ಕನಕ ಹತ್ತಿ ಬಿತ್ತಿದ ಕೃಷಿಕ ಕಂಗಾಲು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಅ. 15
'ಹತ್ತಿಗೆ ಹತ್ತು ಕುತ್ತು' ಎಂಬ ಮಾತಿನಂತೆ ಕನಕ ಬಿಟಿ ಹತ್ತಿ ಬಿತ್ತನೆ ಮಾಡಿ ಬಂಗಾರದ ಬೆಳೆ ನಿರೀಕ್ಷೆ ಮಾಡಿದ್ದ ರೈತರಿಗೆ ಅರಗಿಸಿಕೊಳ್ಳಲಾರದಷ್ಟು ನಷ್ಟ ಸಂಭವಿಸಿದ್ದು, ಆಳೆತ್ತರ ಬೆಳೆದುನಿಂತ ಹತ್ತಿ ಬೆಳೆಯಲ್ಲಿ ಹೂವಿಲ್ಲ, ಕಾಯಿ ಇಲ್ಲದ್ದು ಕಂಡು ದಿಕ್ಕು ಕಾಣದೇ ಅಕ್ಷರಶಃ ಅನ್ನದಾತ ಕಂಗಾಲಾಗಿದ್ದಾನೆ.
ತಾಲೂಕಿನಲ್ಲಿ ಒಟ್ಟು 1863 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಗಳ ಹತ್ತಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ 380 ಹೆಕ್ಟೇರ್ ಪ್ರದೇಶದಲ್ಲಿ ಕನಕ ಬಿಟಿ ಹತ್ತಿ ಬಿತ್ತನೆ ಮಾಡಿದ್ದಾರೆ ರೈತರು. ಬಹುತೇಕ ಕನಕ ಬಿಟಿ ಹತ್ತಿ ಬಿತ್ತನೆ ಮಾಡಿರುವ ಕಡೆಗಳಲ್ಲಿ ಬೆಳೆ ಪೂರ್ಣ ವಿಫಲವಾಗಿದೆ. ಆದರೆ ಸರ್ಕಾರ ಮಾತ್ರ ಸಂಬಂಧಪಟ್ಟ ಕಂಪನಿಗಳಿಂದ ರೈತರಿಗೆ ಸೂಕ್ತ ಪರಿಹಾರ ನೀಡುವ ಕುರಿತು ಕ್ರಮ ಕೈಗೊಳ್ಳದೇ ರೈತರ ಬದುಕನ್ನು ನಡು ರಸ್ತೆಗೆ ಬಿಟ್ಟಿದ್ದಾರೆಂಬ ದೂರುಗಳು ತಾಲೂಕಿನ ರೈತರಿಂದ ಕೇಳಿ ಬರುತ್ತಿವೆ.
ನಕಲಿ ಬೀಜ ಹಾವಳಿ: ಈ ಹಿಂದೆ ಕನಕ ಬಿಟಿ ಹತ್ತಿ ಬೆಳೆ ರೈತರಿಗೆ ಸಾಕಷ್ಟು ಬೇಡಿಕೆ ಹಾಗೂ ಲಾಭದಾಯಕ ಬೆಳೆಯಾಗಿತ್ತು. ಈ ಹಿನ್ನೆಲೆಯಿಂದ ಬಹುತೇಕ ರೈತರು ಕನಕ ಬಿಟಿ ಹತ್ತಿ ಬೀಜವನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚುವರಿ ದರ ನಿಗದಿ ಮಾಡಿದ್ದರೂ ಮುಗಿಬಿದ್ದು ಖರೀದಿಸಿ ಬಿತ್ತನೆ ಮಾಡಿದ್ದಾರೆ. ರೈತರ ಬೇಡಿಕೆಗೆ ತಕ್ಕಂತೆ ಕಂಪನಿಗೆ ಬೀಜ ಪೂರೈಕೆ ಆಗದ ಕಾರಣ ನಕಲಿ ಬೀಜ ಮಾರಾಟ ಮಾಡಿದ್ದರ ಫಲವಾಗಿ ಜಮೀನಿನಲ್ಲಿ ಆಳೆತ್ತರ ಬೆಳೆದು ನಿಂತಿರುವ ಹತ್ತಿ ಬೆಳೆಯಲ್ಲಿ ಇದುವರೆಗೆ ಹೂವಿಲ್ಲ, ಕಾಯಿ ಇಲ್ಲದೇ ಬರಡು ಬೆಳೆಯಾಗಿ ನಿಂತಿದೆ. ಹೂ ಬಿಟ್ಟರೂ ಹಿಂದೆಯೇ ಉದುರಿ ಬೀಳುತ್ತಿವೆ. ಇದರಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದೆ ಎನ್ನುತ್ತಾರೆ ಶಾಂತವೀರಪ್ಪ.
