ಬಳ್ಳಾರಿ

ಗಾಂಧೀಜಿ ತತ್ವಾದರ್ಶದಿಂದ ಜೀವನ ಉತ್ತಮ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 2
ಸತ್ಯ, ಶಾಂತಿ, ಅಹಿಂಸೆಯ ಪ್ರತಿಪಾದಕ ಗಾಂಧೀಜಿಯವರ ತತ್ವಾದರ್ಶಗಳನ್ನು ಅನುಸರಿಸಿ, ಸಾರ್ಥಕ ಜೀವನ ನಡೆಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಕೈದಿಗಳಿಗೆ ತಿಳಿಸಿದರು.
ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಾರ್ತಾ ಇಲಾಖೆ, ಕೇಂದ್ರ ಕಾರಾಗೃಹ, ವಕೀಲರ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಂತಿ ವಿದ್ಯಾಕೇಂದ್ರ ಜಂಟಿಯಾಗಿ ಹಮ್ಮಿಕೊಂಡಿದ್ದ ಗಾಂಧೀಜಿ ವಿಚಾರಧಾರೆಗಳು ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
1ನೇ ಅಪರ ಜಿಲ್ಲಾ ನ್ಯಾಯಾಧೀಶ ಎಂ.ಎಸ್. ಪಾಟೀಲ್ ಮಾತನಾಡಿ, ಗಾಂಧೀಜಿಯವರ ನೆನಪಷ್ಟೇ ಸಾಲದು. ಅವರ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ಗಾಂಧೀಜಿಯವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು. ಕೇಂದ್ರ ಕಾರಾಗೃಹದ ಅಧೀಕ್ಷಕ ಪಿ.ವಿ. ಆನಂದರೆಡ್ಡಿ ಮಾತನಾಡಿ, ಗಾಂಧೀಜಿ ದೇಶದ ಸ್ವಾತಂತ್ರ್ಯಕ್ಕಾಗಿ ಜೈಲುವಾಸ ಅನುಭವಿಸಿದರು. ಸಮಾಜದ ಒಳಿತಿಗಾಗಿ ಜೈಲುವಾಸ ಅನುಭವಿಸಬೇಕೆ ಹೊರತು ಅಪರಾಧ ಎಸಗಿ ಜೈಲುವಾಸ ಮಾಡುವಂತಾಗಬಾರದು ಎಂದರು.
ಅನ್ಯ ದೇಶಗಳಲ್ಲೂ ಪಾಲನೆ: ವಕೀಲರ ಸಂಘದ ಅಧ್ಯಕ್ಷ ಪಿ. ಸಿದ್ದಾರೆಡ್ಡಿ ಮಾತನಾಡಿ, ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗದೆ ಅಸ್ಪೃಶ್ಯತೆ ನಿರ್ಮೂಲನೆಗೆ ಹೋರಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಅನ್ಯಾಯ ನಡೆದರೂ ಶಾಂತಿ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳಬಹುದೆಂದು ತೋರಿಸಿಕೊಟ್ಟರು. ಇವರ ಆದರ್ಶಗಳು ಅನ್ಯ ದೇಶಗಳಲ್ಲೂ ಪಾಲನೆಯಾಗುತ್ತಿವೆ ಎಂದು ತಿಳಿಸಿದರು.
ಜಿಪಂ ಸಿಇಒ ಎಂ. ಮಂಜುನಾಥ ನಾಯಕ್ ಮಾತನಾಡಿದರು. ಗಾಂಧೀಜಿ ವಿಚಾರಧಾರೆಗಳು ಕುರಿತು ಕೊಟ್ಟೂರು ಸರ್ಕಾರಿ ಪಪೂ ಕಾಲೇಜಿನ ಕನ್ನಡ ಉಪನ್ಯಾಸಕ ಗೋವಿಂದಪ್ಪ ಮಾತನಾಡಿ, ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ದ್ವೇಷದಿಂದ ಯಾವ ಸಾಧನೆಯೂ ಸಾಧ್ಯವಿಲ್ಲ. ಗಾಂಧೀಜಿಯವರು ನಡೆಸಿದ ಅಸಹಕಾರ ಚಳವಳಿ, ಕಾಯ್ದೆ ಭಂಗ ಚಳವಳಿ, ಸ್ವದೇಶಿ ಚಳವಳಿ ಕುರಿತು ವಿವರಿಸಿದರು.
