ವಿಎಸ್ಕೆ ವಿವಿ ವಿಸಿ ವಿರುದ್ಧದತನಿಖೆ: ತಿರಸ್ಕರಿಸಿದ ರಾಜ್ಯಪಾಲ
-ಶಶಿಧರ ಮೇಟಿ
ಕ.ಪ್ರ.ವಾರ್ತೆ ಬಳ್ಳಾರಿ ಅ. 22
ವಿಜಯನಗರ ಶ್ರೀಕೃಷ್ಣದೇವರಾಯ (ವಿಎಸ್ಕೆ) ವಿಶ್ವವಿದ್ಯಾಲಯದ ಕುಲಪತಿಗಳ ವಿರುದ್ಧ ಆಯೋಗ ರಚಿಸಿ, ತನಿಖೆ ನಡೆಸಬೇಕೆಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜ್ಯಪಾಲರಿಗೆ ಪತ್ರ ಬರೆದಿತ್ತು. ಅದಕ್ಕೆ ರಾಜ್ಯಪಾಲರು ಸರ್ಕಾರದ ಪ್ರಸ್ತಾವನೆ ತಿರಸ್ಕರಿಸಿ, ವಿವಿ ಆಡಳಿತದಲ್ಲಿ ಕುಲಪತಿಯೇ ಪ್ರಮುಖ ಆಡಳಿತಾಧಿಕಾರಿ ಎಂದು ಪತ್ರ ಬರೆದಿರುವುದು ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದೆ.
ವಿಎಸ್ಕೆ ವಿವಿಯ ವಿಸಿ ವಿರುದ್ಧ ತನಿಖೆಗೆ ಆಯೋಗವನ್ನು ನೇಮಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಬರೆದ ನಾಲ್ಕೂವರೆ ಪುಟಗಳ ಪತ್ರಕ್ಕೆ ರಾಜ್ಯಪಾಲರು, ವಿಸಿ ವಿರುದ್ಧ ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಪತ್ರದ ಮೂಲಕ ಉತ್ತರಿಸಿದ್ದಾರೆ.
ಗೋಯಲ್ ಆಗಸ್ಟ್ನಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಪತ್ರ ಬರೆದು, ವಿಸಿ ಅವರ ಮೇಲೆ ಬಳ್ಳಾರಿ ಜಿಲ್ಲೆಯ ಶಾಸಕರು ಸೇರಿದಂತೆ ಇತರರು 8 ಆರೋಪಗಳನ್ನು ಮಾಡಿದ್ದಾರೆ. ಅಧಿಕಾರ ದುರುಪಯೋಗ, ನಿಯಮ ಬಾಹಿರ ವರ್ಗಾವಣೆ, ನಿಯಮ ಬಾಹಿರ ನೇಮಕಾತಿ, ನಿಯಮ ಬಾಹಿರ ಮುಂಬಡ್ತಿ, ವಿವಿಯಲ್ಲಿ ಕನ್ನಡ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ವಿಸಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ, ರಿಜಿಸ್ಟ್ರಾರ್ ಅಧಿಕಾರವನ್ನು ಪರಿಗಣಿಸದೆ ಕಾರ್ಯನಿರ್ವಹಿಸಿದ್ದಾರೆ ಎಂದು ವಿಸಿ ವಿರುದ್ಧ ತನಿಖೆ ನಡೆಸಲು ಆಯೋಗ ರಚಿಸಿ, ತನಿಖೆ ಮಾಡಬೇಕು. ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದರು.
ವಿಸಿ-ಕುಲಸಚಿವರ ಶೀತಲ ಸಮರ: ವಿಸಿ ಮಂಜಪ್ಪ ಹೊಸಮನಿ ಹಾಗೂ ಕುಲಸಚಿವ ವಿಜಯಕುಮಾರ್ ಮಧ್ಯೆ ಶೀತಲ ಸಮರ ಏರ್ಪಟ್ಟಿತ್ತು. ದಿನದಿಂದ ದಿನಕ್ಕೆ ಅದು ತಾರಕಕ್ಕೇರಿತ್ತು. ಇದೇ ಸಂದರ್ಭದಲ್ಲಿ ವಿವಿ ಸಿಂಡಿಕೇಟ್ ಸಭೆಯಲ್ಲಿ ವಿಜಯಕುಮಾರ್ ಅವರನ್ನು ವರ್ಗಾಯಿಸಲು ನಿರ್ಧರಿಸಿತ್ತು. ಆದರೆ ರಾಜ್ಯ ಸರ್ಕಾರ ವಿಜಯಕುಮಾರ್ ಅವರನ್ನು ವಿವಿಯಲ್ಲಿಯೇ ಮುಂದುವರಿಸಬೇಕೆಂದು ಆದೇಶಿಸಿತ್ತು. ಸರ್ಕಾರದ ಆದೇಶ ವಿರುದ್ಧ ವಿಸಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಹೀಗೆ ವಿಸಿ ಹಾಗೂ ಕುಲಸಚಿವರ ಮಧ್ಯದ ಜಗಳ ನಡೆದೇ ಇದೆ. ವಿಸಿ ಸರ್ಕಾರದ ಆದೇಶವನ್ನು ಮನ್ನಿಸಿಲ್ಲ ಎಂಬ ಸಿಟ್ಟು ಸರ್ಕಾರಕ್ಕಿತ್ತು. ಆದರೆ ರಾಜ್ಯಪಾಲರೂ ಸರ್ಕಾರದ ಪತ್ರವನ್ನು ಪರಿಗಣಿಸದೆ ತಿರಸ್ಕರಿಸಿರುವುದು ವಿಸಿ ಮಂಜಪ್ಪ ಅವರಿಗೆ ಬಲ ಬಂದಂತಾಗಿದೆ.
ರಾಜ್ಯಪಾಲರ ಪತ್ರದಲ್ಲಿ ಏನಿದೆ?: ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗೋಯಲ್ ಬರೆದಿರುವ ಪತ್ರಕ್ಕೆ ಸೆ.23ರಂದು ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲರು, ಸರ್ಕಾರ ಬರೆದಿರುವ ಪತ್ರವನ್ನು, ಪತ್ರದಲ್ಲಿರುವ ಆರೋಪಗಳನ್ನು, ಅದರ ಜತೆಗೆ ಇರುವ ಪತ್ರಗಳನ್ನು ಪರಿಶೀಲಿಸಿದ್ದೇನೆ. ನನ್ನ ಅನಿಸಿಕೆಯಂತೆ ವಿಸಿ ವಿರುದ್ಧ ಕುಲಸಚಿವರನ್ನು ಯಾರೋ ಎತ್ತಿ ಕಟ್ಟುತ್ತಿದ್ದಾರೆ. ಇದರಿಂದ ವಿವಿ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ವಿವಿ ಕಾರ್ಯನಿರ್ವಹಣೆಯಲ್ಲಿ ವಿಸಿಯೇ ಮುಖ್ಯಸ್ಥರು. ವಿವಿಯಲ್ಲಿ ಇಂಥ ಬೆಳವಣಿಗೆಗಳು ಸರಿಯಲ್ಲ. ಇಂಥ ಬೆಳವಣಿಗೆಯನ್ನು ಪ್ರೋತ್ಸಾಹಿಸಬಾರದು. ಕುಲಪತಿಗಳ ವಿರುದ್ಧ ತನಿಖೆಯ ಪ್ರಸ್ತಾವನೆಯನ್ನು ತಿರಸ್ಕರಿಸುತ್ತೇನೆ ಎಂದು ಉತ್ತರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

