ಬಳ್ಳಾರಿ

ಹೊಸ ಸೇತುವೆಗಳ ನಿರ್ಮಾಣಕ್ಕೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 12
ನಗರದಲ್ಲಿ ಹಾದು ಹೋಗಿರುವ ಎಚ್‌ಎಲ್ ಕಾಲುವೆ ಸೇತುವೆಗಳನ್ನು ಹೊಸದಾಗಿ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರವೇ ತಾಲೂಕಾಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ನಗರದಲ್ಲಿ ನಾಲ್ಕು ಸೇತುವೆಗಳ ಮೇಲೆ ಭಾರಿ ಪ್ರಮಾಣದ ಸರಕು ಲಾರಿಗಳು ಸೇರಿದಂತೆ ಇತರೆ ದೊಡ್ಡ ದೊಡ್ಡ ಪ್ರಮಾಣದ ಲಾರಿಗಳು ಸಂಚಾರ ಮಾಡುತ್ತಿರುವುದರಿಂದ ಈಗಾಗಲೇ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿವೆ. ಇತ್ತೀಚಿಗೆ ಕುರೇಕುಪ್ಪ ಗ್ರಾಮದಲ್ಲಿ ನಡೆದ ಘಟನೆಯಂತೆ ಹೊಸಪೇಟೆ ನಗರದಲ್ಲಿ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಶೀಘ್ರದಲ್ಲೇ ಸೇತುವೆಗಳನ್ನು ನವ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆ ಎಚ್ಚರಿಕೆ: ಸೇತುವೆ ಮೇಲೆ ಬಸ್ ಸೇರಿದಂತೆ ಇತರೆ ವಾಹನಗಳು ಸಂಚಾರ ಮಾಡುವಾಗ ಕುಸಿದರೆ ದೊಡ್ಡ ಪ್ರಮಾಣದ ಅನಾಹುತಗಳು ನಡೆಯುವ ಸಾಧ್ಯತೆ ಇದೆ.
ಅಧಿಕಾರಿಗಳು ಯಾವುದೇ ಕಾರಣಕ್ಕೂ ಸೇತುವೆ ನಿರ್ಮಾಣಕ್ಕೆ ಮೀನಮೇಷ ಎಣಿಸದೆ ತಕ್ಷಣ ಹೊಸದಾಗಿ ಸೇತುವೆಗಳನ್ನು ನಿರ್ಮಿಸಲು ಮುಂದಾಗಬೇಕು. ಸೇತುವೆ ನಿರ್ಮಿಸುವಲ್ಲಿ ವಿಳಂಬವಾದರೆ ಲೋಕೋಪಯೋಗಿ ಇಲಾಖೆಯ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಎಚ್. ಶ್ರೀನಿವಾಸ್, ನಗರ ಘಟಕದ ಅಧ್ಯಕ್ಷ ಜೆ.ಎಸ್. ಸಲೀಂ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಎಚ್.ಎಸ್. ಹೇಮಾವತಿ, ನಗರ ಘಟಕದ ಅಧ್ಯಕ್ಷೆ ಆರ್. ಲತಾ, ಪ್ರಧಾನ ಕಾರ್ಯದರ್ಶಿ ಸುಮಾ, ಶೈಲಜಾ, ಶಕುಂತಲಾ, ಲಕ್ಷ್ಮೀದೇವಿ, ಮುಖಂಡರಾದ ಬೆಳಗೋಡ ರಾಜ್, ಎ. ತಿಪ್ಪೇಸ್ವಾಮಿ, ರಾಮಾಂಜನಿ, ಆಂಜನೇಯ, ಅಮರ್, ಕುಮಾರ್, ಅಂಬರೀಷಪ್ಪ, ಶಿವು, ಮೌಲಾಸಾಬ್, ಬಾಷಾ, ಬಲದೇವ, ವೀಣಾ, ಅನುರಾಧಾ, ಕೊಟ್ರಮ್ಮ, ಉಮೇಶ್, ಬಾಲೇಸಾಬ್, ಮಹಮ್ಮದ್ ಗೌಸ್, ಯಾಸಿನ್ ಖಾನ್, ಗಂಗಾಧರ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
--
ವಿವಾಹಿತೆ ಕಾಣೆ: ದೂರು
ಬಳ್ಳಾರಿ: ನಗರದ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ವಿವಾಹಿತ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ನಗರದ ಶಾಂತಮ್ಮ (24) ಎಂಬಾಕೆ ಜುಲೈ 30ರಂದು ಕಾಣೆಯಾಗಿದ್ದಾಳೆ ಎಂದು ಈಕೆಯ ಪತಿ ಠಾಣೆಗೆ ದೂರು ನೀಡಿದ್ದಾರೆ. 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋದಿ ಮೈಬಣ್ಣ, ಹಸಿರು ಬಣ್ಣದ ಕುಪ್ಪುಸ ಮತ್ತು ಹಸಿರು ಬಣ್ಣದ ಪಾಲಿಸ್ಟರ್ ಸೀರೆ ಧರಿಸಿದ್ದು, ಕನ್ನಡ, ತೆಲುಗು, ಹಿಂದಿ ಭಾಷೆಗಳನ್ನು ಬಲ್ಲವಳಾಗಿದ್ದಾಳೆ. ಈ ಬಗ್ಗೆ ಮಾಹಿತಿ ತಿಳಿದವರು ಕೂಡಲೇ ದೂ.ಸಂ.-08392-258400, 258837, 272322, 272022, 250033ನ್ನು ಅಥವಾ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಠಾಣೆ ಇನ್‌ಸ್ಪೆಕ್ಟರ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.