ಬಳ್ಳಾರಿ

ನಾಡಿನ ಮಣ್ಣಿನಲ್ಲಿ ಅಂತಃಸತ್ವದ ಗುಣ

Published On :

ಕೊಟ್ಟೂರು: ಕನ್ನಡ ನಾಡಿನ ಮಣ್ಣಿನಲ್ಲಿ ಅಂತಃಸತ್ವದ ಗುಣ ವ್ಯಾಪಕವಾಗಿರುವ ಕಾರಣಕ್ಕಾಗಿಯೇ ಜಗತ್ತು ಬೆರಗುಗೊಳಿಸುವ ಸಾಹಿತ್ಯ ಪರಿಚಯವಾಗಿದೆ. ನಾಡಿನ ಈ ಬಗೆಯ ಮಣ್ಣಿನ ಗುಣಗಳನ್ನು ಅರಗಿಸಿಕೊಂಡಿರುವ ಕಾರಣಕ್ಕಾಗಿಯೇ ಬಹಳಷ್ಟು ಪ್ರಮಾಣದ ಜ್ಞಾನಪೀಠ ಪ್ರಶಸ್ತಿಗಳು ನಾಡಿನ ಸಾಹಿತ್ಯ ದಿಗ್ಗಜರಿಗೆ ದೊರತಿವೆ. ಇದೊಂದು ದೊಡ್ಡ ಗೌರವ ಮತ್ತು ಹೆಮ್ಮೆಯ ವಿಷಯ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.
ಪಟ್ಟಣದಲ್ಲಿ ಗುರುವಾರ ಸಾಹಿತಿ ವಿಶ್ವನಾಥ ಅಡಿಗರ ನಿವಾಸದಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕವಿ-ಮನ-ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಹಿತ್ಯವೆಂದರೆ ಅದೊಂದು ಕಾಟಾಚಾರವಲ್ಲ, ಬದ್ಧತೆ ಮೈಗೂಡಿಸಿಕೊಂಡು ಬರೆಯುವುದು ಖಂಡಿತ ಶ್ರೇಷ್ಠ ಸಾಹಿತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಾಹಿತಿ ವಿಶ್ವನಾಥ ಅಡಿಗ ಸಾಹಿತ್ಯ ಕ್ಷೇತ್ರದಲ್ಲಿ ಹಲವು ಬಗೆಯಲ್ಲಿ ಕೃಷಿ ಮಾಡಿ ಸಾಧನೆ ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೇಖಕ ಎನ್.ಎಂ. ಕೊಟ್ರೇಶ್ ಸಮಾಜದಲ್ಲಿನ ಧರ್ಮದ ಕಟ್ಟುಪಾಡುಗಳನ್ನು ಮೀರಿ ಬರೆದಾಗ ಮಾತ್ರ ಸೃಜನಶೀಲ ಸಾಹಿತ್ಯ ಹೊರಬರುತ್ತದೆ. ಈ ಬಗೆಯ ಸಾಹಿತ್ಯ ಬರೆದಾತನೇ ಉತ್ತಮ ಲೇಖಕ ಎನಿಸಿಕೊಳ್ಳುತ್ತಾನೆ ಎಂದು ಹೇಳಿದರು.
ತರಾಟೆ: ಉದ್ಘಾಟನಾ ಭಾಷಣ ಮಾಡಲು ಎನ್.ಎಂ. ಕೊಟ್ರೇಶ್ ಮುಂದಾಗುತ್ತಿದ್ದಂತೆ ಜಿಲ್ಲಾ ಕಸಾಪ ಅಧ್ಯಕ್ಷ ಎರ್ರಿಸ್ವಾಮಿ ವಿಶ್ವನಾಥ ಅಡಿಗರ ರಚನೆಯ ಕಥೆಯೊಂದರ ನಾಲ್ಕೈದು ಸಾಲು ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಎಂದು ಸೂಚಿಸಿದರು,.
ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಕೊಟ್ರೇಶ್, ಎರ್ರಿಸ್ವಾಮಿ ಸಾಹಿತಿಗಳ ಅಭಿವ್ಯಕ್ತಿಗೆ ಕಡಿವಾಣ ಹಾಕುವ ಯತ್ನ ಮಾಡಲು ಮುಂದಾಗಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು. ಕನ್ನಡ ನಾಡು, ಸಾಹಿತ್ಯ ಅಭಿವೃದ್ಧಿಗಾಗಿ ಸಾಹಿತಿಗಳಲ್ಲದ ಸರ್.ಎಂ. ವಿಶ್ವೇಶ್ವರಯ್ಯ ಕಸಾಪ ಹುಟ್ಟುಹಾಕಿ ಸಾಹಿತಿಗಳ ಮೇಲೆ ಅಭಿಮಾನ ಮೆರೆದಿದ್ದರು. ಆದರಿಂದು, ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಮೂಲಕ ಕಸಾಪ ಅಧೋಗತಿಯತ್ತ ತಲುಪುತ್ತಿರುವುದು ನಿಜಕ್ಕೂ ಆತಂಕಕರ ಎಂದು  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಸಭೆಯಲ್ಲಿ ಹೆಚ್ಚು ಗಮನ ಸೆಳೆಯಿತು. ಸಾಹಿತಿ ವಿಶ್ವನಾಥ ಅಡಿಗ, ಕಸಾಪ ಜಿಲ್ಲಾಧ್ಯಕ್ಷ ಸಿರಿಗೆರೆ ಎರ್ರಿಸ್ವಾಮಿ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್, ಹೋಬಳಿ ಘಟಕದ ಅಧ್ಯಕ್ಷೆ ನಿರ್ಮಲಾ ಶಿವನಗುತ್ತಿ, ಸಾಹಿತ್ಯಾಸಕ್ತರಾದ ಡಿ. ಕೊಟ್ರೇಶ್, ಟಿ.ಎಂ. ಸೋಮಯ್ಯ, ಜಿ. ಕೆಂಚಪ್ಪ, ಪಂಪನಗೌಡ ಪಾಟೀಲ್, ಜವಳಿ ಗುರುಬಸವರಾಜ್, ಎಸ್.ಎಂ. ನಳಿನ, ಗೋವಿಂದಪ್ಪ, ಎಂ.ಎಸ್. ಶಿವನಗುತ್ತಿ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.