ಬಳ್ಳಾರಿ

ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ

Published On :

ಹಗರಿಬೊಮ್ಮನಹಳ್ಳಿ: ಪಟ್ಟಣದ ಬಸವೇಶ್ವರ ಬಜಾರ್‌ನಲ್ಲಿ ಹಾಯ್ದು ಹೋಗಿರುವ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿಯ ಎಡ, ಬಲ ಭಾಗದ ಫುಟ್‌ಪಾತ್ ಅತಿಕ್ರಮಿಸಿಕೊಂಡು ಹಲವು ವರ್ಷಗಳಿಂದಲೂ ಇಡಲಾಗಿದ್ದ ಗೂಡಂಗಡಿ, ಶೆಡ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಚಿಂತ್ರಪಳ್ಳಿ ಗ್ರಾಮ ಪಂಚಾಯಿತಿ ಸೋಮವಾರದಿಂದ ಆರಂಭಿಸಿತು.
ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಫುಟ್‌ಪಾತ್ ಮೇಲೆ ಗೂಡಂಗಡಿ, ಶೆಡ್‌ಗಳನ್ನು ಇಟ್ಟುಕೊಂಡವರು ಮತ್ತು ಪಂಚಾಯಿತಿ ಸಿಬ್ಬಂದಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆದರೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಭಾಯಿಸಿ, ತೆರವು ಕಾರ್ಯಾಚರಣೆಯನ್ನು ಸುಗಮಗೊಳಿಸಿದರು.
ರಸ್ತೆ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವ ರೀತಿಯಲ್ಲಿ ಫುಟ್‌ಪಾತ್ ಮೇಲೆ ಅಂಗಡಿ, ಶೆಡ್‌ಗಳನ್ನು ಇಟ್ಟುಕೊಂಡಿರುವುದನ್ನು ತೆರವುಗೊಳಿಸುವಂತೆ ಈಗಾಗಲೇ ಹತ್ತಾರು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಶೆಡ್‌ಗಳನ್ನು ತೆರವುಗೊಳಿಸಿಲ್ಲ. ಇದರಿಂದಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ್ವಯ ಮತ್ತು ಮೇಲಧಿಕಾರಿಗಳ ಆದೇಶದೊಂದಿಗೆ ನಾವು ಕಾರ್ಯಾಚರಣೆ ಮಾಡುವುದು ಅನಿವಾರ್ಯವಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ಗ್ರಾಪಂ ಅಧ್ಯಕ್ಷ ಎಂ. ಆನಂದ್ ತಿಳಿಸಿದರು.
ತೀವ್ರ ತೊಂದರೆ: ರಸ್ತೆಯ ಎಡ, ಬಲ ಭಾಗದಲ್ಲಿ ತಲಾ 120 ಅಡಿಯಂತೆ 240 ಅಡಿಯಷ್ಟು ವಿಶಾಲವಾದ ರಸ್ತೆಯಿದ್ದರೂ ಹಲವು ದಶಕಗಳಿಂದ ಹೆದ್ದಾರಿ ಅತಿಕ್ರಮಣಕ್ಕೆ ಗುರಿಯಾಗುತ್ತಲೆ ಬಂದಿದೆ. ಹೀಗಾಗಿ ಕೇವಲ ಎರಡು ಬದಿ ಸೇರಿ 120 ಅಡಿಯಷ್ಟು ರಸ್ತೆ ಮಾತ್ರ ಉಳಿದಿದೆ. ನಿರಂತರವಾಗಿ ಬೆಳೆಯುತ್ತಿರುವ ಪಟ್ಟಣದಲ್ಲಿ ನಿತ್ಯ ಸುಗಮ ಸಂಚಾರ ಎಂಬುದು ನಾಗರಿಕರಿಗೆ ಮರೀಚಿಕೆ ಆಗಿತ್ತು. ಫುಟ್‌ಪಾತ್ ಅತಿಕ್ರಮಣ ತೆರವು ಮಾಡಿ ಸಂಚಾರ ಅವ್ಯವಸ್ಥೆ ಸರಿಪಡಿಸುವಂತೆ ನೂರಾರು ಬಾರಿ ಪಟ್ಟಣಿಗರು ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆದರೆ ತೆರವು ಕಾರ್ಯಾಚರಣೆ ಮಾತ್ರ ಆಮೆಗತಿಯಲ್ಲಿ ಸಾಗಿತ್ತು.
ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಹಲವು ದಶಕಗಳಿಂದಲೂ ನಾವು ಫುಟ್‌ಪಾತ್ ಮೇಲಿನ ವ್ಯಾಪಾರವನ್ನೇ ನಂಬಿಕೊಂಡು ಹೂ, ಹಣ್ಣು, ಟಿ, ಬೀಡಾ, ಬಟ್ಟೆ ಸೇರಿದಂತೆ ನಾನಾ ರೀತಿಯ ಮಾರಾಟದ ಅಂಗಡಿಯನ್ನು ತೆರೆದು ಬದುಕು ಕಟ್ಟಿಕೊಂಡಿದ್ದೇವೆ. ಆದರೀಗ ಅಂಗಡಿ ತೆರವುಗೊಳಿಸಿದರೆ ನಾವು ಬೀದಿಪಾಲಾಗುತ್ತೇವೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವುಗೊಳಿಸಬೇಕೆಂದು ಫುಟ್‌ಪಾತ್ ವ್ಯಾಪಾರಿಗಳು ಗ್ರಾಪಂ ಆಡಳಿತಕ್ಕೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.