ಇಂದು ಬಳ್ಳಾರಿ ತಾಲೂಕು ಮಟ್ಟದ ಕ್ರೀಡಾಕೂಟ
ಬಳ್ಳಾರಿ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಹಿರಾಳ ಉಕ್ಕಡಂನ ಶ್ರೀ ಉಜ್ಜಿನಿ ಜಗದ್ಗುರು ಸಿದ್ಧೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ಸೆ. 6ರಂದು ಬೆಳಗ್ಗೆ 9.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ 15ನೇ ತಾಲೂಕು ಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ.
ಕ್ರೀಡಾಕೂಟವನ್ನು ಶಾಸಕ ಅನಿಲ್ ಲಾಡ್ ಉದ್ಘಾಟಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳ್ಳಾರಿ ಗ್ರಾಮೀಣ ಶಾಸಕ ಬಿ. ಶ್ರೀರಾಮುಲು ವಂದನೆ ಸ್ವೀಕರಿಸಲಿದ್ದಾರೆ. ವಿಮ್ಸ್ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ರೆಡ್ಡಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಅಬ್ದುಲ್ ರಷೀದ್ ತಂಡಗಳ ಪರಿಚಯ ಮಾಡಿಕೊಡಲಿದ್ದಾರೆ. ಕ್ರೀಡಾಕೂಟದ ಸಮಾರೋಪ ಸಮಾರಂಭ ಸೆ. 7ರ ಮಧ್ಯಾಹ್ನ 12.30ಕ್ಕೆ ಏರ್ಪಡಿಸಿದ್ದು, ಅಬ್ದುಲ್ ರಷೀದ್ ಅಧ್ಯಕ್ಷತೆ ವಹಿಸುವರು. ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಬಿ. ತಿಮ್ಮಾರೆಡ್ಡಿ ಬಹುಮಾನ ವಿತರಿಸಲಿದ್ದಾರೆ.
371 ಅನುಷ್ಠಾನಕ್ಕೆ ರಾಷ್ಟ್ರಪತಿ ಅಂಕಿತ ಹಾಕಲಿ
ಬಳ್ಳಾರಿ: ಹೈ-ಕ ಅಭಿವೃದ್ಧಿಗಾಗಿ ಅಂಗೀಕರಿಸಿರುವ ಸಂವಿಧಾನದ 371(ಜೆ) ಕಲಂ ತಿದ್ದುಪಡಿಗೆ ರಾಷ್ಟ್ರಪತಿ ಅಂಕಿತ ಹಾಕುವಂತೆ ಬಳ್ಳಾರಿಯ ಆಶ್ರಯ ಹೆಲ್ತ್ ಆ್ಯಂಡ್ ಸೋಷಿಯಲ್ ಸರ್ವಿಸ್ ಟ್ರಸ್ಟ್ ಮನವಿ ಮಾಡಿದೆ.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿಪತ್ರ ನೀಡಿದ್ದಾರೆ. ಹೈ-ಕದ ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು, ಗುಲ್ಬರ್ಗಾ, ಬೀದರ್ ಜಿಲ್ಲೆಗಳ ಅಭಿವೃದ್ಧಿ, ವಿದ್ಯಾವಂತರಿಗೆ ಉನ್ನತ ಶಿಕ್ಷಣ ಪಡೆಯಲು, ನೇಮಕಾತಿಯಲ್ಲಿ ನ್ಯಾಯಸಮ್ಮತ ಮೀಸಲಾತಿ ನೀಡಲು ಸಂಸತ್ ಮತ್ತು ರಾಜ್ಯ ಸರ್ಕಾರ ವಿಶೇಷ ಮಸೂದೆ ಮಂಡಿಸಿ, ಅಂಗೀಕರಿಸಿ, ರಾಷ್ಟ್ರಪತಿಗಳ ಅನುಮೋದನೆಗೆ ಕಳಿಸಿವೆ. ರಾಷ್ಟ್ರಪತಿ ಶೀಘ್ರ ಅಂಕಿತ ಹಾಕಬೇಕೆಂದು ಆಶ್ರಯ ಹೆಲ್ತ್ ಆ್ಯಂಡ್ ಸೋಷಿಯಲ್ ಸರ್ವಿಸ್ ಟ್ರಸ್ಟ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಇಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ: ಬಳ್ಳಾರಿ 33/11 ಕೆ.ವಿ. ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ವಿಠಲಾಪುರ, ಮೆಟ್ರಿಕಿ, ರಾಜಾಪುರ, ಅಂತಾಪುರ ಸುತ್ತಲಿನ ಹಳ್ಳಿಗಳಿಗೆ ಸೆ. 6ರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ವಿದ್ಯುತ್ ಕಡಿತವಾಗಲಿದ್ದು, ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಬೇಕೆಂದು ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ವಿ.ವೈ. ದೇವಿರೆಡ್ಡಿ ಕೋರಿದ್ದಾರೆ.
