ಹಕ್ಕು ಚಲಾಯಿಸುವಲ್ಲಿ ಶಾಸಕ ಲಾಡ್ ವಿಫಲ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 13
ಬಳ್ಳಾರಿ ಶಾಸಕ ಅನಿಲ್ ಲಾಡ್ ಅವರು ತಮ್ಮ ಹಕ್ಕು ಚಲಾಯಿಸುವಲ್ಲಿ ವಿಫಲವಾಗಿದ್ದಾರೆ, ಬೇರೆಯವರು ಅವರಿಗೆ ಅಡ್ಡಿಯಾಗುತ್ತಾರೆ ಎಂದು ಹೇಳುವುದು ಸರಿಯಲ್ಲ ಎಂದು ಮಾಜಿ ಸಚಿವ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ತಮ್ಮ ಹಕ್ಕನ್ನು ಚಲಾಯಿಸಬೇಕು. ಅದನ್ನು ಬಿಟ್ಟು ತಮಗೆ ಎಲ್ಲರೂ ಅಡ್ಡಿ ಬರುತ್ತಾರೆ ಎನ್ನುವುದು ತಪ್ಪಾಗುತ್ತದೆ. ಅನಿಲ್ ಲಾಡ್ ಅವರು ತಮ್ಮ ಶಾಸಕತ್ವ ಜವಾಬ್ದಾರಿ ಹಾಗೂ ಹಕ್ಕನ್ನು ಚಲಾಯಿಸುವಲ್ಲಿ ವಿಫಲರಾಗುತ್ತಿದ್ದಾರೆ ಎಂಬುದು ಅವರ ಮಾತಿನಿಂದ ಗೊತ್ತಾಗುತ್ತದೆ.
ಮುಖ್ಯಮಂತ್ರಿಗಳು ಆಯಾ ಕ್ಷೇತ್ರದ ಶಾಸಕರನ್ನು ಕ್ಷೇತ್ರದ ಹೊಣೆಗಾರರನ್ನಾಗಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮಾಜಿ ಶಾಸಕರು, ಹಿರಿಯ ಮುಖಂಡರು ಎಲ್ಲ ಅಧಿಕಾರ ಚಲಾಯಿಸುತ್ತಾರೆ ಎಂಬುದು ತಪ್ಪಾಗುತ್ತದೆ ಎಂದು ಅನಿಲ್ ಲಾಡ್ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಲಾಡ್ ಪರ ಚುನಾವಣೆ ಸಂದರ್ಭದಲ್ಲಿ ತಾವು ಪ್ರಚಾರಕ್ಕೆ ಹೋಗಿದ್ದೇವೆ, ಅಗತ್ಯ ಬಿದ್ದರೆ ಕ್ಷೇತ್ರದ ಹಿರಿಯ ಮುಖಂಡ, ಮಾಜಿ ಸಚಿವನಾಗಿ ಸಲಹೆ ನೀಡುತ್ತೇನೆ. ರಾಜಕೀಯದಲ್ಲಿ ಎರಡು ವಿರೋಧಿತನವಿರುತ್ತದೆ, ವಿರೋಧ ಪಕ್ಷವೊಂದಿದ್ದರೆ, ಆಡಳಿತ ಪಕ್ಷದಲ್ಲಿ ವಿರೋಧಗಳು ಇರುತ್ತವೆ ಎಂದರು.
ಮೋದಿಯಿಂದ ತೊಂದರೆ ಇಲ್ಲ
ಬಿಜೆಪಿಯಲ್ಲಿ ರಾಜಕೀಯ ಗೊಂದಲ ಆರಂಭವಾಗಿರುವುದರಿಂದ ಆರ್ಎಸ್ಎಸ್ ಹಾಗೂ ಬಿಜೆಪಿ ಮುಖಂಡರು ಈ ಗೊಂದಲಗಳಿಂದ ಪಕ್ಷವನ್ನು ದೂರ ಮಾಡಲು ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ನರೇಂದ್ರ ಮೋದಿಯನ್ನು ಘೋಷಣೆ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಯಾವುದೆ ತೊಂದರೆಯಾಗುವುದಿಲ್ಲ.
ಇತ್ತೀಚೆಗೆ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಕೆಜೆಪಿ, ಬಿಜೆಪಿ, ಜೆಡಿಎಸ್ ಒಂದಾದರೂ ಕಾಂಗ್ರೆಸ್ ಗೆಲವು ಸಾಧಿಸಿತ್ತು. ಇದೇ ಗೆಲವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲೂ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಂಪನಿ ರದ್ದು ಸ್ವಾಗತ
ಸಿ ಕೆಟಗರಿಯ 51 ಗಣಿ ಕಂಪನಿಗಳ ಗಣಿ ಗುತ್ತಿಗೆ ರದ್ದುಪಡಿಸಿರುವುದನ್ನು ಸ್ವಾಗತಿಸಿದ ಅಲ್ಲಂ, ಸಿ ಕೆಟಗರಿಯಲ್ಲಿ ತಮ್ಮ ಗಣಿ ಕಂಪನಿ ಇರುವ ಬಗ್ಗೆ ಪ್ರತಿಕ್ರಿಯಿಸಿ, ತಾವು ಯಾವುದೇ ಅಕ್ರಮ ಗಣಿಗಾರಿಕೆ ಮಾಡಿಲ್ಲ, ಸಿ ಕೆಟಗರಿಯಲ್ಲಿ ತಮ್ಮ ಗಣಿ ಕಂಪನಿ ಬಂದಿರುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದ ಆದೇಶ ಬಂದ ಮೇಲೆ ಉತ್ತರಿಸುತ್ತೇನೆ. ಸಿ ಕೆಟಗರಿಯಲ್ಲಿರುವ ಎಲ್ಲ ಗಣಿ ಕಂಪನಿಗಳು ಒಳ್ಳೆಯವು, ಕೆಟ್ಟವು ಎಂದು ಹೇಳಲು ಬರುವುದಿಲ್ಲ ಎಂದು ಹೇಳುವ ಮೂಲಕ ಕೆಲ ಕಂಪನಿಗಳು ಅಕ್ರಮ ಮಾಡಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ಒತ್ತಡವಿಲ್ಲ
ಅಕ್ರಮ ಗಣಿಗಾರಿಕೆ ನಡೆಯಬಾರದು ಎಂಬುದು ಕಾಂಗ್ರೆಸ್ನ ಪ್ರಮುಖ ನಿಲುವಾಗಿರುವುದರಿಂದ ಸಿ ಕೆಟಗರಿಯಲ್ಲಿ 51 ಗಣಿ ಕಂಪನಿಗಳನ್ನು ರದ್ದುಪಡಿಸಿದ್ದಾರೆ. ಗಣಿ ಕಂಪನಿಗಳನ್ನು ರದ್ದುಪಡಿಸದಂತೆ ಕಾಂಗ್ರೆಸ್ ಸರ್ಕಾರದ ಮೇಲೆ ಯಾರು ಒತ್ತಡ ತಂದಿಲ್ಲ, ನಾನು ಇದೀಗ ನಿಜ ಹೇಳಿದರೆ ಕೋರ್ಟ್ನಲ್ಲಿ ನನಗೆ ಅನ್ಯಾಯವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಹಾನಗಲ್ ಕುಮಾರಸ್ವಾಮಿ ಜಯಂತ್ಯುತ್ಸವ ಕಾರ್ಯಕ್ರಮದ ಕುರಿತು ವಿವರ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗೋನಾಳ ವಿರೂಪಾಕ್ಷಗೌಡ ಸೇರಿದಂತೆ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

