ಬಳ್ಳಾರಿ

ಅತಿಕ್ರಮಿಸಿದ ಕೆರೆಯಂಗಳ ತೆರವು ಇಲ್ಲ

Published On :

ಹೂವಿನಹಡಗಲಿ: ಬಯಲು ಸೀಮೆ ಪ್ರದೇಶದ ಹಳ್ಳಿ ಜನರ ಹಾಗೂ ರೈತರ ಜೀವಾಳವಾಗಿರುವ ಕೆರೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಿ ಆ ಮೂಲಕ ಅಂತರ್ಜಲ ಹೆಚ್ಚಳ ಹಾಗೂ ರೈತರಿಗೆ ನೆರವಾಗಲು ನೀರಾವರಿ ಒದಗಿಸಬೇಕೆಂಬ ಸರ್ಕಾರದ ಉದ್ದೇಶ ಈವರೆಗೂ ತಾಲೂಕಿನಲ್ಲಿ ಈಡೇರಿಲ್ಲ.
ಒತ್ತುವರಿಯಾಗಿರುವ ಕೆರೆಯಂಗಳವನ್ನು ಸಂಪೂರ್ಣ ತೆರವುಗೊಳಿಸಿ, ಸಂಬಂಧಪಟ್ಟ ಇಲಾಖೆಗಳು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂಬ ಸರ್ಕಾರದ ಆಶಯ ಕೈಗೂಡಿಲ್ಲ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತಾಲೂಕಿನ 8 ಕೆರೆಗಳು ಒಳಪಡುತ್ತವೆ. ಬಹುತೇಕ ಕೆರೆಗಳು ಒತ್ತುವರಿಯಾಗಿದ್ದರೂ, ಈವರೆಗೂ ತೆರವುಗೊಳಿಸುವಲ್ಲಿ ಸಣ್ಣ ನೀರಾವರಿ ಇಲಾಖೆ ಮುಂದಾಗದೇ ವಿಳಂಬ ಧೋರಣೆ ತಾಳಿದೆ. ಈ ಕುರಿತು ಇಲಾಖೆಯಲ್ಲಿ ಕೆರೆಗಳ ಪ್ರದೇಶ ಎಷ್ಟಿದೆ ಎಂಬ ಮಾಹಿತಿ ಮಾತ್ರ ಇದೆ. ಆದರೆ ಇವುಗಳ ಅಭಿವೃದ್ಧಿ ಒತ್ತುವರಿಯಾಗದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ರಾಜ್ಯ ಸರ್ಕಾರ ಕೆರೆ ಒತ್ತುವರಿ ತೆರವುಗೊಳಿಸಲು ಕೆರೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ನಿಗಮ ಮಾತ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಕೆರೆಯಂಗಳದಲ್ಲೇ ಕೊಳವೆಬಾವಿ: ರಾಜ್ಯದಲ್ಲಿರುವ ಸುಮಾರು 2 ಸಾವಿರ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕೋಟ್ಯಂತರ ರು.ಗಳನ್ನು ಬಿಡುಗಡೆ ಮಾಡಿತ್ತು. ಆದರೆ ಬಹುತೇಕ ಕೆರೆಗಳ ಅಭಿವೃದ್ಧಿ ಅರೆಬರೆಯಾಗಿದೆ. ಕೆರೆಗಳಿಗೆ ಗಡಿ ರೇಖೆಗಳಿಲ್ಲ, ಉಳ್ಳವರು ಕೆರೆ ಅಂಗಳದಲ್ಲೇ ಕೊಳವೆಬಾವಿಗಳನ್ನು ಕೊರೆದಿದ್ದಾರೆ. ಕೆರೆಗಳನ್ನೇ ಜಮೀನುಗಳನ್ನಾಗಿ ಮಾಡಿಕೊಂಡಿರುವ ಪ್ರಕರಣಗಳೇ ಹೆಚ್ಚಾಗಿವೆ.
ಕೆರೆಗಳ ಪ್ರದೇಶ ಮಾಹಿತಿ: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಗೊಂಡನಹಳ್ಳಿ ಕೆರೆ- 77 ಹೆಕ್ಟೇರ್, ಹಗರನೂರು-166 ಹೆಕ್ಟೇರ್, ಹಿರೇಹಡಗಲಿ- 67 ಹೆಕ್ಟೇರ್, ಸೋವೇನಹಳ್ಳಿ- 70 ಹೆಕ್ಟೇರ್, ನಾಗತಿಬಸಾಪುರ- 100 ಹೆಕ್ಟೇರ್, ಅರಳಿಹಳ್ಳಿ- 769 ಹೆಕ್ಟೇರ್, ತಳಕಲ್ಲ-279 ಹೆಕ್ಟೇರ್, ದಾಸನಹಳ್ಳಿ- 289 ಹೆಕ್ಟೇರ್ ಪ್ರದೇಶಗಳಿರುವ ಕೆರೆಯಂಗಳಲ್ಲಿ ಎಲ್ಲಿಯೂ ಒತ್ತುವರಿಯಾಗಿಲ್ಲ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಎಇಇ ಈಶ್ವರಯ್ಯ.
ತಾಲೂಕಿನಲ್ಲಿ ನಿರ್ಮಾಣಗೊಂಡಿರುವ ಕೆರೆಗಳ ದಾಖಲಾತಿಗಳನ್ನು ಈಚೆಗೆ ಸಂಗ್ರಹಿಸಿರುವ ಇಲಾಖೆಯು, ಕೆರೆಗಾಗಿ ಭೂಸ್ವಾಧೀನವಾಗಿರುವ ರೈತರಿಗೆ ಭೂ ಪರಿಹಾರವನ್ನೇ ನೀಡದಿರುವ ಪ್ರಕರಣಗಳಿವೆ. ತಾಲೂಕಿನ ಹಗರನೂರು ಕೆರೆಗೆ ಭೂಮಿ ಕಳೆದುಕೊಂಡ ಹಿರೇಹಡಗಲಿ ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ ಎಂಬ ಆರೋಪವೂ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.