ಅತ್ಯಾಚಾರ ಆರೋಪ: ದೂರು ದಾಖಲು
ಬಳ್ಳಾರಿ: ಇಬ್ಬರು ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವಳು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದುರ್ಗೇಶಮ್ಮ (ಹೆಸರು ಬದಲಿಸಲಾಗಿದೆ) ಎಂಬಾಕೆ ಆ. 18ರಂದು ಬೆಳಗ್ಗೆ ಬಹಿರ್ದೆಸೆಗೆ ಹೋದಾಗ, ಊರಿನ ಹೊರಗೆ ಅವಳ ತವರು ಮನೆಯ ಕುರುಬರ ಮಹೇಶ್ ಎನ್ನುವವನು ಬಂದು, ನಿಮ್ಮ ತಂದೆಗೆ ಅಪಘಾತವಾಗಿದೆ ಎಂದು ಹೇಳಿ, ಬೈಕ್ನಲ್ಲಿ ಕೂಡಿಸಿಕೊಂಡು ಹೋಗಿದ್ದಾನೆ. ಇನ್ನು ಊರು ದಾಟಿದ ಮೇಲೆ ಮಹಿಳೆಯ ತವರು ಗ್ರಾಮದವನೇ ಆದ ಮಲ್ಲಿಕಾರ್ಜುನ ಎಂಬಾತ ನಿಂತಿದ್ದು, ಅವರಿಬ್ಬರೂ ಆಕೆಯನ್ನು ಬೈಕ್ ಮಧ್ಯದಲ್ಲಿ ಕೂಡಿಸಿಕೊಂಡು ಮಾರ್ಗದ ಅಲ್ಲೀಪುರದ ಕಾಲುವೆ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇಬ್ಬರು ಮಹಿಳೆಯ ಸೀರೆಯನ್ನು ಎಳೆದಾಡಿ, ತಾಳಿ, ಸೀರೆಯನ್ನು ಹರಿದು ನಿನ್ನನ್ನು ಸಾಯಿಸಿ ಕಾಲುವೆಗೆ ಹಾಕುತ್ತೇನೆಂದು ಬೆದರಿಸಿದ್ದಾರೆ. ಕೈಗಳಿಂದ ಮೈಮೇಲೆ ಹೊಡೆದು ಆಕೆಯು ಪ್ರಜ್ಞೆ ತಪ್ಪಿದಾಗ ಇಬ್ಬರೂ ಬಲಾತ್ಕಾರವಾಗಿ ಅತ್ಯಾಚಾರ ಮಾಡಿರುತ್ತಾರೆ. ಪುನಃ ಆಕೆಯನ್ನು ಹೆದರಿಸಿದ ಕುರುಬರ ಮಹೇಶ ಅಡವಿಯೊಳಗೆ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ನಂತರ ಗಾಡಿಯಲ್ಲಿ ಮರಿಯಮ್ಮನಹಳ್ಳಿಗೆ ಕರೆದುಕೊಂಡು ಹೋಗಿ, ಗಾಡಿಯಿಂದ ಇಳಿಸಿ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಗಂಡ, ತಂದೆ, ತಮ್ಮಂದಿರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದುರ್ಗೇಶಮ್ಮ ದೂರು ನೀಡಿದ್ದಾಳೆ. ಮಹೇಶ್, ಮಲ್ಲಿಕಾರ್ಜುನ ಹಾಗೂ ಪ್ರಚೋದನೆ ನೀಡಿದ ಕಾಳಮ್ಮನ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಜಿಂದಾಲ್: ಮನೆ ಕಳ್ಳತನ
