ಶಿಕ್ಷಣದ ಜತೆ ಬದುಕುವ ದಾರಿ ತೋರಿ
ಕೂಡ್ಲಿಗಿ: ಶಿಕ್ಷಕರಿಗೆ ಗುರುವಿನ ಸ್ಥಾನ ಸಿಗಬೇಕಾದರೆ ಮಕ್ಕಳಿಗೆ ಬರೀ ಜ್ಞಾನಾರ್ಜನೆ ನೀಡಿದರೆ ಸಾಲದು, ಬದುಕುವ ದಾರಿ, ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು ಎಂದು ಬಾಗಲಕೋಟೆಯ ಜಾನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣವರ್ ತಿಳಿಸಿದರು.
ಅವರು ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿ, ಶಾಲೆಗಳು ಶಿಕ್ಷಣ, ಬೋಧನೆಗಷ್ಟೇ ಸೀಮಿತವಾಗದೆ, ದಾರ್ಶನಿಕರ, ಹೋರಾಟಗಾರರ, ಇತಿಹಾಸ ಪುರುಷರ ಆದರ್ಶ ಚಿಂತನೆಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕಿದೆ. ವಿದ್ಯಾರ್ಥಿಗಳು ಗುರುವಿಗೆ ವಿಧೇಯರಾಗಿ ಶಿಕ್ಷಣಾಭ್ಯಾಸ ಮಾಡಿದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಬಿಇಒ ಎಂ.ಆರ್. ಮಂಜುನಾಥ ಮಾತನಾಡಿ, ತಾಲೂಕು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದೆ. ಶಾಸಕ ನಾಗೇಂದ್ರ ಪ್ರತಿವರ್ಷ ಈ ಆಚರಣೆಯನ್ನು ಅದ್ಧೂರಿಯಾಗಿ ಆಯೋಜಿಸುತ್ತಿರುವುದು ಅವರ ಗುರುಭಕ್ತಿಗೆ ಸಾಕ್ಷಿಯಾಗಿದೆ ಎಂದರು.
ತಾಪಂ ಅಧ್ಯಕ್ಷೆ ಮಂಗಳಮ್ಮ ಚಿನ್ನಾಪ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯ ಪಿ. ಚನ್ನಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಎಚ್. ಮಹೇಶ್, ಡಾ. ವೆಂಕಟಗಿರಿ ದಳವಾಯಿ, ಬಿಆರ್ಸಿ ಸಮನ್ವಯಾಧಿಕಾರಿ ಮೈಲೇಶ್ ಬೇವೂರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ತಾಲೂಕು ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷ ಪಿ. ನಾಗೇಶ್, ತಾಪಂ ಇಒ ಹಜರತ್ಷಾ, ಪಪಂ ಸದಸ್ಯ ಎಸ್. ದುರುಗೇಶ್, ತಾಪಂ ಸದಸ್ಯ ಬಸವರಾಜ, ಬೆಣ್ಣೆ ಕೊಟ್ರೇಶ್, ಪ್ರೌಢಶಾಲೆ ಮುಖ್ಯಗುರುಗಳ ಸಂಘದ ಅಧ್ಯಕ್ಷ ಪೂಜಾರಹಳ್ಳಿ ಕೆ. ಬಸಯ್ಯ, ಕಾರ್ಯದರ್ಶಿ ಬಿ. ಪಂಪಾಪತಿ ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕರನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರ ಸಂಘದ ಅಧ್ಯಕ್ಷ ಯು. ನಾಗೇಶ್ ಸ್ವಾಗತಿಸಿದರು. ಶಿಕ್ಷಕ ಟಿ. ರವಿ ನಿರೂಪಿಸಿದರು. ಜಿ.ಎಂ. ಪ್ರದೀಪ್ಕುಮಾರ್ ವಂದಿಸಿದರು.
ಶಿಕ್ಷಕರಿಗೆ ಅಪಮಾನ...
ತಾಲೂಕಿನ ಹಾರಕಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯಗುರು ಬಿ. ರಾಮಪ್ಪ ಅವರನ್ನು ಸನ್ಮಾನಿಸಲು ತಾಲೂಕು ಶಿಕ್ಷಣ ಇಲಾಖೆ ಅಧಿಕಾರಿಗಳು ಆಯ್ಕೆ ಮಾಡಿಕೊಂಡಿದ್ದರೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆ ಶಿಕ್ಷಕನನ್ನು ವೇದಿಕೆಗೆ ಕರೆದು ಸನ್ಮಾನ ಮಾಡದೇ ಅವಮಾನ ಮಾಡಿದ ಪ್ರಸಂಗ ನಡೆಯಿತು. ಇದರಿಂದಾಗಿ ಅವಮಾನಿತರಾದ ಆ ಶಿಕ್ಷಕರು ತೀವ್ರ ಬೇಸರ ವ್ಯಕ್ತಪಡಿಸಿದರು. ಅವರ ಸನ್ಮಾನ ನೋಡಲು ಬಂದ ಸಹಪಾಠಿ ಶಿಕ್ಷಕರು ಸಹ ಹತಾಶೆಯಿಂದಲೇ ಮನೆ ಕಡೆಗೆ ಹೋಗುವಂತಾಯಿತು. ಇಲಾಖೆ ಆಯ್ಕೆ ಮಾಡಿದ ಶಿಕ್ಷಕರಿಗೆ ಸನ್ಮಾನ ಮಾಡಿದರೂ ಹಾರಕಬಾವಿ ಶಾಲೆಯ ಬಡ್ತಿ ಮುಖ್ಯಗುರು ಬಿ. ರಾಮಪ್ಪ ಅವರನ್ನು ಮಾತ್ರ ಸನ್ಮಾನಕ್ಕೆ ಕರೆಯಲಿಲ್ಲ. ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ್ದರೂ ಸನ್ಮಾನ ಸಮಾರಂಭದಲ್ಲಿ ವೇದಿಕೆಗೆ ಕರೆಯದೇ ಅವಮಾನಿಸಿದರೆ ಹೇಗೆ? ಆಯೋಜಕರು ನನಗೆ ದೂರವಾಣಿ ಮೂಲಕ ಪ್ರಶಸ್ತಿಗೆ ಆಯ್ಕೆಯಾಗಿದ್ದನ್ನು ಮೊದಲೆ ತಿಳಿಸಿ ತಪ್ಪದೇ ಬನ್ನಿ ಎಂದಿದ್ದರು. ಅದಕ್ಕೆ ನಾನು ಬಂದಿದ್ದೆ. ಆಯ್ಕೆಯಾದ ಬಗ್ಗೆ ಪತ್ರಿಕೆಗಳಲ್ಲೂ ನನ್ನ ಹೆಸರು ಪ್ರಕಟವಾಗಿದೆ. ಆದರೆ ಸಮಾರಂಭದಲ್ಲಿ ನನ್ನನ್ನು ವೇದಿಕೆಗೆ ಕರೆಯದಿರುವುದು ನನಗೆ ತೀವ್ರ ನೋವು ತರಿಸಿದೆ. ನಾನು ಎಂದೂ ಪ್ರಶಸ್ತಿಯನ್ನು ಅರಸಿ ಹೋದವನಲ್ಲ ಆದರೆ ಅಧಿಕಾರಿಗಳು, ಆಯೋಜಕರು ನನ್ನನ್ನು ಕಡೆಗಣಿಸಿದ್ದು ಏಕೆ ಎಂದು ಗೊತ್ತಾಗುತ್ತಿಲ್ಲ ಎಂದು ಶಿಕ್ಷಕ ರಾಮಪ್ಪ ಬೇಸರ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

