ಹಂಪಿ ಉತ್ಸವ: ಡಿಸಿ ಸ್ಥಳ ಪರಿಶೀಲನೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 29
ಜನವರಿಯಲ್ಲಿ ಹಂಪಿ ಉತ್ಸವ ಆಚರಿಸಲು ಉದ್ದೇಶಿಸಿರುವುದರಿಂದ ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಮಂಗಳವಾರ ಹಂಪಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕಾರಣಾಂತರಗಳಿಂದ ಎರಡು ವರ್ಷಗಳಿಂದ ಹಂಪಿ ಉತ್ಸವವನ್ನು ರದ್ದು ಮಾಡಲಾಗಿತ್ತು. ಈ ವರ್ಷ ಸರ್ಕಾರ ಹಂಪಿ ಉತ್ಸವ ಆಚರಿಸುವ ಕುರಿತು ಚಿಂತನೆ ನಡೆಸಿದ್ದರಿಂದ ಹಂಪಿ ಉತ್ಸವದ ಪೂರ್ವಭಾವಿಗೂ ಮುನ್ನ ಜಿಲ್ಲಾಧಿಕಾರಿ ಖುದ್ದು ಹಂಪಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಹಂಪಿಯಲ್ಲಿ ಉತ್ಸವ ಆಚರಿಸುತ್ತಿರುವುದರಿಂದ ಯಾವ ಯಾವ ಪ್ರದೇಶದಲ್ಲಿ ವೇದಿಕೆ ನಿರ್ಮಿಸಬಹುದು, ಉತ್ಸವ ನಡೆಯುವ ಸಂದರ್ಭದಲ್ಲಿ ಯಾವ ಯಾವ ಪ್ರದೇಶದಲ್ಲಿ ಯಾವ ವೇದಿಕೆಗಳನ್ನು ನಿರ್ಮಿಸಬೇಕು, ಎಷ್ಟು ವೇದಿಕೆಗಳನ್ನು ನಿರ್ಮಾಣ ಮಾಡಬಹುದು ಎನ್ನುವ ಕುರಿತಂತೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಹಂಪಿ ವಿರೂಪಾಕ್ಷೇಶ್ವರಸ್ವಾಮಿ ದೇವಸ್ಥಾನವನ್ನೂ ಪರಿಶೀಲನೆ ನಡೆಸಿದರು. ಬಳಿಕ ಬಸವಣ್ಣ ಮಂಟಪ, ಶ್ಯಾಸವಿಕಾಳು ಗಣೇಶ್ ಮತ್ತು ಅದರ ಎದುರುಗಡೆ ಇರುವ ಕೃಷ್ಣ ದೇವಸ್ಥಾನದ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಹಂಪಿ ಉತ್ಸವಕ್ಕೆ ಬರುವ ಪ್ರೇಕ್ಷಕರಿಗೆ ಹಾಗೂ ಕಲಾವಿದರಿಗೆ ಅನುಕೂಲವಾಗುವಂತಹ ಪ್ರದೇಶವನ್ನು ವ್ಯವಸ್ಥೆಗೊಳಿಸುವ ಉದ್ದೇಶ, ಒಂದು ವೇದಿಕೆಯಿಂದ ಇನ್ನೊಂದು ವೇದಿಕೆಗೆ ಅಂತರ ಎಷ್ಟಿರಬೇಕು ಎನ್ನುವಂತಹ ಕೆಲ ವಿಷಯಗಳ ಕುರಿತು ಸ್ಥಳೀಯ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ಮಾಹಿತಿ ಪಡೆದರು.
ಅನಂತರ ವಿಜಯ ವಿಠಲ ದೇವಸ್ಥಾನಕ್ಕೆ ತೆರಳಿದ ಡಿಸಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಈ ಪ್ರದೇಶದಲ್ಲಿ ಬ್ಯಾಟರಿ ಚಾಲಿತ ವಾಹನಗಳ ಚಾಲಕರ ಸಮಸ್ಯೆಗಳನ್ನು ಆಲಿಸಿದರು. ವಿಜಯವಿಠಲ ದೇವಸ್ಥಾನವನ್ನು ವೀಕ್ಷಿಸಲು ಮತ್ತು ತಳವಾರ ಘಟ್ಟದ ತೂಗು ಸೇತುವೆಯ ವರೆಗೂ ಬಸ್ಗಳು ಬರಲು ಅವಕಾಶ ಮಾಡಿಕೊಂಡುವುದರಿಂದ ಪ್ರವಾಸಿಗರು ಸುಲಭವಾಗಿ ವಿಜಯವಿಠಲ ದೇವಸ್ಥಾನ, ಸಪ್ತಸ್ವರ ಮಂಟಪ, ಕಲ್ಲಿನ ತೇರು, ಪುರಂದರ ದಾಸರ ಮಂಟಪ, ಕೋದಂಡರಾಮ ಮಂದಿರ, ಯಂತ್ರೋದ್ಧಾರಕ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ವಾಹನ ಚಾಲಕರು ಡಿಸಿಗೆ ತಿಳಿಸಿದರು.
ಕೆಎಸ್ಆರ್ಟಿಸಿ ಬಸ್ಗಳು ವಿಜಯ ವಿಠಲ ದೇವಸ್ಥಾನದವರೆಗೂ ಬಂದರೆ ಗೆಜ್ಜಲ ಮಂಟಪದಿಂದ ಪ್ರವಾಸಿಗರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳಲ್ಲಿ ತೆರಳಿ ವಿಜಯವಿಠಲ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳನ್ನು ವೀಕ್ಷಿಸಲು ಅನುಕೂಲವಾಗಲಿದೆ ಎಂದು ಸ್ಥಳೀಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್, ತಹಸೀಲ್ದಾರ್ ರಮೇಶ್ ಕೋನರೆಡ್ಡಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಪುರತಾತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

