ಮೆಟ್ರಿಯಲ್ಲಿ 8 ಮಂದಿಗೆ ವಾಂತಿ, ಭೇದಿ : ಚಿಕಿತ್ಸೆ
ಕಂಪ್ಲಿ: ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಮದಲ್ಲಿ ನಾಲ್ಕು ದಿನಗಳಿಂದ 8 ವಾಂತಿ, ಭೇದಿ ಪ್ರಕರಣಗಳು ದಾಖಲಾಗಿದ್ದು, ತಾಪಂ ಇಒ, ತಾಲೂಕು ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ, ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಜಾಗೃತಿ ವಹಿಸಲು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಲ್.ಆರ್. ಶಂಕರ್ ನಾಯಕ್ ಮಾತನಾಡಿ, ಗ್ರಾಮದಲ್ಲಿ ಸೆ. 27ರಿಂದ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ಇಬ್ಬರನ್ನು ಗಂಗಾವತಿ, ಒಬ್ಬರನ್ನು ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆ. 28ರಿಂದ ಗ್ರಾಮದಲ್ಲಿ ತಾತ್ಕಾಲಿಕ ತುರ್ತು ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ. ವಾಂತಿ, ಭೇದಿ ಕಾಣಿಸಿಕೊಂಡವರು ಗುಣಮುಖರಾಗಿದ್ದಾರೆ ಎಂದು ಹೇಳಿದರು.
ತಾಪಂ ಇಒ ರಮೇಶ್ ತಳವಾರ ಮಾತನಾಡಿ, ಗ್ರಾಮದಲ್ಲಿ 250 ಜನರನ್ನು ಪರೀಕ್ಷಿಸಿದ್ದು, 8 ಪ್ರಕರಣಗಳು ಪತ್ತೆಯಾಗಿವೆ. ವಾಂತಿ, ಭೇದಿ ಹತೋಟಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ, ಜನತೆಯಲ್ಲಿ ಜಾಗ್ರತೆ ಮೂಡಿಸುವಲ್ಲಿ ನಿಗಾವಹಿಸುವಂತೆ ಆದೇಶಿಸಿದೆ ಎಂದರು.
ಕಂಪ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ್, ಗ್ರಾಮದ ರೋಗಿಗಳ ಮನೆಗೆ ತೆರಳಿ ಮಲ ಮತ್ತು ನೀರಿನ ಮಾದರಿ ಸಂಗ್ರಹಿಸಿ ಬಳ್ಳಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಲೋಜಿನ್ ಮಾತ್ರೆ ವಿತರಿಸಲಾಗುತ್ತಿದೆ. 2 ಕಿರಿಯ ಆರೋಗ್ಯ ಸಹಾಯಕರು, 9 ಆಶಾ ಕಾರ್ಯಕರ್ತರು, ಆಯುಷ್ ವೈದ್ಯಾಕಾರಿ ಡಾ. ವಿಜಯಶ್ರೀ ಹಾಗೂ ಸಿಬ್ಬಂದಿ ಗ್ರಾಮದಲ್ಲಿ ಬೀಡು ಬಿಟ್ಟು ನಿಗಾವಹಿಸುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಸಿ.ಡಿ. ಮಾರೆಣ್ಣ ಮಾತನಾಡಿ, ವಾಂತಿ, ಭೇದಿ ಹತೋಟಿಗೆ ಗ್ರಾಮದಲ್ಲಿ ಫಾಗಿಂಗ್, ಬ್ಲಿಚಿಂಗ್ ಪೌಡರ್ ಎರಚುವಿಕೆ, ಚರಂಡಿ ಸ್ವಚ್ಛತೆ ಮಾಡಲಾಗುತ್ತಿದೆ. ಗ್ರಾಮದ ಎರಡು ನೀರು ಪೂರೈಸುವ ಟ್ಯಾಂಕ್‌ಗಳಲ್ಲಿ ಕಂಪ್ಲಿ ರಸ್ತೆಯಲ್ಲಿನ ಟ್ಯಾಂಕ್ ಬಳಕೆ ನಿಲ್ಲಿಸಿದೆ. ಇನ್ನೊಂದು ಟ್ಯಾಂಕಿನ ಸುಪರ್ ಕ್ಲೋರಿನೇಷನ್ ಕೈಗೊಂಡಿದೆ. ಗ್ರಾಮಸ್ಥರು ಕಾಲುವೆ ನೀರು ಸೇವನೆ ಮಾಡಬಾರದು. ಕಂಪ್ಲಿಯ ನೀರು ಶುದ್ಧೀಕರಣ ಘಟಕದಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು. ಗ್ರಾಮದಲ್ಲಿನ 18 ಹೋಟೆಲ್, 6 ಚಿಕನ್ ಅಂಗಡಿಗಳನ್ನು ಸೆ. 27ರಿಂದ ಬಂದ್ ಮಾಡಲಾಗಿದೆ ಎಂದರು. ಶರಣಪ್ಪ, ಗ್ರಾಪಂ ಕಾರ್ಯದರ್ಶಿ ಎಚ್. ಮಾರೆಣ್ಣ, ತಿಮ್ಮಪ್ಪ, ಚಂದ್ರಪ್ಪ, ಹಿರಿಯ ಆರೋಗ್ಯ ಅಧಿಕಾರಿ ಧರ್ಮಗೌಡ, ಗ್ರಾಪಂ ಸದಸ್ಯ ಎರ್ರಿಸ್ವಾಮಿ, ಎಚ್. ಶಂಕ್ರಪ್ಪ, ಎ. ಲೋಕೇಶ್, ಎಚ್. ಗುರುವಪ್ಪ, ರಾಮಣ್ಣ ಹಾಗೂ ಅಧಿಕಾರಿಗಳು ರೋಗಿಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

