ಕಾರ್ಮಿಕರಿಂದ ಉತ್ತಮ ಕಟ್ಟಡ ನಿರ್ಮಾಣ
ಕುರುಗೋಡು: ದೇಶಿ ತಂತ್ರಜ್ಞಾನ ಹೊಂದಿರುವ ಕಟ್ಟಡ ಕಾರ್ಮಿಕರಿಂದ ಮಾತ್ರ ಉತ್ತಮ ಕಟ್ಟಡ ನಿರ್ಮಾಣ ಸಾಧ್ಯ, ಇದನ್ನು ಸಾಬೀತುಪಡಿಸಲು ಕಟ್ಟಡ ಕಾರ್ಮಿಕರ ಕಲ್ಯಾಣ ಕೇಂದ್ರ, ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕೃಷಿ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಜಿ.ಎನ್. ನಾಗರಾಜ್ ಆಗ್ರಹಿಸಿದರು.
ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಸ್ಥಳೀಯ ಕಟ್ಟಡ ಕಾರ್ಮಿಕ ಸಂಘ ಹಮ್ಮಿಕೊಂಡಿದ್ದ ಕುರುಗೋಡು ವಲಯ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಜಗತ್ತಿನ ಅದ್ಬುತ ಎನ್ನುವ ಹಾಗೂ ದೇಶದಲ್ಲಿ ಹೆಸರು ಮಾಡಿದ ಕೋಟೆ ಕೊತ್ತಲ ನಿರ್ಮಾಣದಲ್ಲಿ ಕಟ್ಟಡ ಕಾರ್ಮಿಕರ ಶ್ರಮವಿದೆ. ಇದೀಗ ಅಂತಹ ಗಟ್ಟಿಮುಟ್ಟಾದ ಕಟ್ಟಡ ನಿರ್ಮಿಸುವಲ್ಲಿ ಅಂದಿನ ತಂತ್ರಜ್ಞಾನದ ಅರಿವು ಇಲ್ಲದಂತಾಗಿದೆ. ಇದಕ್ಕೆ ಕಾರಣ ಅಂದಿನ ಕಟ್ಟಡ ಕಾರ್ಮಿಕರು ಶಿಕ್ಷಣದಿಂದ ವಂಚಿತರಾಗಿದ್ದರು. ಶ್ರಮಜೀವಿ ಅಧಾರಿತ ತಂತ್ರಜ್ಞಾನ ದೇಶದ ಅಭಿವೃದ್ಧಿಗೆ ಮುಂದಾಗಬೇಕಾದರೆ ಕಟ್ಟಡ ಕಾರ್ಮಿಕ ಮತ್ತು ಅವರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಮುಂದಾಗಿ ವಸತಿ, ಶಿಕ್ಷಣ, ಮತ್ತಿತರೆ ಸೌಲಭ್ಯಗಳನ್ನು ನೀಡಬೇಕಿದೆ ಎಂದರು.
ಆಡಳಿತ ಸಂಪೂರ್ಣ ವಿಫಲ: ಸಿಐಟಿಯು ಜಿಲ್ಲಾಧ್ಯಕ್ಷ ಆರ್.ಎಸ್. ಬಸವರಾಜ್ ಮಾತನಾಡಿ, ಕಟ್ಟಡ ಕಾರ್ಮಿಕರ ಸತತ ಹೋರಾಟದ ಫಲವಾಗಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿರ್ಮಿಸಿದೆ. ಆದರೆ ಮಂಡಳಿ ಯೋಜಿಸಿದ ಸೌಲಭ್ಯ ಕಾರ್ಮಿಕರಿಗೆ ತಲುಪಿಸುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಕಾರ್ಮಿಕರ ಅಪಘಾತಕ್ಕೆ ಪರಿಹಾರ, ವೈದ್ಯಕೀಯ ವೆಚ್ಚ ನಿಧಿ, ಬಿಪಿಎಲ್ ಪಡಿತರ ಚೀಟಿ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ ಮತ್ತಿತರೆ ಸೌಲಭ್ಯ ಶೇ. 70 ಕಾರ್ಮಿಕರಿಗೆ ದಕ್ಕುತ್ತಿಲ್ಲ. ಇದಕ್ಕೆ ಕಲ್ಯಾಣ ಮಂಡಳಿ ಸರ್ವೇ ಮೂಲಕ ಕಾರ್ಮಿಕರನ್ನು ಗುರುತಿಸುವಲ್ಲಿ ವಿಫಲವಾಗಿರುವುದೇ ಕಾರಣ. ಮಂಡಳಿ ರಚನೆ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಪೂರಕ ಸಾಮಗ್ರಿ ಒದಗಿಸುವ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರು ಎಂದು ಪರಿಗಣಿಸಲು ಸರ್ಕಾರ ಹಿಂದೇಟು ಹಾಕಿತ್ತು. ಆದರೆ ನಿರಂತರ ಹೋರಾಟದಿಂದಾಗಿ ಮಂಡಳಿ ವ್ಯಾಪ್ತಿಗೆ ಮರಳು, ಕಲ್ಲು ಮತ್ತಿತರೆ ಸಾಮಗ್ರಿ ಒದಗಿಸುವ ಘಟಕದ ಕಾರ್ಮಿಕರು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಕಾರ್ಮಿಕರು ಹೊರಗೆ: ಜಿಲ್ಲಾ ಉಪಾಧ್ಯಕ್ಷ ಎಚ್.ಎಂ. ವಿಶ್ವನಾಥಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಅಂದಾಜು 2 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ ಕಾರ್ಮಿಕ ಇಲಾಖೆ ಕೇವಲ 9635 ಕಾರ್ಮಿಕರನ್ನು ಗುರುತಿಸಿದೆ. ಬಹುತೇಕ ಕಾರ್ಮಿಕರು ಕಾರ್ಮಿಕ ಇಲಾಖೆ ಮತ್ತು ರಕ್ಷಣಾ ಮಂಡಳಿ ವ್ಯಾಪ್ತಿಯಿಂದ ಹೊರಗಿದ್ದಾರೆ. ತಕ್ಷಣ ಸರ್ವೇ ಕೈಗೊಳ್ಳಬೇಕು. ಕುಡಿತಿನಿ ಗ್ರಾಮದ ಕೆಪಿಸಿಎಲ್ ವಲಯದಲ್ಲಿ 500ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದಾರೆ. ಇದು ಕಾರ್ಮಿಕ ಇಲಾಖೆ ಕಣ್ಣಿಗೆ ಬಿದ್ದಿಲ್ಲ ಎಂದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್, ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಗೌಡ, ಸ್ಮಶಾನ ಕಾರ್ಮಿಕರ ಸಂಘದ ಅಧ್ಯಕ್ಷ ಸಿ. ಹನುಮಂತಪ್ಪ ಮಾತನಾಡಿದರು.
ಸ್ಥಳೀಯ ಘಟಕದ ಅಧ್ಯಕ್ಷ ನಯನಗೌಡ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ವಾಣಿಶ್ರೀ ಹೊನ್ನೂರಸ್ವಾಮಿ, ಸದಸ್ಯ ಶಂಕರ್ದಾಸ್ ಇದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದ ಕಾರ್ಯಕ್ರಮ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

