ಮಾಧ್ಯಮ ಪಟ್ಟಿಯಿಂದ ಪಾಕ್ಷಿಕ ಹೊರಕ್ಕೆ
ಬಳ್ಳಾರಿ: ಸಿರುಗುಪ್ಪ ಪಟ್ಟಣದಿಂದ ಬಂಗ್ಲೆ ಮಲ್ಲಿಕಾರ್ಜುನ ಅವರ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ಸ್ಟಾರ್ ಆಫ್ ಬಳ್ಳಾರಿ ಕನ್ನಡ ಪಾಕ್ಷಿಕ ಪತ್ರಿಕೆಯನ್ನು ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರಿಸಿಕೊಳ್ಳಲು ನಿಯಾಮಾವಳಿಯಲ್ಲಿ ಅವಕಾಶವಿಲ್ಲ ಎಂದು ವಾರ್ತಾ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನೇತೃತ್ವದ ಜಿಲ್ಲಾ ಮಾಧ್ಯಮ ಸಮಿತಿಯು ಸ್ಟಾರ್ ಆಫ್ ಬಳ್ಳಾರಿ ಪಾಕ್ಷಿಕ ಪತ್ರಿಕೆಯು ಕ್ರಮಬದ್ಧವಾಗಿ ಪ್ರಕಟವಾಗುತ್ತಿಲ್ಲ ಎಂದು ನೀಡಿದ ವರದಿಯನುಸಾರ ವಾರ್ತಾ ಇಲಾಖೆ ನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ. ನಿರ್ದೇಶಕರ ಆದೇಶದಿಂದಾಗಿ ಕೆಲ ಪತ್ರಿಕೆಗಳಿಗೆ ಎಚ್ಚರಿಕೆಯನ್ನು ನೀಡಿದಂತಾಗಿದೆ.
ಜಾಹಿರಾತು ಇಲ್ಲ
ಸರ್ಕಾರದ ಜಾಹಿರಾತು ನಿಯಮಾವಳಿ ಪ್ರಕಾರ ಮಾಧ್ಯಮ ಪಟ್ಟಿಯಲ್ಲಿ ಇಲ್ಲದ ದಿನ ಪತ್ರಿಕೆ, ವಾರ ಪತ್ರಿಕೆ, ಪಾಕ್ಷಿಕ, ಮಾಸ ಪತ್ರಿಕೆಗಳಿಗೆ ಸರ್ಕಾರಿ ಜಾಹಿರಾತುಗಳನ್ನು ಬಿಡುಗಡೆ ಮಾಡುವುದು ಸರ್ಕಾರದ ಆದೇಶದ ಉಲ್ಲಂಘನೆಯಾಗುತ್ತದೆ. ವಾರ್ತಾ ಇಲಾಖೆ ಮೂಲಕ ಜಾಹಿರಾತುಗಳನ್ನು ಬಿಡುಗಡೆಗೊಳಿಸಬೇಕು. ಜಿಲ್ಲೆಯಲ್ಲಿ ಮಾಧ್ಯಮ ಪಟ್ಟಿಯಲ್ಲಿರುವ 5 ಜಿಲ್ಲಾ ಮಟ್ಟದ ದಿನ ಪತ್ರಿಕೆಗಳು ಹಾಗೂ ರಾಜ್ಯ ಮಟ್ಟದ ದಿನಪತ್ರಿಕೆಗಳು ಹೊರತುಪಡಿಸಿ ಮಾಧ್ಯಮ ಪಟ್ಟಿಯಲ್ಲಿ ಮಾನ್ಯತೆ ಇಲ್ಲದ ಪತ್ರಿಕೆಗಳಿಗೆ ಜಾಹಿರಾತು ನೀಡಿದರೆ ಆ ಜಾಹಿರಾತಿನ ವೆಚ್ಚವನ್ನು ಅಧಿಕಾರಿಗಳು ತಮ್ಮ ವೇತನದಲ್ಲಿ ಪಾವತಿಸಬೇಕಾಗುತ್ತದೆ. ಹಲವಾರು ಇಲಾಖೆಗಳು ಮಾಧ್ಯಮ ಪಟ್ಟಿಯಲ್ಲಿ ಇಲ್ಲದ ಪತ್ರಿಕೆಗಳಿಗೆ ಜಾಹಿರಾತು ನೀಡಿ, ಮಹಾಲೇಖಪಾಲಕರ ಆಕ್ಷೇಪಣೆಗೊಳಪಟ್ಟಿದ್ದಾರೆ.
ನಿಯಮಾಳಿಯಾನುಸಾರ ಸ್ಟಾರ್ ಆಫ್ ಬಳ್ಳಾರಿ ಪತ್ರಿಕೆ ಸೇರಿದಂತೆ ಮಾಧ್ಯಮ ಪಟ್ಟಿಯಲ್ಲಿ ಇಲ್ಲದ ಯಾವುದೇ ಪತ್ರಿಕೆಗಳಿಗೆ ಗ್ರಾಮ ಪಂಚಾಯಿತಿ ಸೇರಿದಂತೆ ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಗಳು, ನಿಗಮ ಮಂಡಳಿಗಳು ಇಂತಹ ಪತ್ರಿಕೆಗಳಿಗೆ ಜಾಹಿರಾತುಗಳನ್ನು ನೀಡಲು ಅವಕಾಶವಿರುವುದಿಲ್ಲ. ಸರ್ಕಾರಿ ಆದೇಶದನ್ವಯ ಇಲಾಖೆಗಳ ಅಧಿಕಾರಿಗಳು ಮಾಧ್ಯಮ ಪಟ್ಟಿಯಲ್ಲಿ ಇಲ್ಲದ ಪತ್ರಿಕೆಗಳಿಗೆ ನೇರವಾಗಿ ಜಾಹಿರಾತುಗಳನ್ನು ಬಿಡುಗಡೆಗೊಳಿಸದೇ ವಾರ್ತಾ ಇಲಾಖೆ ಮೂಲಕವೇ ಬಿಡುಗಡೆಗೊಳಿಸುವಂತೆ ವಾರ್ತಾ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

