ಬಳ್ಳಾರಿ

ಹದಿನೆಂಟರ ಯುವತಿ ಟ್ರ್ಯಾಕ್ಟರ್ ಚಾಲಕಿ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ನ. 20
ಈಗಿನ ಕಾಲೇಜು ಹುಡುಗ, ಹುಡುಗಿಯರಿಗೆ ಶಾರುಖ್‌ಖಾನ್, ಅಮೀರ್ ಖಾನ್, ಸಲ್ಮಾನ್‌ಖಾನ್‌ಗಳೆ ಆದರ್ಶವಾಗುತ್ತಿರುವುದು ಹೆಚ್ಚು. ಅಂತದ್ದರಲ್ಲಿ ಅವರಿಗೆ ಹಳ್ಳಿಯ ಸಾಮಾನ್ಯ ರೈತರ ಕಷ್ಟ, ನಷ್ಟಗಳೆಲ್ಲಿ ತಿಳಿಯಬೇಕು. ಆದರೆ ಇಲ್ಲೊಬ್ಬ 18ರ ಯುವತಿ ಟ್ರ್ಯಾಕ್ಟರ್ ಚಾಲನೆ ಮಾಡುತ್ತಾಳೆ. ಅದು ಶಿಕ್ಷಣ ಪಡೆಯುತ್ತ ಈ ಕೆಲಸ ಮಾಡುತ್ತಾಳೆ.
ಕೂಡ್ಲಿಗಿ ತಾಲೂಕು ಕೊಟ್ಟೂರಿನ ಜೆ.ಪಿ. ನಗರ ನಿವಾಸಿ ದೇವರಮನಿ ಕರಿಬಸಪ್ಪ ಅವರ ಹಿರಿಯ ಮಗಳು ಅರಣಾ ಈಗ ಕೊಟ್ಟೂರಿನ ಸುತ್ತಮುತ್ತ ಗಂಡಸರು ನಾಚುವಂತೆ ಟ್ರ್ಯಾಕ್ಟರ್ ಚಾಲನೆ ಮಾಡುತ್ತಾಳೆ. ಕೇವಲ ಟ್ರ್ಯಾಕ್ಟರ್ ಓಡುಸುವುದಲ್ಲದೇ ಜಮೀನುಗಳನ್ನು ಊಳುವ ಕಷ್ಟದ ಕೆಲಸ ಮಾಡುವ ಮೂಲಕ ಅಪ್ಪನಿಗೆ ಹೆಗಲು ಕೊಟ್ಟಿದ್ದಾಳೆ. ಕಾಲೇಜು ಓದುತ್ತ ಕುಟುಂಬಕ್ಕೆ ಆಸರೆಯಾಗಿರುವುದು ಶ್ಲಾಘನೀಯ ಕಾರ್ಯ.
ಸುಲಭದ ಕೆಲಸವಲ್ಲ: ಟ್ರ್ಯಾಕ್ಟರ್ ಚಾಲನೆ ಮಾಡುವುದೆಂದರೆ ಕಾರು, ಬಸ್ಸು ಚಾಲನೆ ಮಾಡಿದಷ್ಟು ಸುಲಭವಲ್ಲ. ಅದೊಂದು ಸಾಹಸದ ಕೆಲಸ ಎಂದು ತಿಳಿದವರಿಗೆ ಗೊತ್ತು. ಕಾರಣ ಟ್ರಾಯಕ್ಟರ್‌ನಲ್ಲಿ ಗೇರ್, ಕ್ಲಚ್, ಬ್ರೆಕ್ ಎಲ್ಲವೂ ಹೆವಿ ಇರುತ್ತವೆ. ಇನ್ನು 18ರ ಈ ಯುವತಿ ಟ್ರ್ಯಾಕ್ಟರ್‌ನ್ನು ರಸ್ತೆಯಲ್ಲಿ ಓಡಿಸುವುದು ಮಾತ್ರವಲ್ಲ, ಜಮೀನುಗಳಲ್ಲಿ ಸಹ ನೇಗಿಲು ಉಳುಮೆ ಮಾಡುವುದನ್ನು ನೋಡುವುದು ಒಂದು ಸೊಬಗು. ಗಂಡಸರು ಬೆಪ್ಪಾಗುವ ಹಾಗೆ ಜಮೀನು ಹದ ಮಾಡುತ್ತಾಳೆ. ಈಕೆಯ ವಾರಿಗೆಯ ಗೆಳತಿಯರ ಜತೆ ಓದುತ್ತ, ಹರಟುತ್ತ ಕಾಲ ಕಳೆಯುವ ವಯಸ್ಸಿನಲ್ಲಿ ಕಾಲೇಜಿನ ರಜಾದಿನಗಳಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವುದಲ್ಲದೆ ಜಮೀನಿನಲ್ಲಿ ಇತರೆ ಕೆಲಸ ಮಾಡುವ ಮೂಲಕ ಶಿಕ್ಷಣದ ಜತೆಗೆ ದುಡಿಯಬಹುದು ಎಂಬುದನ್ನು ಈಕೆ ತೋರಿಸಿಕೊಟ್ಟಿದ್ದಾಳೆ.
