ಬಳ್ಳಾರಿ

ಕೂಡ್ಲಿಗಿ: ಬೇಸಿಗೆ ಮುನ್ನವೇ ಬರ!

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಅ. 25
ಈ ವರ್ಷದ ಮಳೆ ಅಪರೂಪದ ಅತಿಥಿಯಾಗಿದ್ದರಿಂದ ರೈತರು ಬರದ ತೀವ್ರತೆಯನ್ನು ಅನುಭವಿಸುವ ಕಾಲ ದೂರವಿಲ್ಲ. ಬರಿ ರೈತರಷ್ಟೇ ಅಲ್ಲದೆ ತಾಲೂಕಿನ ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದ ಕಾರಣ ಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಸಿಗುವುದು ಅಪರೂಪವಾಗುವುದರಲ್ಲಿ ಸಂದೇಹವಿಲ್ಲ. ಬದುಕು ಕಟ್ಟಿಕೊಳ್ಳಲು ರೈತರು ಪ್ರತಿವರ್ಷದಂತೆ ಈ ಬಾರಿಯೂ ಗುಳೆ ಹೋಗುವುದು ಕಾಯಂ ಆಗಿದ್ದು, ಗುಳೆ ತಪ್ಪಿಸುವ ಸರ್ಕಾರದ ಯಾವ ಯೋಜನೆಗಳೂ ಆಸರೆಯಾಗದೆ ಇರುವುದು ಮಾತ್ರ ದುರಂತ.
ತಾಲೂಕಿನ ಕೂಡ್ಲಿಗಿ, ಕೊಟ್ಟೂರು, ಹೊಸಹಳ್ಳಿ, ಗುಡೇಕೋಟೆ ಈ 4 ಹೋಬಳಿಗಳಲ್ಲೂ ಬರದ ಛಾಯೆ ಕಂಡಿದೆ. ಕೊಟ್ಟೂರು ಮತ್ತು ಕೂಡ್ಲಿಗಿ ಹೋಬಳಿಗಳಲ್ಲಿ ಸಾಧಾರಣ ಮಳೆಯಾಗಿದ್ದರಿಂದ ಅಲ್ಪಸ್ವಲ್ಪ ಫಸಲು ತೆಗೆದು ಲಾಭವಾಗದೆ ಇದ್ದರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಗುಡೇಕೋಟೆ ಮತ್ತು ಹೊಸಹಳ್ಳಿ ಭಾಗದ ರೈತರು ಬೆಳೆದ ಶೇಂಗಾ, ಮೆಕ್ಕೆಜೋಳ, ಹತ್ತಿ ಬೆಳೆಗೆ ಸೂಕ್ತಕಾಲಕ್ಕೆ ಮಳೆಯಾಗದ ಕಾರಣ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಕೈಗೆ ಸಿಕ್ಕ ಫಸಲನ್ನು ಒಕ್ಕಲುತನ ಮಾಡಿಕೊಂಡು ದೀಪಾವಳಿ ಹಬ್ಬ ಮುಗಿಸಿ ಗುಳೆ ಹೋಗಲು ತಯಾರಾಗುತ್ತಿದ್ದಾರೆ.
ಹೆಚ್ಚು ಲಾಭ ಇಲ್ಲದ ಕಾರಣ ತಾಲೂಕಿನ ಹತ್ತಾರು ತಾಂಡಾಗಳ ಲಂಬಾಣಿ ಸಮುದಾಯದವರಂತೂ ಪ್ರತಿವರ್ಷ ಗುಳೆ ಹೋಗುವುದನ್ನ ತಪ್ಪಿಸಿಲ್ಲ. ರೈತರಿಗೆ ಉದ್ಯೋಗ ನೀಡುವ ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿಯಂತಹ ಯೋಜನೆಗಳು ತಾಲೂಕಿನಲ್ಲಿ ನೆಲಕಚ್ಚಿದ್ದರಿಂದ ಆ ಯೋಜನೆಯ ಹಣ ರೈತರಿಗೆ ತಲುಪುತ್ತಿಲ್ಲ. ರೈತರಿಗೆ ಸರ್ಕಾರದ ಯಾವ ಯೋಜನೆಗಳು ಆಸರೆಯಾಗದಿರುವುದು ವಿಪರ್ಯಾಸ. ಹೀಗಾಗಿ ಇಲ್ಲಿಯ ರೈತರು ಮಲೆನಾಡು, ಮೈಸೂರು, ಮಡಿಕೇರಿ ಮುಂತಾದ ಭಾಗಗಳಿಗೆ ದುಡಿಯಲು ಹೋಗಲು ಸಿದ್ಧರಾಗಿದ್ದಾರೆ.
ಗುಬ್ಬಿಗೆ ಕುಡಿಯಲೂ ನೀರಿಲ್ಲ: ಮಳೆಗಾಲ ಮುಗಿಯುತ್ತ ಬಂದಿದ್ದು, ತಾಲೂಕಿನ 100ಕ್ಕೂ ಹೆಚ್ಚು ಕೆರೆಗಳಲ್ಲಿ ಪೈಕಿ ಕೆಲವು ಕೆರೆಗಳಲ್ಲಿ ಗುಬ್ಬಿ ಕುಡಿಯಲು ನೀರಿಲ್ಲ. ಇನ್ನೂ ಕೆಲವು ಕೆರೆ, ಕಟ್ಟೆಗಳಲ್ಲಿ ನೆಪಕ್ಕೆ ನೀರಿದೆ ಎಂದು ಕಂಡುಬಂದರೂ ಒಂದು ತಿಂಗಳು ಕಳೆದರೆ ಯಾವ ಕೆರೆಗಳಲ್ಲೂ ಒಂದು ಹನಿ ನೀರು ಸಿಗುವುದಿಲ್ಲ. ವಾಯುಭಾರ ಕುಸಿತದಿಂದ ಅಪರೂಪಕ್ಕೆನಾದರೂ ದೊಡ್ಡ ಮಳೆಯಾದರೆ ಕೆರೆ, ಕಟ್ಟೆ ತುಂಬಿದರೆ ಮಾತ್ರ ಬರುವ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತದೆ. ಆದರೆ ಕೆರೆ, ಕಟ್ಟೆ ತುಂಬುವ ಮಳೆ ಬರುತ್ತದೆ ಎನ್ನುವುದು ಖಚಿತ ಇಲ್ಲ. ಹೀಗಾಗಿ ತಾಲೂಕಿನ ಜನತೆಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಮುಂಜಾಗ್ರತ ಕ್ರಮವಾಗಿ ಸರ್ಕಾರ, ಜಿಲ್ಲಾ, ತಾಲೂಕಾಡಳಿತ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕಿದೆ.
ಕಾಡುಗಳಲ್ಲಿ ಕುರುಚಲು ಗಿಡಗಳು: ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವುದರಿಂದ ಕಾಡು ಕುರುಚಲು ಗಿಡಗಳಿಂದ ತುಂಬಿವೆ. ಅಪರೂಪದ ಗಿಡಮರಗಳು, ಔಷಧಿ ಸಸ್ಯಗಳು ಮಳೆಯಿಲ್ಲದೆ ವಿನಾಶವಾಗುತ್ತಿವೆ. ಇಲಾಖೆ, ಜನಸಾಮಾನ್ಯರಿಗೆ ಅರಣ್ಯದ ಬಗ್ಗೆ ಕಾಳಜಿ ಇಲ್ಲದಂತಾಗಿರುವುದರಿಂದ ಚಿರತೆ, ಕಾಡುಹಂದಿಗಳು, ಕರಡಿಗಳು ಈಗ ಊರುಗಳತ್ತ ಮುಖ ಮಾಡುತ್ತಿವೆ. ಮಳೆ ಕೊರತೆಯಿಂದಾಗಿ ಕಾಡುಪ್ರಾಣಿಗಳಿಗೆ ಅರಣ್ಯದಲ್ಲಿ ಆಹಾರ, ನೀರು ಸಿಗದಿದ್ದರಿಂದ ರೈತರ ಕೊಳವೆಬಾವಿ ಇರುವ ತೋಟಗಳಿಗೆ ಬಂದು ಬೆಳೆನಾಶ ಮಾಡುತ್ತಿವೆ.

