವಿರ ರುಪಾಯಿ ಮೌಲ್ಯದ ಮೊಬೈಲ್ ಸೆಟ್‌ಗಳಿವೆ. ಆದರೆ ಅವರ ಮನೆಗಳಲ್ಲಿ ಶೌಚಾಲಯವಿಲ್ಲದೆ ಕುಟುಂಬ ಸದಸ್ಯರು ಬಯಲು ಶೌಚಾಲಯ ಅವಲಂಬಿಸಿದ್ದಾರೆ. ಬಯಲು ಶೌಚಾಲಯದಿಂದ ಪರಿಸರ ಹಾಳಾಗುವ ಜತೆಗೆ ವಿವಿಧ ರೋಗಗಳು ಹರಡಿ ಕುತ್ತು ತರುತ್ತವೆ. ಅದ್ದರಿಂದ ಮಕ್ಕಳಿಗೆ ಮೊಬೈಲ್ ಕೊಡಿಸುವ ಬದಲು ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಸಲಹೆ ನೀಡಿದರು. ಹಗರಿಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಎಂ. ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪೂರ್ಯನಾಯ್ಕ, ಉಪಾಧ್ಯಕ್ಷೆ ನಾಗರತ್ನಾ ವೆಂಕಟೇಶ, ತಾಪಂ ಸದಸ್ಯರಾದ ಉಪ್ಪಾರ ಬಾಲಪ್ಪ, ಬಿ. ಗಂಗಮ್ಮ, ಭಾರತಮ್ಮ ಬೆಲ್ಲದ್, ಹುಡೇದ್ ಗುರುಬಸವರಾಜ, ವೈ. ಮಲ್ಲಿಕಾರ್ಜುನ, ಎಚ್.ಎಂ. ಚೋಳರಾಜ, ತಾಪಂ ಇಒ ಬಿಎಂಎಸ್ ವೀರಯ್ಯ, ಪಂರಾಇ ಎಇಇ ಆರ್. ಪ್ರಭು, ಕಲೋಇ ಎಇಇ ಗುರುಬಸಪ್ಪ, ಸಹಾಯಕ ತೋಟಗಾರಿಕಾ ನಿರ್ದೇಶಕ ಪರಮೇಶ್ವರಪ್ಪ ಇದ್ದರು. ಪಿಡಿಒ ವಿಜಯಕುಮಾರ್ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

