ಬಳ್ಳಾರಿ

ಸಾವಿನಲ್ಲೂ ಆದರ್ಶ ಮೆರೆದ ಶಿಕ್ಷಕ

Published On :

ಬಳ್ಳಾರಿ: ವಿದ್ಯಾರ್ಥಿಗಳಿಗೆ ಅವರು ಆದರ್ಶ, ಮಾದರಿ ಶಿಕ್ಷಕ. ಮಾತ್ರವಲ್ಲದೇ ಸಾವಿನಲ್ಲೂ ಆದರ್ಶ ಮೆರೆದ ವ್ಯಕ್ತಿತ್ವ. ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಆದರ್ಶಪ್ರಾಯರಾಗಿ ಚಿರಸ್ಥಾಯಿಯಾಗಿ ಉಳಿದವರು ಶಿಕ್ಷಕ ಹೆಮಾದ್ರಿ ಭಟ್.
ಹೌದು, ಅವರು ಕೇವಲ ಜೀವಿತಾವಧಿಯಲ್ಲಿ ಆದರ್ಶ ಶಿಕ್ಷಕರಾಗದೆ, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಆದರ್ಶವಾಗಿದ್ದಾರೆ. ಆರ್‌ಎಸ್‌ಎಸ್ ಕಾರ್ಯವಾಹ, ಜಿಲ್ಲಾ ಸಂಪರ್ಕ ಪ್ರಮುಖರಾಗಿ ಸೇವೆ ಸಲ್ಲಿಸಿ, ವಿವಿಧ ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಆ ದೇವರಿಗೆ ಇವರ ಸೇವಾ ಕಾರ್ಯ ನೋಡಲು ಆಗಲಿಲ್ಲ ಎಂದು ಕಾಣುತ್ತದೆ. ಅದಕ್ಕಾಗಿಯೇ ಶುಕ್ರವಾರ ಮಧ್ಯರಾತ್ರಿ ಹೇಮಾದ್ರಿ ಭಟ್ ಅವರನ್ನು ತನ್ನ ಬಳಿಗೆ ಕರೆದುಕೊಂಡುಬಿಟ್ಟ. ಅನಾರೋಗ್ಯದಿಂದ ಬಳಲುತ್ತಿದ್ದ ಮೂಲತ ಶಿರಸಿ ಸಮೀಪದ ಓಣಿಕೇರಿಯ ಹೇಮಾದ್ರಿ ಭಟ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯೆರಾತ್ರಿ ನಿಧನರಾಗಿದ್ದಾರೆ.
ಶಿಕ್ಷಣದ ಬಗ್ಗೆ ಅತೀವ ಕಾಳಜಿ: ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವ ಜತೆಗೆ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಚನ್ನಾಗಿ ಓದಿ, ಮುಂದೆ ಬರಬೇಕೆಂದು ಹುರಿದುಂಬಿಸಿ, ಬೆಳಗಿನ ಜಾವ 4ಕ್ಕೆ ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ, ಅವರನ್ನು ಎಬ್ಬಿಸಿ ಓದಿಸುವುದಕ್ಕೆ ತೊಡಗಿಸುವ ಅವರ ಮನೋಭಾವ ಮಕ್ಕಳ ಶೈಕ್ಷಣಿಕ ಕಾಳಜಿಗೆ ಹಿಡಿದ ಕೈಗನ್ನಡಿ. ದೂರದ ಮನೆಗಳ ವಿದ್ಯಾರ್ಥಿಗಳಿಗೆ ಫೋನ್ ಮಾಡಿ ಎಬ್ಬಿಸುತ್ತಿದ್ದರು. ವೈಯಕ್ತಿಕ ಬದುಕಿನಿಂದ ಸಾಮಾಜಿಕ, ಮಕ್ಕಳ ಶೈಕ್ಷಣಿಕ ಕಾಳಜಿಗೆ ಹೆಚ್ಚಿನ ಒತ್ತು ನೀಡಿದ್ದ ಅವರ ನಡೆ, ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ.
