ವಿಮ್ಸ್ಗೆ ಕಾಡುತ್ತಿದೆ ಸಿಬ್ಬಂದಿ ಕೊರತೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 19
ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ರಾಯಚೂರು ಹಾಗೂ ಆಂಧ್ರಪ್ರದೇಶದ ಕೆಲ ಜಿಲ್ಲೆಯ ರೋಗಿಗಳಿಗೆ ಆಸರೆಯಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಎಂಬಿಬಿಎಸ್ ಸೀಟ್ಗಳ ಸಂಖ್ಯೆ 100ರಿಂದ 150 ಸ್ಥಾನಗಳಿಗೆ ಏರಿಕೆಯಾಗಿರುವುದು ಸಂತಸದ ವಿಷಯ. ಆದರೆ ಇಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುವ ಮೂಲಕ ಚಿಂತೆಗೆ ಕಾರಣವಾಗಿದೆ.
ಹೌದು, ವಿಮ್ಸ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ಸ್, ಅಸಿಸ್ಟಂಟ್ ಪ್ರೊಫೆಸರ್ಸ್ ಸೇರಿದಂತೆ ಸಿಬ್ಬಂದಿ ಕೊರತೆ ನಡುವೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸಾಗಿದೆ. ಇದರಿಂದಾಗಿ ಕೇವಲ ಎಂಬಿಬಿಎಸ್ ವಿದ್ಯಾರ್ಥಿಗಳಿಗಲ್ಲದೆ, ರೋಗಿಗಳಿಗೂ ತೊಂದರೆಯಾಗಿದೆ. ಈ ಭಾಗದಲ್ಲಿ ದೊಡ್ಡ ಆಸ್ಪತ್ರೆಯಾದ ವಿಮ್ಸ್ ಸಿಬ್ಬಂದಿ ಕೊರತೆಯಿಂದ ನಲಗುತ್ತಿದೆ.
ಈ ಭಾಗದ ಜನರು ಅದರಲ್ಲೂ ಬಡವರಿಗೆ ವಿಮ್ಸ್ ಆಸರೆಯಾಗಿದೆ. ವಿಮ್ಸ್ ಆಸ್ಪತ್ರೆಯಲ್ಲಿ ರೇಡಿಯಾಲಜಿ, ಅನಾಟಮಿ, ಫಿಜಿಯೋಲಜಿ, ಮೆಡಿಸನ್ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ವೈದ್ಯರ ಕೊರತೆಯನ್ನು ವಿಮ್ಸ್ ಎದುರಿಸುತ್ತಿದೆ. ಇನ್ನು ನರ್ಸ್, ಎಫ್ಡಿಎ ಹಾಗೂ ಎಸ್ಡಿಎ ಸೇರಿದಂತೆ ಇತರ ವೈದ್ಯಕೀಯಕ್ಕೆ ಪೂರಕವಾದ ಸಿಬ್ಬಂದಿ ಕೊರತೆ ಸಾಕಷ್ಟಿದೆ. ವಿಮ್ಸ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆರಸ್, ವೈದ್ಯರು ಸೇರಿದಂತೆ ಸುಮಾರು 276 ಹುದ್ದೆಗಳಲ್ಲಿ 104 ಹುದ್ದೆಗಳು ಖಾಲಿ ಉಳಿದಿರುವುದರಿಂದ ವಿಮ್ಸ್ಗೆ ತೀವ್ರ ತೊಂದರೆಯಾಗಿದೆ.
