ಭರವಸೆ: ಧರಣಿ ಹಿಂಪಡೆದ ಕಾರ್ಮಿಕ ಸಂಘಟನೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಅ.6
ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಅಂಗವಿಕಲರ ಬೇಡಿಕೆ ಈಡೇರಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಅ. 7ರಂದು ಧರಣಿ ಹಮ್ಮಿಕೊಳ್ಳಲಾಗಿದ್ದ ಧರಣಿಯನ್ನು ಹಿಂಪಡೆಯಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ತಾಲೂಕ ಎಐಟಿಯುಸಿ ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ, ಅಂಗವಿಕಲರ ಸಂಘದ ಜಿಲ್ಲಾಧ್ಯಕ್ಷ ಎ. ಚಂದ್ರಪ್ಪ ಮತ್ತು ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಎನ್.ಮಂಜುಳಾ ಮಾತನಾಡಿ ಈ ವಿಷಯ ತಿಳಿಸಿದರು.
ತಾಲೂಕಿನ ಹಿರೇಕೊಳಚಿ ಅಂಗನವಾಡಿ ಕಾರ್ಯಕರ್ತೆ ಎ. ಸಾವಿತ್ರಮ್ಮ ವಜಾ ಆದೇಶ ರದ್ದುಗೊಳಿಸುವುದು ಹಾಗೂ ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ ವರ್ಗಾವಣೆಯಾಗಿರುವ ಕಾರ್ಯಕರ್ತೆಯರನ್ನು ಮೂಲ ಸ್ಥಳಕ್ಕೆ ನಿಯುಕ್ತಿಗೊಳಿಸುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅ. 7ರಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಮನೆ ಮುಂದೆ ನಡೆಸಲು ಉದ್ದೇಶಿಸಿದ್ದ ಉಪವಾಸ ಸತ್ಯಾಗ್ರಹ ಹಿಂದಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರ ಮತ್ತು ತಮ್ಮ ಹಿಂಬಾಲಕರ ಚಾಡಿ ಮಾತುಗಳಿಗೆ ಕಿವಿಕೊಡುವ ಸಚಿವರು ವಾಸ್ತವಾಂಶ ಅರಿಯದೇ ಕ್ರಮ ಕೈಗೊಳ್ಳುವುದು ಮತ್ತು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಅವರ ವಿರುದ್ಧ ಮತ್ತೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅತಿ ಹೆಚ್ಚು ಖಾತೆಗಳ ನಿರ್ವಹಣೆ ಮಾಡಿ ಎಲ್ಲರ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶರು ನಿರಂತರವಾಗಿ ಕಾರ್ಮಿಕರ ಸಂಘಟನೆ ಹಾಗೂ ಪ್ರಗತಿ ಪರ ಸಂಘಟನೆಗಳ ಬಗ್ಗೆ ಕಾಳಜಿ, ಅಪಾರ ಗೌರವ ಹೊಂದಿದ್ದರು. ಪ್ರತಿ ಸಭೆ ಸಮಾರಂಭಗಳಲ್ಲಿ ಎಂ.ಪಿ. ಪ್ರಕಾಶರ ಉತ್ತರಾಧಿಕಾರಿಯಾಗಿ ಬಂದಿದ್ದೇನೆ. ಪ್ರಕಾಶರ ಹೆಸರಿಗೆ ಯಾವುದೇ ಕಳಂಕ ಬಾರದಂತೆ ಉತ್ತಮ ಆಡಳಿತ ನೀಡುತ್ತೇನೆಂದು ಅವರ ಹೆಸರಿನ ಮೇಲೆ ಪ್ರಮಾಣ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಸಚಿವ ಪರಮೇಶ್ವರನಾಯ್ಕ ಕಾರ್ಮಿಕ ಸಂಘಟನೆಗಳನ್ನು ಸಂಪೂರ್ಣ ನಿರ್ಲಕ್ಷಿಸಿದ್ದು, ಅವರ ಹೆಸರಿಗೆ ಕಳಂಕ ತರುತ್ತಿದ್ದಾರೆಂದು ಎಐಟಿಯುಸಿ ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ ಆರೋಪಿಸಿದರು.
ದೇಶದಲ್ಲಿ 150 ವರ್ಷಗಳ ಇತಿಹಾಸ ಹೊಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವ ಕಾರ್ಮಿಕ ಸಂಘಟನೆ ಜತೆಗೆ ಕಾರ್ಮಿಕ ಸಚಿವರು ಸೌಜನ್ಯಕ್ಕಾದರೂ ಮಾತುಕತೆ ನಡೆಸಿಲ್ಲ. ಕೆಎಸ್ಆರ್ಟಿಸಿ ಹಾಗೂ ಹಟ್ಟಿ ಚಿನ್ನದ ಗಣಿ ಸೇರಿದಂತೆ ಇನ್ನಿತರ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಗಂಭೀರ ಸಮಸ್ಯೆಗಳಿದ್ದರೂ ಗಮನ ಹರಿಸಿಲ್ಲ. ಚರ್ಚಿಸಿದರೆ ಕಾರ್ಮಿಕರ ನೋವು-ನಲಿವು ಸಚಿವರಿಗೆ ಅರ್ಥವಾಗುತ್ತದೆ ಎಂದರು.
ಕಟ್ಟಡ ಕಾರ್ಮಿಕರ ಬಗ್ಗೆ ತೋರಿದ ಸಚಿವರ ಕಾಳಜಿ ಇನ್ನಿತರ ಕಾರ್ಮಿಕರ ಬಗ್ಗೆ ತಾತ್ಸಾರ ಯಾಕೆ ಎಂದು ಪ್ರಶ್ನಿಸಿದ ಅವರು, ಕಾರ್ಮಿಕ ಸಂಘಟನೆಗಳು ನ್ಯಾಯಯುತ ಬೇಡಿಕೆ ಇಟ್ಟುಕೊಂಡು ಹೋರಾಟಕ್ಕೆ ನಿಂತಾಗ ಮಣಿದು ನಮ್ಮ ಬೇಡಿಕೆ ಈಡೇರಿಸಿದ್ದಾರೆ. ಹೊರತು, ಜನಪರ ಕಾಳಜಿಯಿಂದಲ್ಲ ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಯ ಸುರೇಶ ಅಂಗಡಿ, ಎಂ.ಚಿದಾನಂದ, ದಯಾನಂದ, ಗಂಗಮ್ಮ, ಕೊಟ್ರಮ್ಮ, ಕಮಲಾಕ್ಷಿ, ರೇಣುಕಮ್ಮ, ಚನ್ನಮ್ಮ, ಸುನಂದ, ಸೋಮಪ್ಪ, ತಾತಪ್ಪ, ವೀರೇಶ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