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ನ ಜಿಂದಾಲ್ನಲ್ಲಿರುವ ವಿದ್ಯಾನಗರದಲ್ಲಿ ಮನೆಯೊಂದರ ಬೀಗ ಮುರಿದು ಬಂಗಾರದ ಆಭರಣ ಮತ್ತು ನಗದು ದೋಚಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು ಮನೆಯ ಬೀಗ ಮುರಿದು ಒಳಹೊಕ್ಕು, ಕೋಣೆಯಲ್ಲಿದ್ದ ಬೀರುವಿನ ಬಾಗಿಲು ಬಾಗಿಸಿ, ಲಾಕರ್ ತೆಗೆದು ಅದರಲ್ಲಿಟ್ಟಿದ್ದ ಸುಮಾರು ಅಂದಾಜು ಬೆಲೆ ರು. 7 ಲಕ್ಷ ಬೆಲೆ ಬಾಳುವ 35 ತೊಲೆ ಬಂಗಾರದ ಆಭರಣಗಳು ಮತ್ತು ರು. 25 ಸಾವಿರ ನಗದು ಕಳವು ಮಾಡಿದ್ದಾರೆ. ಕಳವು ಮಾಡಿದ ಮನೆಯ ಹತ್ತಿರದ ಇನ್ನೊಂದು ಮನೆಯ ಬೀಗ ಮುರಿದು ಅಲ್ಲಿ ಸಹ ಕಳವು ಮಾಡಲಾಗಿದೆ. ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್: 7 ಬಂಧನ
ಬಳ್ಳಾರಿ: ನಗರದ ಮೋತಿ ವೃತ್ತದ ದಿವಾಕರ್ ಕಾಂಪ್ಲೆಕ್ಸ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಇಲ್ಲಿನ ಬ್ರೂಸ್ಪೇಟೆ ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿ, 7 ಆರೋಪಿಗಳನ್ನು ಬಂಧಿಸಿ, ಅವರಿಂದ ನಗದು ಹಣ, ಬೈಕ್ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ಮೋತಿ ವೃತ್ತದ ದಿವಾಕರ್ ಕಾಂಪ್ಲೆಕ್ಸ್ ಹಿಂಭಾಗ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ಠಾಣೆಯ ಸಿಬ್ಬಂದಿ ಹಾಗೂ ಪಿಐ, ಡಿಸಿಐಬಿ ಪೊಲೀಸರು ದಾಳಿ ನಡೆಸಿ, 7 ಜನರನ್ನು ಬಂಧಿಸಿ, ಅವರಿಂದ ರು. 47,070 ನಗದು, ಒಂದು ಯಮಹಾ ಆರ್.ಎಕ್ಸ್. ಮೋಟಾರ್ ಸೈಕಲ್, ಟಿವಿಎಸ್ ಎಕ್ಸೆಲ್ ಸೂಪರ್ ಮೊಪೆಡ್, 8 ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ. ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು ಅಡ್ಡೆ ಮೇಲೆ ದಾಳಿ
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ಪಟ್ಟಣ ಠಾಣೆ ಸರಹದ್ದಿನ ಗಾಂಧಿನಗರದಲ್ಲಿ ಮಟ್ಕಾ ಜೂಜಾಟದ ಮೇಲೆ ಪೊಲೀಸರು ದಾಳಿ ನಡೆಸಿ, ನಗದು, ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರ ಸಂಜೆ ಪಿಐ ಹಾಗೂ ಪಿಎಸ್ಐ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಓಬಳೇಶ, ಇತರ ಮೂವರನ್ನು ಬಂಧಿಸಿ, ಅವರಿಂದ ರು. 52,290 ನಗದು, 4 ಮೊಬೈಲ್ಗಳು, 1 ಕ್ಯಾಲ್ಕುಲೇಟರ್, ಇತರ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