104 ವೈದ್ಯರ ಹುದ್ದೆ ಖಾಲಿ: ವಿಮ್ಸ್ನ ಕೆಲ ವಿಭಾಗಗಳಲ್ಲಿ ಸಾಕಷ್ಟು ವೈದ್ಯರ ಕೊರತೆ ಇದ್ದು, 70 ಪ್ರೊಫೆಸರ್ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 58 ಹುದ್ದೆಗಳು ಭರ್ತಿಯಾಗಿ 12 ಹುದ್ದೆ ಖಾಲಿ ಇವೆ. 71 ಅಸೋಸಿಯೇಟ್ ಪ್ರೊಫೆಸರ್ಸ್ ಹುದ್ದೆ ಮಂಜೂರಾಗಿದ್ದರೆ, ಅದರಲ್ಲಿ 42 ಭರ್ತಿಯಾಗಿ 29 ಖಾಲಿ ಉಳಿದಿವೆ. 97 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಲ್ಲಿ 48 ಹುದ್ದೆಗಳು ಭರ್ತಿಯಾಗಿ 49 ಹುದ್ದೆಗಳು ಖಾಲಿ ಇವೆ. ಟೂಟರ್ ಅಥವಾ ಸೀನಿಯರ್ ರೆಸಿಡೆಂಟ್ (ವೈದ್ಯರು) 38 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 24 ಭರ್ತಿಯಾಗಿ 14 ಹುದ್ದೆಗಳು ಖಾಲಿ ಇವೆ. ಸ್ಟಾಫ್ನರ್ಸ್ಗಳು ಸೇರಿದಂತೆ ಇತರೆ ಸಿಬ್ಬಂದಿ ಕೊರತೆ ಇಲ್ಲಿದೆ.
ಸಿಬ್ಬಂದಿ ಕೊರತೆ ನಡುವೆ ಕಾರ್ಯ: ವಿಮ್ಸ್ ಆಸ್ಪತ್ರೆ 670 ಬೆಡ್ಗಳ ಸಿಬ್ಬಂದಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಸಾವಿರಾರು ರೋಗಿಗಳು ದಾಖಲಾಗುವ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಇದರಿಂದಾಗಿ ಇರುವ ಸಿಬ್ಬಂದಿಯಲ್ಲಿ ಕಾರ್ಯನಿರ್ವಹಿಸುವುದು ಕಷ್ಟ. ಸಿಬ್ಬಂದಿ ಕೊರತೆಯು ಕೇವಲ ವಿಮ್ಸ್ಗೆ ಬರುವ ರೋಗಿಗಳಿಗೆ ಮಾತ್ರ ತೊಂದರೆಯಲ್ಲದೆ, ವಿಮ್ಸ್ನ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 100ರಿಂದ 150ಕ್ಕೆ ಹೆಚ್ಚಿಸಿರುವುದರಿಂದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಾಲೇಜು ಹಾಗೂ ಆಸ್ಪತ್ರೆ ನಡೆಸುವುದು ಕಷ್ಟದ ಕೆಲಸವಾಗಿರುವುದರಿಂದ ಅಗತ್ಯ ಸಿಬ್ಬಂದಿ ನೇಮಕಾತಿ ತೀರಾ ಅಗತ್ಯ. ಇದರಿಂದಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ.
ಕೊರತೆ ಇದೆ: ವಿಮ್ಸ್ ಪ್ರಾಚಾರ್ಯ ಡಾ. ವಿದ್ಯಾಧರ ಕಿನ್ನಾಳ ಅವರನ್ನು ಸಂಪರ್ಕಿಸಿದಾಗ, ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊರತೆಯ ನಡುವೆಯೂ ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದೆ ಎನ್ನುತ್ತಾರೆ.
ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ 371 ತಿದ್ದುಪಡಿ ಅನುಷ್ಠಾನಗೊಳ್ಳುವಲ್ಲಿ ತಾರ್ಕಿಕ ಹಂತದಲ್ಲಿರುವುದರಿಂದ 371 ಕಲಂ ಜಾರಿಯಾದ ಅನಂತರ ವಿಮ್ಸ್ನಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯನ್ನು ಸರ್ಕಾರ ನೀಗಿಸಬಹುದೇ ಎಂಬುದನ್ನು ಕಾದುನೋಡಬೇಕಾಗಿದೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