ಅಪ್ಪನೆ ನನಗೆ ಗುರು: ಟ್ರ್ಯಾಕ್ಟರ್ ಚಾಲನೆ ಹೇಗೆ ಕಲಿತೆ ಎಂದು ಅರುಣಾಳನ್ನು ಕೇಳಿದರೆ, ಅಪ್ಪನ ಜತೆಗೆ ನಾನು ಮೊದ್ಲು ಟ್ರ್ಯಾಕ್ಟರ್‌ನಲ್ಲಿ ಹೋಗ್ತಿದ್ದೆ. ಆಗ ಗೇರ್, ಕ್ಲಚ್, ಸ್ಟೇರಿಂಗ್ ಗಮನಿಸ್ತಿದ್ದೆ. ಹಂತ ಹಂತವಾಗಿ ಅಪ್ಪನಿಂದ ಚಾಲನೆ ಕಲಿತೆ. ಆಗಿಂದಾಗ್ಗೆ ಕಾಲೇಜು ಮೈದಾನದಲ್ಲಿ ಅಪ್ಪ ನನ್ಗೆ ಚಾಲನೆ ಮಾಡಲು ಟ್ರ್ಯಾಕ್ಟರ್ ಕೊಡ್ತಿದ್ರು, ಹೀಗಾಗಿ ಬಹುಬೇಗ ಚಾಲನೆ ಕಲಿತೆ. ನನ್ಗೆ ಈಗ ಟ್ರ್ಯಾಕ್ಟರ್ ಓಡಿಸೋದು ಅಂದ್ರೆ ಕಷ್ಟ ಅನಿಸ್ತಾ ಇಲ್ಲ. ಅದೊಂದು ಕಾಯಕ ಅಂದ್ಕೊಂಡಿದ್ದೀನಿ. ಕಾಲೇಜು ರಜೆ ಇದ್ದಾಗ, ಅಪ್ಪನಿಗೆ ಕೆಲಸದ ಹೊರೆ ಇದ್ದಾಗ ನಾನೇ ಜಮೀನು ಉಳುಮೆ ಮಾಡ್ತೀನಿ. ಹೆತ್ತವರಿಗೆ ಇಳಿವಯಸ್ಸಿನಲ್ಲಿ ಸಹಾಯ ಮಾಡದಿದ್ರೆ ಮಕ್ಕಳಾಗಿ ಹುಟ್ಟಿ ಏನು ಪ್ರಯೋಜನ, ಹೆಣ್ಣಾಗಲಿ, ಗಂಡಾಗಲಿ ಕೆಲ್ಸ ಮಾಡೋ ಮನಸ್ಸು ಇದ್ರೆ ಯಾವ ಕೆಲ್ಸಾನು ಕಷ್ಟ ಅನಿಸಲ್ಲ ಎನ್ನುತ್ತಾಳೆ.
ರಿಪೇರಿಯನ್ನೂ ಮಾಡುತ್ತಾಳೆ: ಅಪ್ಪ ಹಗಲೆಲ್ಲ ಟ್ರ್ಯಾಕ್ಟರ್ ಚಾಲನೆ ಮಾಡಿ ದಣಿದು ಮನೆಗೆ ಬಂದರೆ ಟ್ರ್ಯಾಕ್ಟರ್‌ನ್ನು ಒಂದು ಸುತ್ತು ಪರಿಶೀಲನೆ ಮಾಡುವ ಅರುಣಾ, ಸಣ್ಣಪುಟ್ಟ ರಿಪೇರಿ ಇದ್ದರೆ ತಾನೆ ಮಾಡುತ್ತಾಳೆ. ಡೀಸೆಲ್ ಕಡಿಮೆ ಇದ್ದರೆ ಬಂಕ್‌ಗೆ, ಗ್ಯಾರೇಜ್‌ಗೆ ತಾನೆ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಹೋಗುತ್ತಾಳೆ. ಪಟ್ಟಣದ ರಸ್ತೆಗಳಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡುವುದನ್ನು ನೋಡಿದ ಜನತೆ ಕ್ಷಣ ಕಾಲ ತಬ್ಬಿಬ್ಬಾಗುತ್ತಾರೆ. ಜಮೀನುಗಳಲ್ಲಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡುವುದನ್ನು ನೀರು ಕುಡಿದಷ್ಟೇ ಸಲೀಸಾಗಿ ಮಾಡುವ ಅರುಣಾಗೆ ರಸ್ತೆಯಲ್ಲಿ ಟ್ರ್ಯಾಕ್ಟರ್ ಓಡಿಸುವುದು ಕಷ್ಟವೆನಿಸುವುದೆ ಇಲ್ಲ.
ಯುವತಿ ಟ್ರ್ಯಾಕ್ಟರ್ ಚಾಲನೆ ಮಾಡುವುದನ್ನು ನೋಡುವುದೆ ಪಟ್ಟಣದ ಜನತೆಗೆ ಒಂದು ಆನಂದ. ಮೊಬೈಲ್, ಪಾರ್ಕ್, ಕಾಲೇಜು, ಫ್ರೆಂಡ್ಸ್, ಹೊಟೇಲ್‌ಗೆ ಅಲೆಯುತ್ತ ದಿಕ್ಕು ತಪ್ಪುತ್ತಿರುವ ಇಂದಿನ ಯುವತಿಯರಿಗೆ ಅರುಣಾ ಮಾದರಿಯಾಗಿದ್ದಾಳೆ. ಈಕೆಗೊಂದು ಶಹಬ್ಬಾಸ್ ಹೇಳಬೇಕೆ? ಆಕೆಯ ತಂದೆ ಕರಿಬಸಪ್ಪ ಅವರ ದೂ.ಸಂ-8550085478 ಕರೆ ಮಾಡಿ.
- ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.