ಕಾರಾಗೃಹದ ವಾರ್ಡನ್ ಕರಿಗಾರ್ ಹಾಡಿದ ತೀರಿತು ಅಣ್ಣ, ತೀರಿತು ತಮ್ಮ ಜೈಲು ಬಂಧನ... ಎನ್ನುವ ಗೀತೆ ಎಲ್ಲರ ಮನಸೆಳೆಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ಚಂದ್ರಶೇಖರ್ ಆಜಾದ್, ಭಗತ್‌ಸಿಂಗ್ ಹಾಗೂ ಗಾಂಧೀಜಿ ಕುರಿತು ವಿಶ್ವಸಾಗರ ನೇತೃತ್ವದಲ್ಲಿ ಬಂಧಿಗಳಿಂದ ಕಿರುನಾಟಕ ಪ್ರದರ್ಶನ ಹಾಗೂ ಶಾಂತಿ ವಿದ್ಯಾಕೇಂದ್ರದ ಮುಖ್ಯಸ್ಥೆ ಎಸ್. ಲಕ್ಷ್ಮಿ ಅವರಿಂದ ಬಾಪು ಜನಪ್ರಿಯ ಭಜನೆಗಳ ಗಾಯನ ಅರ್ಥಪೂರ್ಣವಾಗಿ ಜರುಗಿದವು.
2ನೇ ಅಪರ ಜಿಲ್ಲಾ ನ್ಯಾಯಾಧೀಶ ಬಿ.ವಿ. ಗುದ್ಲಿ, ಕೌಟುಂಬಿಕ ನ್ಯಾಯಾಧೀಶ ರಘುನಾಥ್, ನ್ಯಾಯಾಧೀಶರಾದ ಲತಾ, ಝರೀನ್, ಯಮನಪ್ಪ, ವಕೀಲರ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಪಿಪಿ ರಾಥೋಡ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಚ್. ಶ್ರೀನಿವಾಸ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿಶ್ವಸಾಗರ ನಿರೂಪಿಸಿದರು. ರಾಜು ಬಾವಿಹಳ್ಳಿ ವಂದಿಸಿದರು.
ಗಾಂಧಿ ಜಯಂತಿ: ಸ್ವಚ್ಛತಾ ಆಂದೋಲನ
ಹೂವಿನಹಡಗಲಿ:  ಗ್ರಾಮ ಸ್ವಚ್ಛತಾ ಆಂದೋಲನ, ಬಡವರಿಗೆ ಬಟ್ಟೆ ವಿತರಣೆ ಮತ್ತು ವೃದ್ಧರಿಗೆ ಮಾಸಾಶನ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಗಾಂಧಿ ತತ್ವಗಳನ್ನು ಸಂಘ-ಸಂಸ್ಥೆಗಳು ಅಳವಡಿಸಿಕೊಂಡು ವಿಶೇಷವಾಗಿ ಗಾಂಧಿ ಜಯಂತಿ ಆಚರಣೆ ಮಾಡಿದ್ದಾರೆ.
ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಸಂಘದ ನೂರಾರು ಮಹಿಳೆಯರು ಕೋಟೆ ಬಡಾವಣೆಯಲ್ಲಿ ಗ್ರಾಮ ಸ್ವಚ್ಛತಾ ಆಂದೋಲನ ನಡೆಸಿದರು. ಕಾರ್ಯಕ್ರಮವನ್ನು ಪುರಸಭೆ ಸದಸ್ಯ ಕೋಡಿಹಳ್ಳಿ ಕೊಟ್ರೇಶ ಉದ್ಘಾಟಿಸಿದರು. ನಿವೃತ್ತ ತಾಲೂಕು ವೈದ್ಯಾಧಿಕಾರಿ ಡಾ. ಕೆ. ಮಲ್ಲಿಕಾರ್ಜುನಗೌಡ ಮಾತನಾಡಿ, ಗಾಂಧಿ ಜಯಂತಿ ಕೇವಲ ಆಚರಣೆಗೆ ಸೀಮಿತವಾಗದೆ, ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತು ಪರಿಪಾಲನೆ ಮಾಡಿದರೆ ದೈನಂದಿನ ಬದುಕಿನ ಶೈಲಿಯೇ ಬದಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದಿಂದ ವೃದ್ಧೆ, ಪಟ್ಟಣದ ಹಡಪದ ಮಲ್ಲಮ್ಮಗೆ ರು. 500 ಮಾಸಾಶನದ ಚೆಕ್ ವಿತರಿಸಲಾಯಿತು. ಪುರಸಭೆ ಸದಸ್ಯ ಸಂತೋಷ್ ಜೈನ್, ಸಂಘದ ಯೋಜನಾಧಿಕಾರಿ ದಯಾನಂದ, ರವಿಕುಮಾರ್, ಸುರೇಶ ಇತರರಿದ್ದರು.
ಸಂಘದ ಮೇಲ್ವಿಚಾರಕಿ ಸುನಂದ, ಶಹಿನಾಜ್, ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು. ಅನಂತರ ಇಲ್ಲಿನ ಕೋಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದ ಮುಂದುಗಡೆ ಮಹಿಳೆಯರು ಕಸಗುಡಿಸುವ ಮೂಲಕ ಸ್ವಚ್ಛತೆ ಶ್ರಮದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.