ಬಳ್ಳಾರಿ

ನ್ಯಾಯಕ್ಕಾಗಿ ಭೂಸಂತ್ರಸ್ತರ ಬೈಕ್ ರ್ಯಾಲಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 21
ಮಿತ್ತಲ್ ಹಾಗೂ ಬ್ರಹ್ಮಿಣಿ ಸ್ಟೀಲ್ಸ್‌ಗೆ ವಶಪಡಿಸಿಕೊಂಡಿರುವ ಜಮೀನುಗಳಿಗೆ ದರ ನಿಗದಿ ಹಾಗೂ ಪುನರ್ ವಸತಿ ಸೌಲಭ್ಯ ಒದಗಿಸುವಲ್ಲಿ ಆಗಿರುವ ಅನ್ಯಾಯ ಕುರಿತಾಗಿ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿ ಕುಡಿತಿನಿಯಿಂದ ಬಳ್ಳಾರಿ ವರೆಗೆ ಬೈಕ್ ರ್ಯಾಲಿ ನಡೆಸಿದ  ರೈತರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಹೋರಾಟ ಸಮಿತಿಯ ಕುಡಿತಿನಿ, ಹರಗಿನಡೋಣಿ, ತಿಮ್ಮಲಾಪುರ, ವೇಣಿವೀರಾಪುರ, ಕೊಳಗಲ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ಜಿಲ್ಲೆಯ ಕುಡಿತಿನಿಯಿಂದ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ರ್ಯಾಲಿ ಮೂಲಕ ಆಗಮಿಸಿದ ಅವರು, ಮಿತ್ತಲ್ ಮತ್ತು ಬ್ರಹ್ಮಿಣಿ ಕಂಪನಿಗಳಿಗಾಗಿ ರೈತರಿಂದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡ ಮಾಜಿ ಸಚಿವರಾದ ಜನಾರ್ದನರೆಡ್ಡಿ, ಮುರುಗೇಶ್ ನಿರಾಣಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಇತರೆ ಐಎಎಸ್ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಭೂಮಿ ಕಳೆದುಕೊಂಡ ರೈತರಿಗೆ ಪರಿಷ್ಕೃತ ದರ ಹಾಗೂ ಪುನರ್ ವಸತಿ ಕಲ್ಪಿಸುವಂತೆ ಆಗ್ರಹಿಸಿದರು. ಭೂ-ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಗ್ರಾಮಗಳ ನೂರಾರು ರೈತರು ಕುಡತಿನಿಯಿಂದ ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಆಗಮಿಸಿ ನಗರದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ರೈತರಿಗೆ ಅನ್ಯಾಯ: ಪ್ರತಿಭಟನೆ ನೇತೃತ್ವ ವಹಿಸಿದ್ದ ಭೂ ಸಂತ್ರಸ್ತರ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಯು. ಬಸವರಾಜ್ ಮಾತನಾಡಿ, ಮಿತ್ತಲ್, ಬ್ರಹ್ಮಿಣಿ, ಶಾತವಾಹನ ಕೈಗಾರಿಕೆಗಳು ಹಾಗೂ ಬಿಟಿಪಿಎಸ್‌ಗೆಂದು ಜಿಲ್ಲೆಯ ಕುಡತಿನಿ, ಹರಗಿನಡೋಣಿ, ಕೊಳಗಲ್, ಎರ್ರಂಗಳಿ, ವೇಣಿವೀರಾಪುರ, ಕೊಳಗಲ್ಲು, ಬಸಾಪುರ, ತಾಳೂರು, ಸಿದ್ದಮ್ಮನಹಳ್ಳಿ, ವಡ್ಡು, ಬೇವಿನಹಳ್ಳಿ, ಕೊಟಗಿನಹಾಳ್, ಗಾದಿಗನೂರು, ಭುವನಹಳ್ಳಿ, ಕಕ್ಕ ಬೇವಿನಹಳ್ಳಿ, ಚಾಗನೂರು, ಬೂದಿಹಾಳ್, ಅಮರಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ 1984ರ ಭೂ ಸ್ವಾಧೀನ ಕಾಯ್ದೆ ಪ್ರಕಾರ ಕೆಐಎಡಿಬಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಬೆಂಬಲ ಬೆಲೆ ದೊರೆಯದೆ ಸಾವಿರಾರು ಕೋಟಿಯಷ್ಟು ರೈತರಿಗೆ ಅನ್ಯಾಯವಾಗಿದೆ. ಅಲ್ಲದೆ, ಈ ಕಾಯ್ದೆಯಡಿ ಆಗಿರುವ ಭೂ ಸ್ವಾಧೀನ ಪ್ರಕ್ರಿಯೆ ಅಸಿಂಧು ಎಂದು ಕಳೆದ 2007ರಲ್ಲಿ ಕೇಂದ್ರ ಸರ್ಕಾರವೂ ಸೂಚಿಸಿದ್ದು, ಕಾಯ್ದೆಗೆ ಇದೀಗ ತಿದ್ದುಪಡಿ ಮಾಡಿ ಹೊಸ ರೂಪ ನೀಡಲಾಗಿದೆ ಎಂದು ತಿಳಿಸಿದರು.
ಕುಡಿತಿನಿ ಸುತ್ತಮುತ್ತಲಿನ ಸುಮಾರು 6 ಹಳ್ಳಿಗಳ 4000 ರೈತ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಇದರಿಂದಾಗಿ 6 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಕೇಂದ್ರದಲ್ಲಿ ಹೊಸದಾಗಿ ರೂಪಿಸಿರುವ ಭೂ ಸ್ವಾಧೀನ ಕಾಯ್ದೆ-2013ರಡಿ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಭೂಮಿಗಳ ಬೆಲೆಗಳನ್ನು ಪುನರ್ ಪರಿಷ್ಕರಿಸಿ ದರ ನಿಗದಿಪಡಿಸಬೇಕು. ರೈತರಿಂದ ಖರೀದಿಸಿದ ಭೂಮಿಯನ್ನು ಉತ್ತಮ್ ಗಾಲ್ವಾ ಕಂಪನಿಗೆ ಮಾರಾಟ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.
ರ್ಯಾಲಿಯಲ್ಲಿ ಜಿ. ರುದ್ರಗೌಡ, ಬಿ. ಪೋಲಪ್ಪ, ನಾಗದೇವಪ್ಪ, ಆಲ್ದಳ್ಳಿ ಬಸವರಾಜ್, ಜಿ. ವೀರನಗೌಡ, ರುದ್ರಪ್ಪ, ಗವಿಸಿದ್ದಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.