ಬಳ್ಳಾರಿ

ಬಳ್ಳಾರಿ ನೋಡುವ ದೃಷ್ಟಿಕೋನ ಬದಲಿಸಿ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 29
ಬಳ್ಳಾರಿಯನ್ನು ಕೇವಲ ಅಕ್ರಮ ಗಣಿಗಾರಿಕೆ ದೃಷ್ಟಿಕೋನದಿಂದ ನೋಡಬಾರದು. ಇಲ್ಲಿ ವಿಶ್ವವಿಖ್ಯಾತ ಹಂಪಿ ಸೇರಿದಂತೆ ಇತರ ಪ್ರವಾಸಿ ತಾಣಗಳಿವೆ ಎಂದು ಬಳ್ಳಾರಿ ಶಾಸಕ ಅನಿಲ್‌ಲಾಡ್ ತಿಳಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆ, ಪ್ಯೂಪಿಲ್ ಟ್ರೀ ಪಿಯು ಕಾಲೇಜ್ ಜಂಟಿಯಾಗಿ ಮಂಗಳವಾರ ಕಾಲೇಜ್ ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಪಿಯು ವಿದ್ಯಾರ್ಥಿಗಳ ಬಾಸ್ಕೆಟ್‌ಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಬಳ್ಳಾರಿ ಎಂದಾಕ್ಷಣ ಮಾಧ್ಯಮಗಳಲ್ಲಿ ಅಕ್ರಮ ಗಣಿಗಾರಿಕೆ ಎಂದು ಬಿಂಬಿಸಲಾಗುತ್ತಿದೆ. ಇಲ್ಲಿ ಅಕ್ರಮ ಗಣಿಗಾರಿಕೆ ಮಾತ್ರ ಇಲ್ಲ. ಹಂಪಿ, ವಿಜಯನಗರದ ಶ್ರೀಕೃಷ್ಣದೇವರಾಯ ಆಳ್ವಿಕೆ ಮಾಡಿದ ಪ್ರದೇಶವೂ ಇದೆ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಒಂದೇ ಕ್ರೀಡಾ ವಸತಿ ನಿಲಯವಿದ್ದು, ಮುಂದಿನ ದಿನಗಳಲ್ಲಿ 100 ಹಾಸಿಗೆಯುಳ್ಳ ಕ್ರೀಡಾ ವಸತಿ ನಿಲಯದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಹೆಸರು ಗಳಿಸಿ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಗಳನ್ನು ಹೊರ ಹಾಕಲು, ಕ್ರೀಡಾಕೂಟಗಳು ವೇದಿಕೆಯಾಗಿವೆ. ಇಂತಹ ವೇದಿಕೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ  ಹೆಸರುಗಳಿಸಿ ಎಂದು ಹೇಳಿದರು.
50 ತಂಡಗಳು ಭಾಗಿ: ಪ್ಯೂಪಿಲ್ ಟ್ರೀ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷ ಪ್ರಭುರಾಜ್ ಜಹಗೀರ್‌ದಾರ್ ಮಾತನಾಡಿದರು. ಡಿಡಿಪಿಐ ಅಬ್ದುಲ್ ರಷೀದ್ ಮಾತನಾಡಿದರು. ಕ್ರೀಡಾಕೂಟದಲ್ಲಿ ಕೊಪ್ಪಳ, ಯಾದಗಿರಿ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯಾದ್ಯಂತ 28 ಜಿಲ್ಲೆಗಳ ಪೈಕಿ ಬಾಲಕ, ಬಾಲಕಿಯರ ಒಂದೊಂದು ತಂಡಗಳಂತೆ 56 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಪಂದ್ಯಾವಳಿಗಳು ಅ. 30ರಂದು ಬೆಳಗ್ಗೆ 8ರಿಂದ ಆರಂಭಗೊಳ್ಳಲಿವೆ. ಬಾಲಕರ ಪಂದ್ಯಗಳು ನಗರದ ಬೆಳಗಲ್ ರಸ್ತೆಯಲ್ಲಿರುವ ನಂದಿ ಇಂಟರ್‌ನ್ಯಾಷನಲ್ ಪಿಯು ಕಾಲೇಜ್ ಮೈದಾನದಲ್ಲಿ ನಡೆದರೆ, ಸುಧಾ ವೃತ್ತದ ಬಳಿಯಿರುವ ನಂದಿ ಪ್ರೌಢಶಾಲಾ ಮೈದಾನದಲ್ಲಿ ಬಾಲಕಿಯರ ಪಂದ್ಯಾವಳಿಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಮುನ್ಸಿಪಾಲ್ ಕಾಲೇಜು ಪ್ರಾಚಾರ್ಯ ಕೆ. ನಾಗಭೂಷಣ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ. ಮಲ್ಲೇಶ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮೋಹನ್‌ರೆಡ್ಡಿ, ಪಿಯು ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರಸಾದರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಾಮಾಂಜಿನಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಯು. ಜಂಬಣ್ಣ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.