ಕನಕ ಬಿಟಿ ಹತ್ತಿ ಅವಾಂತರ: ರೈತರು ಕಂಗಾಲು
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಅ. 8
ಕನಕ ಬಿಟಿ ಹತ್ತಿ ಬೆಳೆ ವೈಫಲ್ಯದಿಂದ ಕನಲಿ ಹೋಗಿರುವ ಕೊಟ್ಟೂರು ಭಾಗದ ಕೆಲ ರೈತರು ಪರಿಹಾರಕ್ಕೆ ಮೊರೆ ಹೋಗಲು ಪ್ರಯತ್ನ ಸಾಗಿಸಿದ್ದರೆ, ಮತ್ತೆ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವತ್ತ ಮುಂದಾಗಿದ್ದಾರೆ.
ಕನಕ ಬಿಟಿ ಹತ್ತಿ ಬೆಳೆಯ ಅವಾಂತರವನ್ನು ದಿನ ಬೆಳಗಾದರೆ ನೋಡುತ್ತಲೇ ಕಣ್ಣೀರು ಸುರಿಸುವ ಪರಿಸ್ಥಿತಿ ಇಲ್ಲಿನ ರೈತರದಾಗಿದೆ. ಸಮೀಪದ ಕನ್ನನಾಯಕನಕಟ್ಟೆಯ ಬಹುತೇಕ ರೈತರು ಬಹು ಆಶಾಭಾವದಿಂದ ಮೇ, ಜೂನ್ನಲ್ಲಿ ಮಹಿಕೋ ಕಂಪನಿಯ ಹತ್ತಿ ಬೀಜಗಳನ್ನು ಬಿತ್ತಿದ್ದರು. ಹುಟ್ಟಿದ ಯಾವುದೇ ಗಿಡದಲ್ಲೂ ಇದೂವರೆಗೂ ಒಂದು ಕಾಯಿ ಬಿಟ್ಟಿಲ್ಲ. ಇಂದಲ್ಲಾ ನಾಳೆಯಾದರೂ ಕಾಯಿ ಬೆಳೆಯುತ್ತವೆ ಎಂದು ರೈತರು ಕಳೆದ ಮೂರ್ನಾಲ್ಕು ತಿಂಗಳು ಕಾಯುತ್ತ ಕುಳಿತು ತಮ್ಮಷ್ಟಕ್ಕೆ ತಾವು ಸಮಾಧಾನ ತಂದುಕೊಂಡು ನಿರೀಕ್ಷಿಸುತ್ತಿದ್ದರೂ ಇದುವರೆಗೂ ಯಾವುದೇ ಗಿಡದಲ್ಲಿ ಕಾಯಿ ಕಾಣಿಸಿಕೊಳ್ಳದಿರುವುದು ಇವರೆಲ್ಲರನ್ನು ದಿಕ್ಕು ತಪ್ಪಿದಂತಾಗಿದೆ. ಎಕರೆಗೆ ರು. 15ರಿಂದ 20 ಸಾವಿರವರೆಗೆ ವೆಚ್ಚ ಮಾಡಿದ್ದಾರೆ. ಆದರೆ ಬಿಗಡಲ್ಲಿ ಕಾಯಿ ಬಿಡದೇ ಕಂಗಾಲಾಗಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೋರ್ಟ್ಗೆ ಮೊರೆ: ಮಹಿಕೋ ಕಂಪನಿಯ ಕನಕ ಬಿಟಿ ಹತ್ತಿ ಬೀಜ ಬಿತ್ತಿ ಅಪಾರ ಪ್ರಮಾಣದಲ್ಲಿ ಹಾನಿಗೆ ಒಳಗಾಗಿರುವ ಕನ್ನನಾಯಕನಕಟ್ಟೆ ಗ್ರಾಮದ ಚೀರನಹಳ್ಳಿ ನಾಗಪ್ಪ, ತಿಮ್ಮಣ್ಣರ ವೆಂಕಟೇಶ್, ಗೌಡ್ರು ಅರುಣಕುಮಾರ್ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರದ ಗಮನ ಸೆಳೆಯಲು ಕೂಡ್ಲಿಗಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಮನವಿಗೆ ಇದುವರೆಗೂ ಯಾವುದೇ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ, ನಮ್ಮೆಲ್ಲರ ಬದುಕನ್ನೇ ಕಸಿದುಕೊಂಡ ಈ ಹತ್ತಿ ಬೆಳೆಯ ಅನಾಹುತಕ್ಕೆ ಮಹಿಕೋ ಕಂಪನಿಯಿಂದ ಪರಿಹಾರ ದೊರಕಿಸಿಕೊಡಬೇಕೆಂದು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದು ಈ ರೈತರು 'ಕನ್ನಡಪ್ರಭ'ಕ್ಕೆ ತಿಳಿಸಿದರು. ಆದರೆ ನಮಗೆ ಕೋರ್ಟಿನಲ್ಲಿಯೂ ಸೂಕ್ತ ಪರಿಹಾರ ಸಿಗದಿದ್ದರೆ ನಾವೆಲ್ಲರೂ ಕುಟುಂಬ ಸಮೇತರಾಗಿ ಕೂಡ್ಲಿಗಿ ತಹಸೀಲ್ದಾರ್ ಕಚೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಈಗಲಾದರೂ ನಮ್ಮ ಸಂಕಷ್ಟಗಳನ್ನು ಪರಿಹರಿಸುವತ್ತ ಸಂಬಂಧಪಟ್ಟವರು ಮುಂದಾಗುವರೆ ಎಂಬುದು ಇವರುಗಳ ನಿರೀಕ್ಷೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

