ಇಟ್ಟಿಗೆ ಕೋಣೆಯಲ್ಲಿ ಡಿಪ್ಲೊಮಾ ಕಾಲೇಜ್
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 1
ಇಂದು ಎಲ್ಕೆಜಿ, ಯುಕೆಜಿ ಮಕ್ಕಳ ಶಾಲೆಗಳು ಎಷ್ಟೋ ಚೆನ್ನ. ಆದರೆ, ಇಲ್ಲೊಂದು ತಾಂತ್ರಿಕ ಶಿಕ್ಷಣ ನೀಡುವ ಡಿಪ್ಲೊಮಾ ಕಾಲೇಜು ಕಟ್ಟಡ ನೋಡಿದರೆ ಬೆರಗಾ ಗುತ್ತೀರಿ...
ಕಲ್ಯಾಣ ಮಂಟಪದ ಬಯಲು ಆಲಯದಲ್ಲಿ ಇಟ್ಟಿಗೆ ಗೋಡೆಗಳನ್ನಿಟ್ಟು ನಿರ್ಮಿಸಿದ ಹತ್ತಾರು ಅವ್ಯವಸ್ಥಿತ ಕೋಣೆಗಳಲ್ಲಿಯೇ ವಿದ್ಯಾರ್ಥಿಗಳು ಪಾಠ ಕೇಳಬೇಕಾದ ದುರ್ಗತಿ ಬಂದಿದೆ. ಕೋಟಿಗಟ್ಟಲೇ ಮೌಲ್ಯದ ಯಂತ್ರಗಳಂತೂ ಮೂಲೆಗಳಲ್ಲಿ ಧೂಳು, ತುಕ್ಕು ಹಿಡಿಯುತ್ತಿವೆ.
2009ರಲ್ಲಿ ಕೂಡ್ಲಿಗಿಯಂತಹ ಹಿಂದುಳಿದ ಪ್ರದೇಶಕ್ಕೆ ಇಲ್ಲಿಯ ಶಾಸಕ ಬಿ.ನಾಗೇಂದ್ರ ಮೊದಲ ಬಾರಿಗೆ ಸರ್ಕಾರಿ ಡಿಪ್ಲೊಮಾ ಕಾಲೇಜು ತರುವುದರಲ್ಲಿ ಶ್ರಮಿಸಿದ್ದರು. ಆದರೆ, ಇಂದು ಆ ಕಾಲೇಜಿನ ಅವ್ಯವಸ್ಥೆ ನೋಡಿದರೆ ಇದೇನು ಡಿಪ್ಲೊಮಾ ಕಾಲೇಜೋ ಅಥವಾ ಯಾವುದೋ ತಾತ್ಕಾಲಿಕ ತರಬೇತಿ ಕೇಂದ್ರವೋ ಎನ್ನುವ ರೀತಿಯಲ್ಲಿದೆ. ಈ ಕಾಲೇಜು ಒಳಗಡೆ ನೀವು ಎಲ್ಲಿ ಹೋದರೂ ಬರೀ ಕತ್ತಲೇ, ಗಾಳಿ, ಬೆಳಕು ಅಪರೂಪ, ಹಳೆಯ ಕಟ್ಟಡವಾಗಿದ್ದರಿಂದ ಬರೀ ಧೂಳು ತುಂಬಿದೆ.
ಇಲ್ಲಿಯ ಕೋಟಿಗಟ್ಟಲೇ ಮೌಲ್ಯದ ಕಂಪ್ಯೂಟರ್ಗಳು, ಯಂತ್ರಗಳು, ಉಪಯೋಗಕ್ಕೂ ಬಾರದ ಹಂತಕ್ಕೆ ಬರುತ್ತಿವೆ. ಸರಿಯಾಗಿ ಕುಳಿತು ಪಾಠ ಕೇಳಲು ಉತ್ತಮ ವಾತಾವರಣ ಇಲ್ಲ. ಕೂಡ್ಲಿಗಿಯ ಕಲ್ಯಾಣ ಮಂಟಪದಲ್ಲಿ 3 ವರ್ಷದಿಂದ ಈ ಕಾಲೇಜು ಇಲ್ಲಿಯೇ ನಡೆಯುತ್ತಿದೆ. 7-8 ಅಡಿ ಎತ್ತರದ ಸಿಮೆಂಟ್ ಇಟ್ಟಿಗೆ ಗೋಡೆಗಳಷ್ಟೇ ಕಟ್ಟಿದ್ದರಿಂದ ಒಂದು ಕೋಣೆಯಲ್ಲಿ ಪಾಠ ಮಾಡಿದರೆ ಪಕ್ಕದ ಮತ್ತೊಂದು ತರಗತಿಯಲ್ಲಿ ಮಾರ್ದನಿಸುತ್ತದೆ.
