ಬಳ್ಳಾರಿ

ನಾಳೆ ಸಂಕಲ್ಪ ದಿವಸ್

Published On :

ಬಳ್ಳಾರಿ: ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಅ. 31ರಂದು ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಾಷ್ಟ್ರೀಯ ಸಂಕಲ್ಪ ದಿವಸ್ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ಸಂಕಲ್ಪ ದಿನಾಚರಣೆ ಪ್ರಯುಕ್ತ ಅಂದು ಬೆಳಗ್ಗೆ 10 ಗಂಟೆಗೆ ನಗರದ ಮುನ್ಸಿಪಲ್ ಮೈದಾನದಿಂದ ರ್ಯಾಲಿಯನ್ನು ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಏರ್ಪಡಿಸಲಾಗಿದೆ. ಸಾರ್ವಜನಿಕರು, ಎಲ್ಲ ಸಂಘ, ಸಂಸ್ಥೆಗಳು, ಜಿಲ್ಲಾ ಮಟ್ಟದ ಕಚೇರಿಗಳ ಎಲ್ಲ ಕಚೇರಿಗಳ ಅಧಿಕಾರಿ, ಸಿಬ್ಬಂದಿ ವರ್ಗದವರು ರ್ಯಾಲಿ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ನಾಳೆ ಉದ್ಯೋಗ ಮೇಳ
ಬಳ್ಳಾರಿ: ಕೌಶಲ್ಯ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ವತಿಯಿಂದ ಅ. 31ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಪ್ರಮುಖವಾಗಿ ಕಾರ್ಶಕ್ ಬಯೋ ಪ್ಲಾನ್‌ಟೆಕ್, ನವಭಾರತ್ ಫರ್ಟಿಲೈಸರ್ಸ್, ವಾಸವಿ ಲ್ಯುಬ್ರಿಕೆಂಟ್ಸ್ ಪ್ರೈ.ಲಿ., ಎಸ್‌ವಿ ಮೀಡಿಯಾ ಉದ್ಯೋಗದಾತರು ಪಾಲ್ಗೊಳ್ಳಲಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಯಾವುದೇ ಪದವಿ, ಡಿಪ್ಲೋಮಾ ಇನ್ ಆಟೋಮೊಬೈಲ್ಸ್ ಪಾಸಾದ ವಿದ್ಯಾರ್ಥಿಗಳು ಭಾಗವಹಿಸಬಹುದು. ಆಸಕ್ತರು ತಮ್ಮ ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ಸ್ವವಿವರದೊಂದಿಗೆ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ-9036422052, 9844444958ನ್ನು ಸಂಪರ್ಕಿಸಬೇಕೆಂದು  ಜಿಲ್ಲಾ ಉದ್ಯೋಗಾಧಿಕಾರಿ ಪಿ.ಎಸ್. ಹಟ್ಟೆಪ್ಪ ತಿಳಿಸಿದ್ದಾರೆ.
ನ. 13 ಜಾಗೃತ ಸಭೆ
ಬಳ್ಳಾರಿ: ಜಿಲ್ಲಾಮಟ್ಟದ ಜಾಗೃತ ಮತ್ತು ಪರಿಶೀಲನಾ ಸಭೆ ನ. 13ರಂದು ಬೆಳಗ್ಗೆ 11 ಗಂಟೆಗೆ ಲೋಕಸಭಾ ಸದಸ್ಯೆ ಹಾಗೂ ಜಿಲ್ಲಾ ಜಾಗೃತ ಸಮಿತಿ ಅಧ್ಯಕ್ಷೆ ಜೆ. ಶಾಂತಾ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ಜಿಪಂ ಸಿಇಒ ಮಂಜುನಾಥ ನಾಯಕ್ ತಿಳಿಸಿದ್ದಾರೆ. ಜಿಪಂ ನಜೀರ್‌ಸಾಬ್ ಸಭಾಂಗಣದಲ್ಲಿ ಜರುಗಲಿದೆ. ಸಭೆಯಲ್ಲಿ ವಿವಿಧ ಕೇಂದ್ರ ಯೋಜನಾ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪ್ರತಿಯನ್ನು 2013ನೇ ಸಾಲಿನ 2ನೇ ತ್ರೈಮಾಸಿಕ (ಸೆಪ್ಟೆಂಬರ್ ಅಂತ್ಯದವರೆಗೆ) ಪರಿಶೀಲಿಸಲಾಗುವುದು. ಸಭೆಗೆ ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳು ಜುಲೈ 2013ರಿಂದ ಸೆ. 13ರ ಅಂತ್ಯದವರೆಗೆ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ವರದಿಗಳನ್ನು ನಿಗದಿತ ನಮೂನೆಯಲ್ಲಿ 5 ಲೀಗಲ್ ಪ್ರತಿಗಳಲ್ಲಿ ಘೋಷ್ವಾರೆಯೊಂದಿಗೆ ಜಿಪಂ ಕಚೇರಿಗೆ ಸಲ್ಲಿಸಬೇಕು. ಎಲ್ಲ ಅಧಿಕಾರಿಗಳು ಯಾವುದೇ ಸಿಬ್ಬಂದಿ ನಿಯೋಜಿಸದೆ ತಮ್ಮ ಇಲಾಖೆಯ ಕಾರ್ಯಕ್ರಮಗಳ ಆರ್ಥಿಕ ಹಾಗೂ ಭೌತಿಕ ವಿವರಗಳೊಂದಿಗೆ ಖುದ್ದಾಗಿ ಸಭೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.

ವಾಲ್ಮೀಕಿ ದೇವಸ್ಥಾನ ನಿರ್ಮಾಣಕ್ಕೆ ಆಗ್ರಹ
ಬಳ್ಳಾರಿ: ತಾಲೂಕಿನ ಬೇಡರ ಬೆಳಗಲ್ ಗ್ರಾಮದಲ್ಲಿ ವಾಲ್ಮೀಕಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತ ವೇದಿಕೆಯು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರಿಗೆ ಮನವಿಪತ್ರ ಸಲ್ಲಿಸಿತು.
ಇತ್ತೀಚೆಗೆ ಬಳ್ಳಾರಿಗೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ವೇದಿಕೆಯ ಪದಾಧಿಕಾರಿಗಳು, ಬೇಡರ ಬೆಳಗಲ್ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಗ್ರಾಮದಲ್ಲಿ ವಾಲ್ಮೀಕಿ ದೇವಸ್ಥಾನ ನಿರ್ಮಾಣ ಮಾಡಬೇಕು. ರಾಜನಹಳ್ಳಿನ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳ ಸೂಚನೆ ಮೇರೆಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಪಕ್ಕದಲ್ಲೇ ಇದ್ದ ತಹಸೀಲ್ದಾರ್‌ಗೆ, ಭಗವಾನ್ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಜಾಗದಲ್ಲಿಯೇ ದೇವಸ್ಥಾನ ನಿರ್ಮಿಸಿ ಕೊಡುವುದಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ಗಿರಿಮಲ್ಲಪ್ಪ, ಬಿ. ರಾಂಪ್ರಸಾದ್, ಜನಗ್, ಸಂಗನಕಲ್ ವಿಜಯುಕಮಾರ್, ಬಿ. ತಿಮ್ಮಪ್ಪ, ಬೆಳಗಲ್ ಶ್ರೀನಿವಾಸ ಮಿಂಚೇರಿ ರಾಮಾಂಜನಿ, ಹೊನ್ನಳ್ಳಿ ಶಿವಣ್ಣ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.