ತಜ್ಞರ ತಂಡದಿಂದ ಹತ್ತಿ ಬೆಳೆ ಪರಿಶೀಲನೆ
ಹೂವಿನಹಡಗಲಿ: ತಾಲೂಕಿನಲ್ಲಿ ಬಿತ್ತನೆ ಮಾಡಲಾಗಿರುವ ಬಿಟಿ ಹತ್ತಿ ಬೆಳೆ ಹೂ, ಕಾಯಿ ಇಲ್ಲದಿರುವುದರಿಂದ ಬೆಳೆಯನ್ನು ಪರೀಕ್ಷೆ ಮಾಡಲು ಇಲ್ಲಿನ ಕೃಷಿ ಇಲಾಖೆ ಮತ್ತು ಕೃಷಿ ವಿಸ್ತರಣಾ ಘಟಕದ ಅಧಿಕಾರಿಗಳು ಜಮೀನುಗಳಿಗೆ ಭೇಟಿ ಪರಿಶೀಲಿಸಿದರು.
ತಾಲೂಕಿನ ಬ್ಯಾಲಹುಣ್ಸಿ ಗ್ರಾಮದ ಬಸವನಗೌಡ ಹಾಗೂ ಇತರೆ ರೈತರ ಜಮೀನುಗಳಲ್ಲಿ ಬಿತ್ತನೆ ಮಾಡಲಾಗಿರುವ ಕನಕ ಬಿಟಿ ಹತ್ತಿ ಬೆಳೆ ವಿಫಲವಾಗಿರುವುದಕ್ಕೆ ಪ್ರಾಥಮಿಕ ವರದಿಯನ್ನು ತಜ್ಞರು ಮಾಡಿಕೊಂಡು ಬಂದಿದ್ದಾರೆ.
ಇಲ್ಲಿನ ಕೃಷಿ ಇಲಾಖೆ ಹಾಗೂ ಕೃಷಿ ವಿಸ್ತರಣಾ ಘಟಕದಲ್ಲಿ ಹತ್ತಿ ಬೆಳೆ ತಜ್ಞರು ಇಲ್ಲದ ಕಾರಣ ಬಿಟಿ ಹತ್ತಿ ಬೆಳೆ ವಿಫಲಕ್ಕೆ ಕಾರಣಗಳನ್ನು ಕಂಡುಹಿಡಿಯಲು ರಾಯಚೂರು ಕೃಷಿ ವಿವಿಯ ಹತ್ತಿ ಬೆಳೆ ತಜ್ಞರು ಭೇಟಿ ನೀಡಬೇಕು. ಈ ಕುರಿತು ತಾಲೂಕು ಕೃಷಿ ಸಹಾಯಕ ನಿರ್ದೇಶಕರು ಮತ್ತು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ರಾಯಚೂರು ವಿವಿಗೆ ಪತ್ರ ಬರೆದರೆ ತಜ್ಞರು ಬರುತ್ತಾರೆಂದು ಕೃಷಿ ವಿಸ್ತರಣಾ ಘಟಕದ ವಿಸ್ತರಣ ಮುಂದಾಳು ಹಾಗೂ ಬೇಸಾಯ ತಜ್ಞ ಡಾ.ಸಿ.ಎಂ. ಕಾಲಿಬಾವಿ ತಿಳಿಸಿದ್ದಾರೆ.