ಪರಿಹಾರ ಕೇಳಿ ಪಡೆದುಕೊಳ್ಳಿ: ಕನಕ ಬಿಟಿ ಹತ್ತಿ ಬೆಳೆ ನಷ್ಟ ಉಂಟಾಗಿರುವ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಹತ್ತಿ ಬೀಜ ಮಾರಾಟಗಾರರ ಬಳಿ ಹೋಗಿ ಅವರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಪರಿಹಾರ ಕೊಟ್ರೆ ಸುಮ್ಮನೆ ತೆಗೆದುಕೊಂಡು ಬನ್ನಿ ಎಂದು ಕೃಷಿ ಇಲಾಖೆ ಅಧಿಕಾರಿ ಕೃಷ್ಣನಾಯ್ಕ ಹೇಳುತ್ತಾರೆಂದು ಸೋಗಿ ಗ್ರಾಮದ ರೈತ ಎಸ್.ಎಂ. ವೀರಭದ್ರಯ್ಯ ದೂರುತ್ತಾರೆ.
ವಾತಾವರಣ ಕಾರಣವೇ?: ಹತ್ತಿ ಬೆಳೆಗೆ ಮೋಡ ಕವಿದ ವಾತವರಣವಿದ್ದರೆ ಹೂ, ಕಾಯಿ ಉದುರುತ್ತದೆ. ರೋಗಗಳಿಗೆ ಔಷಧಿ ಸಿಂಪರಣೆ ಮಾಡಿದ್ದರೆ ಬೆಳೆ ನಷ್ಟವಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಒಂದೇ ಜಮೀನಿನಲ್ಲಿ ಕನಕ ಬಿಟಿ ಹತ್ತಿ ಮತ್ತು ಬಯೋಸೀಡ್ಸ್ ಯುವಾ ಹತ್ತಿ ಬಿತ್ತನೆ ಮಾಡಲಾಗಿದೆ. ಕನಕ ಬಿಟಿ ಹತ್ತಿ ಬೆಳೆಯಲ್ಲಿ ಹೂವಿಲ್ಲ, ಕಾಯಿ ಇಲ್ಲ. ಆದರೆ ಬಯೋಸೀಡ್ಸ್ ಯುವಾ ಹತ್ತಿ ಬೆಳೆ ಸೊಂಪಾಗಿ ಹೂ, ಕಾಯಿ ಬಿಟ್ಟು ಹೆಚ್ಚಿನ ಇಳುವರಿ ಬಂದಿದೆ. ಇದಕ್ಕೆಲ್ಲಾ ಹವಮಾನ ಕಾರಣ ಹೇಗೆ? ಹತ್ತಿ ಬೆಳೆ ಎಂದಾಗ ಎಲ್ಲದಕ್ಕೂ ಒಂದೇ ರೀತಿಯ ವಾತಾವರಣವಿದ್ದರೂ ಕನಕ ಬಿಟಿ ಹತ್ತಿ ಬೆಳೆ ಹೇಗೆ ವಿಫಲವಾಗಿದೆ ಎಂಬುದನ್ನು ಅಧಿಕಾರಿಗಳು ಉತ್ತರಿಸಬೇಕು ಎನ್ನುತ್ತಾರೆ ನಷ್ಟಕ್ಕೀಡಾದ ರೈತರು.
ಈ ಕುರಿತು ಕೃಷಿ ಇಲಾಖೆಯಲ್ಲಿ ಕನಕ ಬಿಟಿ ಹತ್ತಿ ಬೆಳೆ ನಷ್ಟ ಸಂಭವಿಸಿರುವ 20ಕ್ಕೂ ಹೆಚ್ಚು ರೈತರು ದೂರು ಸಲ್ಲಿಸಿದ್ದಾರೆ. ಕನಕ ಬಿಟಿ ಹತ್ತಿಗೆ ಸಂಬಂಧಿಸಿದ ದೂರುಗಳು ರಾಜ್ಯದ ತುಂಬೆಲ್ಲ ಸೃಷ್ಟಿಯಾಗಿವೆ. ರೈತರು ನೀಡಿರುವ ದೂರುಗಳನ್ನು ಸರ್ಕಾರಕ್ಕೆ ನೀಡುತ್ತೇವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

