ಹಂಪಿ ವಿವಿ: ಪ್ರಶಸ್ತಿ ವಿಜೇತ ಚಿತ್ರಗಳ ಸಂವಾದ
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪದರ್ಶನ ಹಾಗೂ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಪಿ. ಲಂಕೇಶ ಅವರ ಬಿರುಕು ಕಿರು ಕಾಂದಬರಿ ಆಧಾರಿತ ಪಲ್ಲವಿ ಚಲನಚಿತ್ರದ ಸಂವಾದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಸಿ. ವೆಂಕಟೇಶ್ ಮಾತನಾಡಿ, 1975-76 ರ ವೇಳೆಯಲ್ಲಿ ಗಾಢವಾಗಿದ್ದ ತುರ್ತು ಪರಿಸ್ಥಿತಿಯ ಒತ್ತಡಗಳಿಂದ ಹೊರಬರಲು ಬಹುಮುಖಿ ಪ್ರತಿಭೆಯ ಪಿ. ಲಂಕೇಶ್ ಅವರು ಪಲ್ಲವಿ ಚಲನಚಿತ್ರದ ಪ್ರಯೋಗದ ಮುಖೇನ ತಮ್ಮ ಭಾವನೆಗಳನ್ನು ಮೂಡಿಸಿದ್ದು ಗಮನಾರ್ಹ. ಅಂದಿನ ಸಮಾಜ, ವ್ಯಕ್ತಿ, ಸಂಘಟನೆ, ರಾಜಕಾರಣ, ಕುಟುಂಬ, ಗಂಡು, ಹೆಣ್ಣಿನ ಸಂಬಂಧಗಳು, ವ್ಯವಸ್ಥೆಯ ದಬ್ಬಾಳಿಕೆ, ಆಡಳಿತಶಾಹಿ ಗುಮಾನಿ, ಮನದಾಳದ ತುಮುಲಗಳು ಸೇರಿದಂತೆ ಮೊದಲಾದವುಗಳನ್ನು ವಾಸ್ತವ ಹಾಗೂ ಅವಾಸ್ತವಿಕತೆಗಳೊಂದಿಗೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟ ಸಂಕೀರ್ಣ ಸ್ಥಿತಿಯನ್ನು ಪಲ್ಲವಿ ಚಲನಚಿತ್ರದ ಮೂಲಕ ಲಂಕೇಶ್ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಅಭಿಪ್ರಾಯಿಸಿದರು.
ಅನುಭೂತಿ ಭಿನ್ನ ಬಗೆಯದು: ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಶಾಂತಿ ಚಲನಚಿತ್ರದ ಸಂವಾದದಲ್ಲಿ ಹಂಪಿ ವಿವಿಯ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಆರ್. ಗೋವಿಂದರಾಜು ಮಾತನಾಡಿ, ಬರಗೂರು ರಾಮಚಂದ್ರಪ್ಪ ತಮ್ಮದೇ ಆದ ಕಥೆ, ಚಿತ್ರಕತೆ ಹಾಗೂ ನಿರ್ದೇಶನದ ಮೂಲಕ ಚಿತ್ರೀಕರಿಸಿದ ಕಲಾಕೃತಿಯೇ ಶಾಂತಿ. ಸೃಜನಶೀಲ ಲೇಖಕರೊಬ್ಬರು ತಮ್ಮದೆ ಆದ ಹಿನ್ನೆಲೆ ಹಾಗೂ ಸಂವೇದನೆಗಳ ಮೂಲಕ ಚಿತ್ರ ನಿರ್ಮಿಸಿದಲ್ಲಿ ಅದು ಕೊಡುವ ಅನುಭೂತಿ ಭಿನ್ನ ಬಗೆಯದು. ಅಂಥ ಅನುಭೂತಿ ಈ ಚಿತ್ರದಿಂದ ಆಗುತ್ತದೆ. ಯುದ್ಧ ಮತ್ತು ಶಾಂತಿಯ ನಡುವಿನ ಸಂಘರ್ಷಗಳನ್ನು ಒಬ್ಬ ಕಲಾಕಾರಳ ಮುಖೇನ ಅಭಿವ್ಯಕ್ತಿಸುವುದು ಇಲ್ಲಿ ಪ್ರಧಾನವಾಗಿದೆ ಎಂದರು.
ಜಾಗತಿಕ ನೆಲೆಯಲ್ಲಿ ಹೆಚ್ಚು ಆತಂಕಕ್ಕೆ ಎಡೆ ಮಾಡಿಕೊಟ್ಟಿರುವ ಭಯೋತ್ಪಾದನೆಯ ಕಬಂಧ ಬಾಹುಗಳ ಹಿಡಿತವನ್ನು ಈ ಚಿತ್ರ ಭಿನ್ನವಾಗಿ ಹೊರಹಾಕಿದೆ. ವಿಶ್ವಸಂಸ್ಥೆಯ ಶಾಂತಿ ಸಮಾವೇಶಕ್ಕೆ ತನ್ನ ಕಲಾಕೃತಿಗಳ ಮೂಲಕ ತೆರಳಲಿರುವ ಕಲಾಕಾರಳೊಬ್ಬಳ ಸುತ್ತ ಹೆಣೆದುಕೊಂಡಿರುವ ಈ ಕಥೆ ಆತಂಕ, ಗಂಭೀರ ಸ್ವರೂಪಗಳನ್ನು ಪಡೆಯುತ್ತಾ ಹೋಗುತ್ತದೆ. ತನ್ನ ಭಿತ್ತಿಯಲ್ಲಿ ಶಾಂತಿಯ ಪ್ರತಿರೂಪವನ್ನು ಕುಂಚದ ಮೂಲಕ ಅಭಿವ್ಯಕ್ತಿಸಿ ಅವುಗಳನ್ನು ಸಮಾವೇಶದಲ್ಲಿ ಅನಾವರಣಗೊಳಿಸಲು ನಡೆಯುವ ಪ್ರಯತ್ನ ಈ ಚಿತ್ರ ತೆರೆದುಕೊಳ್ಳುತ್ತಾ ಸಾಗುತ್ತದೆ ಎಂದು ಹೇಳಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