ಸಾವಿನಲ್ಲೂ ಆದರ್ಶ: 2009ರಲ್ಲಿ ಅವರಿಗೆ ಬೈಪಾಸ್ ಸರ್ಜಿಯಾದರೂ ಅದನ್ನು ಲೆಕ್ಕಿಸದೆ ಆಸರೆ ಟ್ರಸ್ಟ್ ಮೂಲಕ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ತೆರೆಮರೆಯಲ್ಲಿ ಸೇವಾ ಕಾರ್ಯ ಮಾಡುವ ರೀತಿ ಎಲ್ಲರೂ ಮೆಚ್ಚುವಂತದ್ದಾಗಿತ್ತು. ಬಿಎಸ್‌ಸಿ, ಬಿಇಡಿ ಮಾಡಿರುವ ಅವರು ಗಣಿತ ಎಂದರೆ ನೀರು ಕುಡಿದಷ್ಟು ಸುಲಭ. ಇಂಥಹವರು ಶುಕ್ರವಾರ ಮಧ್ಯರಾತ್ರಿ ನಿಧರಾಗಿದ್ದು, ಅವರ ಕಣ್ಣುಗಳನ್ನು ವಿಮ್ಸ್‌ನ ನೇತ್ರ ಭಂಡಾರಕ್ಕೆ ದಾನ ಮಾಡಿ ಇತರರಿಗೆ ಆದರ್ಶ ಪ್ರಾಯರಾಗಿದ್ದಾರೆ.
ಹಲವು ಸಾಮಾಜಿಕ ಕಾರ್ಯ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಳ್ಳಾರಿ ನಗರ ಕಾರ್ಯವಾಹರಾಗಿ 3 ವರ್ಷ ಹಾಗೂ 3 ವರ್ಷ ಜಿಲ್ಲಾ ಸಂಪರ್ಕ ಪ್ರಮುಖರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ನಿವೃತ್ತಿ ಜೀವನದಲ್ಲಿ ಆಸರೆ ಟ್ರಸ್ಟ್ ಸ್ಥಾಪಿಸಿ ವೈದ್ಯಕೀಯ ತಪಾಸಣೆ ಶಿಬಿರ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ, ಭಾರತ ವಿಕಾಸ್ ಪರಿಷತ್ ಅಧ್ಯಕ್ಷರಾಗಿದ್ದಾಗ ರಾಜಸ್ಥಾನ ಕೃತಕ ಕಾಲು ಜೋಡಣಾ ಶಿಬಿರ ಏರ್ಪಡಿಸಿ, ಉಚಿತವಾಗಿ ಅಂಗವಿಕಲರಿಗೆ ಉಚಿತ ಕಾಲು ಜೋಡಣೆ ಮಾಡಿಸಿದ್ದರು. ಪ್ರಾಮಾಣಿಕತೆ, ನ್ಯಾಯ ನಿಷ್ಠುರತೆ, ಸಮಯಪ್ರಜ್ಞೆ ಇವರಲ್ಲಿ ಹಾಸುಹೊಕ್ಕಾಗಿತ್ತು ಎಂಬುದಕ್ಕೆ ಹಲವು ಉದಾಹರಣೆಗಳಿವೆ.
ಅನಾರೋಗ್ಯದಿಂದ ನಿಧನ: ಕೆಲ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹೆಮಾದ್ರಿ ಭಟ್ ಶುಕ್ರವಾರ ಮಧ್ಯರಾತ್ರಿ ನಿಧನರಾಗಿದ್ದಾರೆ. ಪತ್ನಿ, ಮೂವರು ಪುತ್ರರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಆಪಾರ ಬಂದು ಬಳಗ, ಸ್ನೇಹಿತ ವೃಂದ, ಶಿಷ್ಯವೃಂದ ಅಗಲಿದ್ದಾರೆ. ಇವರ ಸಂಸ್ಕಾರ ನಗರದ ಹರೀಶ್ಚಂದ್ರ ಘಾಟ್‌ನಲ್ಲಿ ಶನಿವಾರ ಬೆಳಗ್ಗೆ ನಡೆಯಿತು.
ಮಾಜಿ ಸಚಿವ ಶ್ರೀರಾಮುಲು, ಮಾಜಿ ವಿಪ ಸದಸ್ಯ ಶಶಿಲ್ ನಮೋಶಿ, ಕಲ್ಯಾಣಸ್ವಾಮೀಜಿ, ಗುರುಲಿಂಗನಗೌಡ, ರಾಮಲಿಂಗಪ್ಪ, ವೀರಶೇಖರ ರೆಡ್ಡಿ, ವಿವಿಧ ಸಂಘಟನೆಗಳ ಪ್ರಮುಖರಾದ ಗೌರಿಪ್ರಸಾದ್, ಗುರುರಾಜ್, ವಿನಯಕುಮಾರ್, ರಾಜಶೇಖರ್, ಅನಿಲ್ ನಾಯ್ಡು, ಕಣಂರ್ ಕೃಷ್ಣ, ಎಂ. ಕೃಷ್ಣ, ರಾಜಶೇಖರ್, ಬಸವರಾಜ್, ಪ್ರಭುದೇವ ಕಪ್ಪಗಲ್, ಜಯತೀರ್ಥ, ಆರ್‌ಎಸ್‌ಎಸ್, ಬಿಎಂಎಸ್, ಎಬಿವಿಪಿ, ವಿಎಚ್‌ಪಿ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.


-ಶಶಿಧರ ಮೇಟಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.