ಔಷಧಿ ಸಿಂಪಡಿಸಿ: ಬಿಟಿ ಹತ್ತಿ ಬೆಳೆಗೆ ಕಾಯಿಕೊರೆಯುವ ರೋಗ ನಿರೋಧಕ ಶಕ್ತಿ ಮಾತ್ರ ಇದೆ. ಆದರೆ ರಸ ಹೀರುವ ಕೀಟ ಬಾಧೆಯನ್ನು ತಡೆಯುವ ಶಕ್ತಿ ಈ ಬೆಳೆಗೆ ಇಲ್ಲ. ರಸ ಹೀರುವ ಕೀಟದ ಬಾಧೆಗೆ ಸೂಕ್ತ ಔಷಧಿ ಸಿಂಪರಣೆ ಮಾಡಬೇಕು. ಎಲೆ ಕೆಂಪು ರೋಗಕ್ಕೆ ಸಸ್ಯ ಶಾರೀರಿಕ ಕ್ರಿಯೆ ನೂನ್ಯತೆ ಎನ್ನುತ್ತಾರೆ. ಇದಕ್ಕೆ ಅಗತ್ಯವಿರುವ ಔಷಧಿಗಳನ್ನು ಸಿಂಪರಣೆ ಮಾಡಬೇಕೆಂದು ಕಾಲಿಬಾವಿ ಸಲಹೆ ನೀಡಿದರು.
ಹತ್ತಿ ಬೆಳೆಗಳಿಗೆ ಮೋಡ ಕವಿದ ವಾತವರಣವಿದ್ದರೆ ರಸಗೊಬ್ಬರವನ್ನು ಹೀರಿಕೊಳ್ಳುವ ಶಕ್ತಿ ಇರುವುದಿಲ್ಲ. ವಾತಾವರಣ ವೈಪರೀತ್ಯದಿಂದ ಎಲೆ ಕೆಂಪಾಗಿ ಹತ್ತಿ ಹೂ, ಕಾಯಿ ಉದುರುತ್ತವೆ. ಈ ಬಾರಿ ಹೆಚ್ಚು ಮಳೆ ಬಿದ್ದ ಕಾರಣ ಹತ್ತಿ ಬೆಳೆಗೆ ತಂಪು ಹೆಚ್ಚಾಗಿದೆ. ಈ ವರ್ಷ ಹತ್ತಿ ಬೆಳೆಗೆ ಸೂಕ್ತ ವಾತಾವರಣವಿಲ್ಲ. ಜೂನ್, ಜುಲೈ ತಿಂಗಳಲ್ಲಿ ಹತ್ತಿ ಬೀಜ ಬಿತ್ತನೆಗೆ ಸೂಕ್ತ ಸಮಯ ಎಂದರು. ಕೀಟ ಬಾಧೆ ಮತ್ತು ಎಲೆಕೆಂಪು ರೋಗ ತಡೆಯಲು 10 ಗ್ರಾಂ (1 ಲೀ. ನೀರಿಗೆ) 19.19.19 ರಸಗೊಬ್ಬರ, 10 ಗ್ರಾಂ ಮೆಗ್ನೇಷಿಯಂ, 1 ಮೀ.ಲಿ. ಫಾನೋಫ್ಲೀಕ್ಸ್ ಔಷಧಿಯನ್ನು 4 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ 10-12 ದಿನಗಳಿಗೊಮ್ಮೆ 2-3 ಬಾರಿ ಸಿಂಪರಣೆ ಮಾಡಿದರೆ ಹೂ, ಕಾಯಿ ಉದುರುವುದಿಲ್ಲ ಮತ್ತು ಇತರೆ ರೋಗದ ಬಾಧೆ ಬರುವುದಿಲ್ಲ. ಆಗ ಉತ್ತಮ ಬೆಳೆಯನ್ನು ರೈತರು ನಿರೀಕ್ಷೆ ಮಾಡಬಹುದು ಎಂದು ಹೇಳಿದರು.
ಕೀಟತಜ್ಞ ಹನುಮಂತಪ್ಪ ಶ್ರೀಹರಿ, ಸಸ್ಯರೋಗ ತಜ್ಞ ಬಿ.ಟಿ. ಹನುಮಂತಪ್ಪ, ಕೃಷಿ ಅಧಿಕಾರಿಗಳಾದ ರಾಜಶೇಖರ, ರಮೇಶ, ಕೃಷ್ಣನಾಯ್ಕ ಸೇರಿದಂತೆ ಇತರರು ತಂಡದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

