ಬಳ್ಳಾರಿ

ಮಾಲ್ವಿ ಜಲಾಶಯಕ್ಕೆ ಬಡಿದಿದೆ ಜಲಕ್ಷಾಮ

Published On :

ಹಗರಿಬೊಮ್ಮನಹಳ್ಳಿ: ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ನೀಡಿದ ಎಲ್ಲ ಭರವಸೆಗಳು ಈಡೇರಿದ್ದರೆ ಇಷ್ಟೊತ್ತಿಗಾಗಲೇ ತಾಲೂಕಿನ ಜೀವನಾಡಿ ಮಾಲ್ವಿ ಜಲಾಶಯಕ್ಕೆ ಜಲಕ್ಷಾಮ ಎಂಬುದೇ ಇರುತ್ತಿರಲಿಲ್ಲ. ಆದರೆ ನೀರು ಹರಿಸುವುದಾಗಿ ಅವರೆಲ್ಲರೂ ಹಳಿ ಇಲ್ಲದ ಮಾರ್ಗದ ಮೇಲೆ ಸುಳ್ಳಿನ ರೈಲು ಬಿಟ್ಟಿದ್ದರಿಂದ ಇಂದು ಮಾಲ್ವಿ ಜಲಾಶಯ ನೀರಿಗಾಗಿ ಅಕ್ಷರಶಃ ಪರಿತಪಿಸುತ್ತಿದೆ .
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಾಲೂಕಿನ ಮಾಲ್ವಿ ಡ್ಯಾಂಗೆ ಖುದ್ದು ಭೇಟಿನೀಡಿ ಪರಿಶೀಲಿಸಿದರು ಕೂಡ ಜಲಾಶಯಕ್ಕೆ ಶಾಶ್ವತ ನೀರೊದಗಿಸುವ ಯೋಜನೆಯ ಗ್ರಹಣವನ್ನು ಅವರಿಂದಲೂ ಬಿಡಿಸಲಾಗಲಿಲ್ಲ. ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಗ್ರಾಮದ ಬಳಿ ಹರಿಯುವ ಚಿಕ್ಕಹಗರಿ ನದಿಗೆ 1972-73ರಲ್ಲಿ 25 ಅಡಿ ಎತ್ತರದ ಜಲಾಶಯ ನಿರ್ಮಿಸಲಾಯಿತು. ಬರದ ನಾಡಿನ ಮಾಲ್ವಿ ಡ್ಯಾಂಗೆ ತುಂಗಭದ್ರಾ ಹಾಗೂ ಭದ್ರಾ ಜಲಾಶಯಗಳಿಂದ ನೀರು ತುಂಬಿಸುವುದಾಗಿ ಪ್ರತಿ ಚುನಾವಣೆ ಸಂದರ್ಭದಲ್ಲಿ ಭರವಸೆ, ಆಶ್ವಾಸನೆ ನೀಡಿ ವಿಧಾನಸಭೆಗೆ ಆಯ್ಕೆಯಾಗಿ ಹೋಗಿರುವ ಶಾಸಕರ ಸಂಖ್ಯೆಯೇ ಬರೋಬ್ಬರಿ ಆರು. ಆದರೆ ಇವರ್ಯಾರು ಕೂಡ ಮಾಲ್ವಿ ಡ್ಯಾಂಗೆ ಶಾಶ್ವತ ನೀರು ತರುವ ಕಡೆಗೆ ಹೆಚ್ಚು ಗಮನ ಹರಿಸಲಿಲ್ಲ. ನಾಲ್ಕು ದಶಕಗಳಿಂದ ಹೋರಾಟ ಮಾಡಿದರು ಫಲ ಸಿಗುತ್ತಿಲ್ಲ.
ಮಳೆಗಾಲದಲ್ಲಿ ಸುಮಾರು 6 ತಿಂಗಳ ಕಾಲ ತುಂಗಭದ್ರಾ ಜಲಾಶಯದ ಹಿನ್ನೀರು ಬಂದು ನಿಲ್ಲುತ್ತದೆ. ಹೀಗೆ ಬಂದು ನಿಲ್ಲುವ ಹಿನ್ನೀರನ್ನು ಏತನೀರಾವರಿ ಯೋಜನೆ ಮೂಲಕ ಡ್ಯಾಂಗೆ ತುಂಬಿಸುವ ಒಂದು ಮಾರ್ಗವಿದೆ. ಚಿಕ್ಕಹಗರಿನದಿ ಹರಿಯುವ ಸರಹದ್ದಿನಲ್ಲಿ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಗಡಿಗ್ರಾಮ ಹಿರೆ ಮೇಗಳಗೇರಿ ಬಳಿ ಹರಿಯುವ ಭದ್ರಾ ಡ್ಯಾಂನ ಕಾಲುವೆಯಿಂದ ಹಗರಿ ಹಳ್ಳಕ್ಕೆ ನೀರು ಹರಿಸಿದರೆ ಆ ನೀರು ನೇರವಾಗಿ ಹಳ್ಳದ ಮೂಲಕ ಡ್ಯಾಂಗೆ ಹರಿಯುತ್ತದೆ. ಈ ಎರಡು ಮಾರ್ಗಗಳ ಮೂಲಕ ನೀರು ತುಂಬಿಸಿ ಡ್ಯಾಂಗೆ ಶಾಶ್ವತ ಒದಗಿಸಬಹುದು.