ಸಿಬ್ಬಂದಿ ಇಲ್ಲ: ಈ ಕಾಲೇಜಿನಲ್ಲಿ 32 ಬೋಧಕರ ಬೇಡಿಕೆ ಇದ್ದು, 20 ಬೋಧಕರು ಇದ್ದಾರೆ. ಬೋಧಕೇತರ ಸಿಬ್ಬಂದಿ 54 ಇರಬೇಕು, ಇಬ್ಬರೇ ಇದ್ದಾರೆ. ಕಾಲೇಜಿನಲ್ಲಿ 450 ವಿದ್ಯಾರ್ಥಿಗಳಿದ್ದಾರೆ. ಈ ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ವಿಭಾಗಗಳಿದ್ದು, ಈ ಭಾಗದಲ್ಲಿಯ ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕಲ್ ಎನ್ನುವ ಮತ್ತೊಂದು ವಿಭಾಗ ಈ ಕಾಲೇಜಿನಲ್ಲಿ ತೆರೆದರೆ ಹೆಚ್ಚು ಉಪಯೋಗವಾಗುತ್ತದೆ. ಇಷ್ಟೆಲ್ಲಾ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಇಲ್ಲಿಯ ವಿದ್ಯಾರ್ಥಿಗಳು ಗುಡಿಸಲಿನಲ್ಲಿ ಅರಳುವ ಗುಲಾಬಿಗಳಂತೆ ಕಳೆದ ಸೆಮಿಸ್ಟರ್ ಪರೀಕ್ಷೆಯಲ್ಲಿ 80 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, 180 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯ ನೀಲಕಂಠಾಚಾರಿ ಹೇಳುತ್ತಾರೆ. ಇಲ್ಲಿ ಈಗ ಯುವ ಉಪನ್ಯಾಸಕರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುವ್ಯವಸ್ಥಿತ ಕಟ್ಟಡ ಸಿಕ್ಕರೆ ಈ ಕಾಲೇಜಿನ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಐಟಿಐ ಕಾಲೇಜಿಗೆ ಸ್ಥಳಾಂತರಿಸುವ ಯೋಜನೆ ಇದೆ
ಕೂಡ್ಲಿಗಿಗೆ ಡಿಪ್ಲೊಮಾ ಕಾಲೇಜು ತಂದ ಹೆಮ್ಮೆ ನನಗಿದೆ. ಕೂಡ್ಲಿಗಿಯಂತಹ ಹಿಂದುಳಿದ ಭಾಗದಲ್ಲಿ ತಾಂತ್ರಿಕ ಶಿಕ್ಷಣದ ಕೊರತೆ ಇತ್ತು ಅದನ್ನು ನೀಗಿಸಿದ್ದೇನೆ. ಈಗ ಕಟ್ಟಡ ನಿರ್ಮಿಸಲೆಂದೇ 2010ರಲ್ಲಿಯೇ ಕೂಡ್ಲಿಗಿ ಸಮೀಪದ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಹೊಂದಿಕೊಂಡಂತೆ ಇರುವ ಕರೇಕಲ್ಲು ಗುಡ್ಡದ ಸಮೀಪ ಅಮ್ಮನಕೆರೆ ಕಂದಾಯ ಗ್ರಾಮಕ್ಕೆ ಸೇರಿದ 9.88 ಎಕರೆ ಜಮೀನನ್ನು ಸರ್ಕಾರದಿಂದ ಖರೀದಿ ಮಾಡಿದೆ. ಅಂದಾಜು ರು. 3 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಹೌಸಿಂಗ್ ಕಾರ್ಪೊರೇಷನ್ಗೆ ವಹಿಸಿದ್ದು ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 2 ವರ್ಷಗಳಲ್ಲಿ ಸ್ವಂತ ಸುವ್ಯವಸ್ಥಿತ ಕಟ್ಟಡವಾಗುವುದರಲ್ಲಿ ಸಂದೇಹವಿಲ್ಲ. ಅಲ್ಲಿಯವರೆಗೂ ಈಗಾಗಲೇ ಸ್ವಂತ ಕಟ್ಟಡ ಹೊಂದಿರುವ ಐಟಿಐ ಕಾಲೇಜಿಗೆ ಸ್ಥಳಾಂತರಿಸುವ ಯೋಜನೆ ಇದೆ. ಈ ಬಗ್ಗೆ ಇಲಾಖೆಗಳ ನಿಯಮಗಳು ಹೊಂದಾಣಿಕೆಯಾದರೆ ಸದ್ಯಕ್ಕೆ ಅಲ್ಲಿಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತೇನೆ.
-ಬಿ.ನಾಗೇಂದ್ರ, ಶಾಸಕರು, ಕೂಡ್ಲಿಗಿ
ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಇಲ್ಲಿಯ ಗುಡಿಸಲಿನಲ್ಲಿ ಅರಳುವ ಗುಲಾಬಿಗಳಂತೆ ಕಳೆದ ಸೆಮಿಸ್ಟರ್ ಪರೀಕ್ಷೆಯಲ್ಲಿ 80 ವಿದ್ಯಾರ್ಥಿಗಳು ಡಿಸ್ಟಿಂಗ್ಷನ್, 180 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
- ನೀಲಕಂಠಾಚಾರಿ, ಡಿಪ್ಲೊಮಾ ಕಾಲೇಜಿನ ಪ್ರಾಚಾರ್ಯರು
-ಭೀಮಣ್ಣ ಗಜಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