ಮಳೆ ಇಲ್ಲದೆ ನಷ್ಟ
ಈ ವರ್ಷ ಅಲ್ಪ-ಸ್ವಲ್ಪ ಮಳೆಯಲ್ಲಿಯೇ ಬಿಟಿ ಹತ್ತಿ ಬೆಳೆದು ರೈತರು ನಷ್ಟ ಅನುಭವಿಸಿದ್ದಾರೆ. ಹೊಸಹಳ್ಳಿ, ಗುಡೇಕೋಟೆ ಭಾಗದಲ್ಲಿ ಮಳೆ ಇಲ್ಲದೆ ಶೇಂಗಾ ಒಣಗಿದೆ. ಹೀಗಿರುವಾಗ ಕೆರೆಗಳಲ್ಲಿಯೂ ನೀರಿಲ್ಲ. ಮಳೆ ನೀರು ಸಂಗ್ರಹಿಸಲು ಸರ್ಕಾರದ ಯಾವ ಯೋಜನೆಗಳು ಇದುವರೆಗೂ ಫಲ ನೀಡಿಲ್ಲ. ಈ ವರ್ಷ ಕೂಡ್ಲಿಗಿ ತಾಲೂಕಿನಲ್ಲಿ ಮತ್ತೆ ಬರದ ಛಾಯೆ ಮೂಡಿದೆ. ಮುಂದಿನ ದಿನಗಳಲ್ಲಿ ಒಂದೆರಡು ಮಳೆಯಾದರೆ ಮಾತ್ರ ಕುಡಿಯಲು ನೀರು ಸಿಗುತ್ತದೆ. ಇಲ್ಲದಿದ್ರೆ ಜನ, ಜಾನುವಾರಿಗೆ ಕುಡಿಯಲು ನೀರು ಸಿಗುವುದಿಲ್ಲ. ತಾಲೂಕು ಅಡಳಿತ, ಸ್ಥಳೀಯ ಪಂಚಾಯ್ತಿಗಳು ಈಗಿನಿಂದಲೇ ಇರುವ ನೀರನ್ನು ಸಂರಕ್ಷಿಸಲು ಮುಂದಾಗಬೇಕು.
- ಭರಮಪ್ಪ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ

-ಭೀಮಣ್ಣ ಗಜಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.