15 ಬಾರಿ ಮಾತ್ರ ಭರ್ತಿ: 972-73ರಲ್ಲಿ ನಿರ್ಮಾಣಗೊಂಡಿರುವ ಮಾಲ್ವಿ ಡ್ಯಾಂ ಆರಂಭದಲ್ಲಿ ಹದಿನೈದು ಬಾರಿ ಭರ್ತಿಯಾಗಿದ್ದು ಬಿಟ್ಟರೆ ನೀರಿಲ್ಲದೆ ಒಣಗಿದ್ದೆ ಹೆಚ್ಚು. ತೀರಾ ಇತ್ತೀಚಿಗೆ 2009ರಲ್ಲಿ ಸುಮಾರು 20 ದಿನಗಳ ಕಾಲ ಡ್ಯಾಂ ಭರ್ತಿಯಾಗಿ ಹರಿಯಿತು. ಅದು ಬಿಟ್ಟರೆ ಅಲ್ಲಿಂದ ಇಲ್ಲಿಯವರೆಗೂ ಜಲಕ್ಷಾಮ. ಪ್ರತಿ ಮಳೆಗಾಲದಲ್ಲಿ ಹೆಚ್ಚು ಕಡಿಮೆ ಮುಕ್ಕಾಲು ಟಿಎಂಸಿ ನೀರು ಸಂಗ್ರಹವಾಗುತ್ತದೆ. ಪ್ರತಿ ಮಳೆಗಾಲದಲ್ಲಿ ಕನಿಷ್ಠ ಒಂದು ಟಿಎಂಸಿ ನೀರನ್ನು ತುಂಗಭದ್ರಾ ನದಿಯಿಂದ ಲಿಫ್ಟ್ ಮೂಲಕ ನೀರು ತುಂಬಿಸಿದರೆ ಜಲಾಶಯಕ್ಕೆ ಅಂಟಿರುವ ಜಲಕ್ಷಾಮ ಶಾಶ್ವತವಾಗಿ ತೊಲಗಲಿದೆ.
16 ಕಿ.ಮೀ. ಎಡದಂಡೆ ಹಾಗೂ 32 ಕಿ.ಮೀ. ಉದ್ದದ ಬಲದಂಡೆ ಮುಖ್ಯ ಕಾಲುವೆಗಳಿಂದ ಸುಮಾರು ಹದಿನೈದು ಗ್ರಾಮಗಳ ಹತ್ತು ಸಾವಿರ ಹೆಕ್ಟೇರ್ ಒಣಭೂಮಿಗೆ ಜಲಾಶಯದಿಂದ ನೀರಾವರಿ ಸೌಲಭ್ಯವಿದೆ. ಅಲ್ಲದೇ ಸಾವಿರಾರು ಕೊಳವೆಬಾವಿಗಳು ಈ ಜಲಾಶಯವನ್ನೇ ಸಂಪೂರ್ಣ ಆಶ್ರಯಿಸಿಕೊಂಡಿವೆ. ಒಟ್ಟಾರೆ ಈ ಜಲಾಶಯ ಭರ್ತಿಯಾದರೆ ಸಾವಿರಾರು ರೈತಕುಟುಂಬಗಳಿಗೆ ಅನುಕೂಲವಾಗಲಿದೆ.
ಎರಡು ಟಿಎಂಸಿ ನೀರು ಅಗತ್ಯ: ಈ ಜಲಾಶಯದ ಜಲಕ್ಷಾಮ ನಿವಾರಣೆಯಾಗಬೇಕಾದರೆ ಎರಡು ಟಿಎಂಸಿ ನೀರು ಅಗತ್ಯವಿದೆ. ಕನಿಷ್ಠ ಒಂದು ಟಿಎಂಸಿ ನೀರು ಸಿಕ್ಕರೆ ಸಾಕು ಡ್ಯಾಂ ಭರ್ತಿಯಾಗಿ ಹರಿದರೆ ನೀರಿಲ್ಲದೆ ಒಣಗಿರುವ ಹಗರಿ ಹಳ್ಳಕ್ಕೆ ಮರುಜೀವ ಬಂದು ಮೀನುಗಾರಿಕೆ ಆರಂಭವಾಗಿ ನೂರಾರು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಸಿಗಲಿದೆ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ನೀಗುವುದರಿಂದ ಈ ಭಾಗದಲ್ಲಿ ಹೈನುಗಾರಿಕೆಗೆ ಉತ್ತೇಜನ ಸಿಗಲಿದೆ. ಎರಡು ಟಿಎಂಸಿ ನೀರಿನಿಂದ ಸರಿ ಸುಮಾರು 50 ಹಳ್ಳಿಗಳಲ್ಲಿನ ಜನ ಜೀವನದ ಬದುಕಿನ ಕ್ರಮವೇ ಸಂಪೂರ್ಣ ಬದಲಾಗಲಿದೆ. ಆದರೆ ಇದು ಆಳುವ ಜನರ ತಲೆ ಒಳಗೆ ಹೋಗುತ್ತಿಲ್ಲ ಅಷ್ಟೆ.
- ಹುಳ್ಳಿ ಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.