ಜೆಸ್ಕಾಂ ವಿಭಾಗೀಯ ಕಚೇರಿ ಸ್ಥಳಾಂತರ ಬೇಡ
ಹಗರಿಬೊಮ್ಮನಹಳ್ಳಿ: ಹೂವಿನಹಡಗಲಿ ಹಾಗೂ ಕೂಡ್ಲಿಗಿ ತಾಲೂಕುಗಳಿಗೆ ಮಧ್ಯಭಾಗದಲ್ಲಿರುವ ಹಗರಿಬೊಮ್ಮನಹಳ್ಳಿಯಲ್ಲಿ ಜೆಸ್ಕಾಂ ವಿಭಾಗೀಯ ಕಚೇರಿ ಆರಂಭವಾಗುವುದು ನಾಗರಿಕರ ಹಿತದೃಷ್ಟಿಯಿಂದ ಅತ್ಯಂತ ಸೂಕ್ತ ಮತ್ತು ನ್ಯಾಯಸಮ್ಮತ ಕಾರ್ಯವಾಗಿದ್ದು, ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳು ಕೂಡಲೆ ಮಧ್ಯಪ್ರವೇಶಿಸಿ ಇಲ್ಲಿಂದ ಜೆಸ್ಕಾಂ ವಿಭಾಗೀಯ ಕಚೇರಿ ಸ್ಥಳಾಂತರಗೊಳ್ಳದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಮಾಜಿ ಸಚಿವ ಎನ್.ಎಂ. ನಬಿ ಆಗ್ರಹಿಸಿದ್ದಾರೆ.
ಮಂಗಳವಾರ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು, ಜೆಸ್ಕಾಂ ವಿಭಾಗೀಯ ಕಚೇರಿ ಸ್ಥಳಾಂತರ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಸದ್ಯದಲ್ಲಿಯೇ ಈ ಭಾಗದ ಕಬ್ಬು ಬೆಳೆಗಾರರು, ರೈತಮುಖಂಡರ ನಿಯೋಗವನ್ನು ಮುಖ್ಯಮಂತ್ರಿ ಬಳಿಗೆ ಕೊಂಡೊಯ್ಯಲಾಗುವುದು ಎಂದರು.
ಈ ಹಿಂದೆ ನಾನು ಪ್ರತಿನಿಧಿಸುತ್ತಿದ್ದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನವಾಗಿದ್ದ ಹಗರಿಬೊಮ್ಮನಹಳ್ಳಿ ಭೌಗೊಳಿಕವಾಗಿ ಹೂವಿನಹಡಗಲಿ, ಕೂಡ್ಲಿಗಿ ಹಾಗೂ ಮುಂದೆ ಹೊಸ ತಾಲೂಕು ಆಗಲಿರುವ ಕೊಟ್ಟೂರಿಗೆ ಅತ್ಯಂತ ಹತ್ತಿರದ ಸ್ಥಳವಾಗಿದೆ. ಎಲ್ಲ ಕಡೆಯಿಂದಲೂ ಈ ಪಟ್ಟಣ ಸಂಪರ್ಕಿಸಲು ಉತ್ತಮ ರಸ್ತೆ, ಸಾರಿಗೆ ಸಂಪರ್ಕದ ವ್ಯವಸ್ಥೆಯಿದೆ.
ಆದರೆ, ಹಲವು ಕಾಣದ ಕೈಗಳ ರಾಜಕೀಯ ಕುತಂತ್ರದ ಕಾರಣಗಳಿಂದಾಗಿ ವಿಭಾಗೀಯ ಕಚೇರಿಗಳಿಂದ ಈ ತಾಲೂಕು ವಂಚಿತವಾಗುತ್ತ ಬರುತ್ತಿದೆ ಎಂದು ವಿಷಾದಿಸಿದ ಅವರು, ಈ ಬಾರಿ ಮಂಜೂರಾಗಿರುವ ಜೆಸ್ಕಾಂ ವಿಭಾಗೀಯ ಕಚೇರಿಯನ್ನು ಸ್ಥಳಾಂತರಗೊಳಿಸದಂತೆ ತಾಲೂಕಿನ ಜನತೆಯ ಪರವಾಗಿ ಸಿಎಂ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಬೆಳೆಗಾರರ ಹಿತರಕ್ಷಣೆ: ಸಿಎಂ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಕಬ್ಬು ಬೆಳೆಗಾರರು ಸೇರಿದಂತೆ ಎಲ್ಲ ರೀತಿಯ ಕೃಷಿಯಲ್ಲಿ ತೊಡಗಿರುವ ರೈತರ ಹಿತರಕ್ಷಣೆಗೆ ದುಡಿಯುತ್ತಿರುವ ಸರ್ಕಾರವಾಗಿದೆ. ಕಬ್ಬು ಪೂರೈಕೆಗೆ ಸಂಬಂಧಿಸಿದಂತೆ ಹೊಸಪೇಟೆ ಐಎಸ್ಆರ್ ಸಕ್ಕರೆ ಕಾರ್ಖಾನೆ ಮತ್ತು ಬೆಳೆಗಾರರ ಮಧ್ಯೆ ಹಲವು ವರ್ಷಗಳಿಂದಲೂ ಇರುವ ಸಮಸ್ಯೆಯನ್ನು ಸಿಎಂ ಗಮನಕ್ಕೆ ತರುವುದಲ್ಲದೆ, ಕಾನೂನು ಅಡಿಯಲ್ಲಿಯೇ ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

